ADVERTISEMENT

ಹುಬ್ಬಳ್ಳಿ ಗಲಭೆ | ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ: ಸಿ.ಟಿ.ಮಂಜುನಾಥ್‌

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2024, 15:20 IST
Last Updated 13 ಅಕ್ಟೋಬರ್ 2024, 15:20 IST
ಸಿ.ಟಿ.ಮಂಜುನಾಥ್‌
ಸಿ.ಟಿ.ಮಂಜುನಾಥ್‌   

ಮಂಡ್ಯ: ಹುಬ್ಬಳ್ಳಿಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಗಲಭೆ ನಡೆಸಿದ ಪ್ರಕರಣವನ್ನು ವಾಪಸ್‌ ಪಡೆಯುವ ಮೂಲಕ ಮುಸ್ಲಿಮರ  ಓಲೈಕೆಗೆ ಮುಂದಾಗುವುದನ್ನು ಬಿಟ್ಟು ಪ್ರಾಮಾಣಿಕವಾಗಿ ತನಿಖೆ ನಡೆಸಬೇಕು. ಆ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಬೇಕು ಎಂದು ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್‌ ಆಗ್ರಹಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಗಲಭೆಗೆ ಕಾರಣರಾದವರ ಮೇಲಿನ ಪ್ರಕರಣ ವಾಪಸ್‌ ಪಡೆದು ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸುವ ಯತ್ನ ಸರಿಯಲ್ಲ, ಯಾವುದೇ ಸಮುದಾಯದವರಾಗಲಿ ಶಾಂತಿಗೆ ಭಂಗ ತಂದರೆ ತಕ್ಕ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದ್ಧಾರೆ.

ಹುಬ್ಬಳ್ಳಿಯಲ್ಲಿ 2022ರ ಏಪ್ರಿಲ್ 16ರಂದು ನಡೆದ ಕೋಮು ಗಲಭೆಯಲ್ಲಿ 155ಕ್ಕೂ ಹೆಚ್ಚು ಜನರ ಗುಂಪೊಂದು ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿತ್ತು, ಈ ಗಲಭೆಯಲ್ಲಿ ಇಬ್ಬರು ಪೊಲೀಸರಿಗೆ ಗಂಭೀರ ಗಾಯಗಳಾಗಿತ್ತು. ಹಲವು ಪೊಲೀಸ್ ವಾಹನಗಳು ಜಖಂಗೊಂಡಿದ್ದವು. ಇಂತಹ ಘಟನೆಗೆ ಕಾರಣರಾಗಿದ್ದ ಆರೋಪಿಗಳ ಮೇಲೆ ಹೂಡಲಾಗಿದ್ದ ಪ್ರಕರಣವನ್ನು ವಾಪಸ್‌ ಪಡೆಯುವ ನಿರ್ಧಾರ ಮಾಡಿರುವ ರಾಜ್ಯ ಸಚಿವ ಸಂಪುಟದ ನಿರ್ಧಾರ ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ADVERTISEMENT

ಕಾವೇರಿ, ಮಹದಾಯಿ, ಕೃಷ್ಣ ನದಿ ಸೇರಿದಂತೆ ನಾಡಿನ ನೆಲ, ಜಲ, ಭಾಷೆ ವಿಚಾರವಾಗಿ ಹೋರಾಟ ಮಾಡಿರುವ ಹೋರಾಟಗಾರರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ವಾಪಸ್‌ ಪಡೆಯಬೇಕೇ ವಿನಃ, ಗಲಭೆ ಮಾಡಿರುವವರ ಮೇಲಿನ ಪ್ರಕರಣಗಳನ್ನು ಹಿಂದಕ್ಕೆ ಪಡೆಯಬಾರದು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.