ADVERTISEMENT

ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ವೇ: ಗಣಂಗೂರು ಟೋಲ್‌ನಲ್ಲಿ ಶುಲ್ಕ ಸಂಗ್ರಹ ಆರಂಭ

​ಪ್ರಜಾವಾಣಿ ವಾರ್ತೆ
Published 1 ಜುಲೈ 2023, 4:20 IST
Last Updated 1 ಜುಲೈ 2023, 4:20 IST
   

ಮಂಡ್ಯ: ಕನ್ನಡಪರ ಸಂಘಟನೆಗಳ ಪ್ರತಿಭಟನೆ ನಡುವೆಯೂ ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ವೇ ಗಣಂಗೂರು ಟೋಲ್‌ನಲ್ಲಿ ಪೂರ್ವ ನಿಗದಿಯಂತೆ ಶನಿವಾರ ಬೆಳಿಗ್ಗೆ 8ರಿಂದ ಶುಲ್ಕ ಸಂಗ್ರಹ ಆರಂಭವಾಯಿತು.

‘ಸರ್ವೀಸ್‌ ರಸ್ತೆ ಪೂರ್ಣಗೊಳಿಸದೇ, ಮೂಲ ಸೌಲಭ್ಯ ಒದಗಿಸದೇ ಈ ಟೋಲ್‌ನಲ್ಲಿ ಶುಲ್ಕ ಸಂಗ್ರಹಿಸಬಾರದು’ ಎಂದು ಒತ್ತಾಯಿಸಿ ಕನ್ನಡಪರ ಸಂಘಟನೆಗಳ ಸದಸ್ಯರು ಟೋಲ್‌ ಕೇಂದ್ರದ ಬಳಿ ಪ್ರತಿಭಟಿಸಿದರು. ಹೆದ್ದಾರಿ ಪ್ರಾಧಿಕಾರದ ವಿರುದ್ಧ ಘೋಷಣೆ ಕೂಗಿದರು.

‘ಸರ್ವೀಸ್‌ ರಸ್ತೆ ಕಾಮಗಾರಿ ಪೂರ್ಣಗೊಳ್ಳು ವವರೆಗೂ ಟೋಲ್‌ ಸಂಗ್ರಹ ಮಾಡದಂತೆ ನೋಡಿಕೊಳ್ಳಬೇಕು’ ಎಂದು ಸ್ಥಳೀಯ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದ್ದರು. ಈ ನಡುವೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಟೋಲ್‌ ಸಂಗ್ರಹ ಪ್ರಕ್ರಿಯೆ ಆರಂಭಿಸಿದರು.

ADVERTISEMENT

ಸುರಕ್ಷತೆ ಪರಿಶೀಲನೆ ದಿನವೇ ದರೋಡೆ!

ಮದ್ದೂರು: ಪೊಲೀಸರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು, ಎಕ್ಸ್‌ಪ್ರೆಸ್‌ ವೇ ಸಮೀಪ ಕಾರು ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದ ಮಡಿಕೇರಿ ತಾಲ್ಲೂಕು ಅರಪಟ್ಟು ಗ್ರಾಮದ ಮುತ್ತಪ್ಪ ಅವರನ್ನು ಶುಕ್ರವಾರ ತಡರಾತ್ರಿ ಬೆದರಿಸಿ 75 ಗ್ರಾಂ. ಚಿನ್ನಾಭರಣ ಕಸಿದು ಪರಾರಿಯಾಗಿದ್ದಾರೆ.

ಸಂಚಾರ ವಿಭಾಗದ ಎಡಿಜಿಪಿ ಅಲೋಕ್‌ಕುಮಾರ್‌ ಅವರು ಹೆದ್ದಾರಿ ಸುರಕ್ಷತೆ ಪರಿಶೀಲನೆ ನಡೆಸಿದ ಕೆಲವೇ ಗಂಟೆಗಳಲ್ಲಿ ಈ ಘಟನೆ ನಡೆದಿದೆ.

ಒಳಾಂಗಣ ವಿನ್ಯಾಸಕರಾದ ಮುತ್ತಪ್ಪ ಬೆಂಗಳೂರಿನ ಆಸ್ಪತ್ರೆಗೆ ತೆರಳಿ ಇನೋವಾ ಕಾರ್‌ನಲ್ಲಿ ಮರಳುತ್ತಿದ್ದರು. ನಸುಕಿನ 2.30ರ ವೇಳೆಗೆ ಹೊರವಲಯದ ಐಶ್ವರ್ಯ ಶಾಲೆಯ ಬಳಿ ಸರ್ವೀಸ್‌ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದರು.

‘ನಾವು ಪೊಲೀಸರು’ ಎಂದು ಪರಿಚಯಿಸಿಕೊಂಡ ಮೂವರು, ‘ನೀವು ಮದ್ಯಪಾನ ಮಾಡಿದ್ದೀರೋ ಇಲ್ಲವೋ ಎಂಬುದನ್ನು ಚೆಕ್ ಮಾಡಬೇಕಿದೆ’ ಎಂದು ತಿಳಿಸಿದ್ದಾರೆ. ನಂತರ ಡ್ರ್ಯಾಗನ್‌ ತೋರಿಸಿ ಬೆದರಿಸಿದ್ದಾರೆ. ಮುತ್ತಪ್ಪ ಪ್ರತಿರೋಧ ವ್ಯಕ್ತಪಡಿಸಿದಾಗ ಕತ್ತು, ಕೈಗೆ ತಿವಿದಿದ್ದಾರೆ. ಕೊರಳಲ್ಲಿದ್ದ 60 ಗ್ರಾಂ. ಚಿನ್ನದ ಸರ ಹಾಗೂ 15 ಗ್ರಾಂ. ಚಿನ್ನದ ತಾಯಿತವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ‘ಗಸ್ತಿನಲ್ಲಿದ್ದ ನಾವು ಸ್ಥಳಕ್ಕೆ ಬಂದಾಗ ಈ ವಿಷಯ ತಿಳಿಯಿತು. ನಾವೇ ಮುತ್ತಪ್ಪ ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದೆವು’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.