ADVERTISEMENT

ಬೇಬಿ ಬೆಟ್ಟದಲ್ಲಿ ಗಣಿಗಾರಿಕೆಯಿಂದ ಕೆಆರ್‌ಎಸ್ ಅಣೆಕಟ್ಟೆಗೆ ಅಪಾಯ: ರೈತ ಸಂಘ ಆತಂಕ

ಸಿದ್ದು ಆರ್.ಜಿ.ಹಳ್ಳಿ
Published 2 ಜುಲೈ 2024, 2:45 IST
Last Updated 2 ಜುಲೈ 2024, 2:45 IST
<div class="paragraphs"><p>ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಬೇಬಿ ಬೆಟ್ಟದಲ್ಲಿ ನಡೆಸಿದ ಕಲ್ಲು ಗಣಿಗಾರಿಕೆ ದೃಶ್ಯ (ಸಂಗ್ರಹ ಚಿತ್ರ)</p></div>

ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಬೇಬಿ ಬೆಟ್ಟದಲ್ಲಿ ನಡೆಸಿದ ಕಲ್ಲು ಗಣಿಗಾರಿಕೆ ದೃಶ್ಯ (ಸಂಗ್ರಹ ಚಿತ್ರ)

   

ಮಂಡ್ಯ: ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರ ಪ್ರಬಲ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಪಾಂಡವಪುರ ತಾಲ್ಲೂಕಿನ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ನಡೆಸುವ ಸಂಬಂಧ ಜುಲೈ 3ರಂದು ‘ಪರೀಕ್ಷಾರ್ಥ ಸ್ಫೋಟ’ (ಟ್ರಯಲ್‌ ಬ್ಲಾಸ್ಟ್‌) ನಡೆಸಲು ಸದ್ದಿಲ್ಲದೆ ಸಿದ್ಧತೆ ಮಾಡಿಕೊಂಡಿದೆ.

ಈ ಹಿಂದೆಯೂ ಮೂರು ಬಾರಿ ‘ಪರೀಕ್ಷಾರ್ಥ ಸ್ಫೋಟ’ ನಡೆಸಲು ಜಿಲ್ಲಾಡಳಿತ ಪ್ರಯತ್ನಿಸಿತ್ತು. ರೈತ ಸಂಘ, ಪ್ರಗತಿಪರ ಸಂಘಟನೆ ಮತ್ತು ಪರಿಸರ ಪ್ರೇಮಿಗಳ ತೀವ್ರ ಪ್ರತಿಭಟನೆ, ಆಕ್ರೋಶಕ್ಕೆ ಮಣಿದ ಜಿಲ್ಲಾಡಳಿತ ಹಿಂದೆ ಸರಿದಿತ್ತು. 

ADVERTISEMENT

‘ಬೇಬಿ ಬೆಟ್ಟದ ಗಣಿಗಾರಿಕೆಯಿಂದ 5 ಕಿ.ಮೀ. ಅಂತರದಲ್ಲಿರುವ ಕೃಷ್ಣರಾಜ ಸಾಗರ (ಕೆ.ಆರ್‌.ಎಸ್‌) ಅಣೆಕಟ್ಟೆಗೆ ಅಪಾಯವಿದ್ದರೂ ‘ಗಣಿ ಲಾಬಿ’ಗೆ ಮಣಿದ ಸರ್ಕಾರ ‘ಪರೀಕ್ಷಾರ್ಥ ಸ್ಫೋಟ’ಕ್ಕೆ ಮುಂದಾಗಿದೆ. ಈ ಹಿಂದೆ ಸ್ಫೋಟ ನಡೆಸಲು ಪುಣೆಯಿಂದ ಬಂದಿದ್ದ ತಜ್ಞರ ತಂಡದ ವಿರುದ್ಧ ಮೂರು ಬಾರಿ ‘ಗೋ ಬ್ಯಾಕ್‌ ಚಳವಳಿ’ ನಡೆಸಿದ್ದವು. ಈಗ 4ನೇ ಬಾರಿಗೆ ಜಿಲ್ಲೆಗೆ ತಂಡ ಬಂದಿದ್ದು, ಇದರಲ್ಲಿ ಗಣಿ ಮಾಲೀಕರ ಕೈವಾಡವಿದೆ’ ಎಂದು ರೈತ ಮುಖಂಡರು ಆರೋಪಿಸಿದ್ದಾರೆ. 

ಹೈಕೋರ್ಟ್‌ ಆದೇಶ ಉಲ್ಲಂಘನೆ?: ‘ಕೆಆರ್‌ಎಸ್‌ ಅಣೆಕಟ್ಟೆಯ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ಹಾಗೂ ಗಣಿಗಾರಿಕೆಗೆ ಸಂಬಂಧಿತ ಇತರ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಹೈಕೋರ್ಟ್‌ ಆದೇಶಿಸಿದೆ. ಅದನ್ನು ಉಲ್ಲಂಘಿಸುವವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಜಿಲ್ಲಾಡಳಿತ ಮತ್ತು ಸಂಬಂಧಿತ ಇಲಾಖೆಗಳಿಗೆ ಸೂಚಿಸಲಾಗಿದೆ’ ಎಂದು ಮಂಡ್ಯದ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಇದೇ ವರ್ಷ ಜ.29ರಂದು ‘ಸಾರ್ವಜನಿಕ ಪ್ರಕಟಣೆ’ ನೀಡಿತ್ತು. ಈಗ ಆದೇಶ ಉಲ್ಲಂಘಿಸಿ, ‘ಪರೀಕ್ಷಾರ್ಥ ಸ್ಫೋಟ’ ನಡೆಸಲು ಅನುಮತಿ ಕೊಟ್ಟವರು ಯಾರು? ಎಂಬುದು ರೈತ ಸಂಘದವರ ಪ್ರಶ್ನೆ.

‘2021ರಲ್ಲಿ ಅಂದಿನ ಜಿಲ್ಲಾಧಿಕಾರಿ ಕೆಆರ್‌ಎಸ್‌ ಜಲಾಶಯದ ಸುತ್ತಮುತ್ತ 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಿ ಆದೇಶ ಹೊರಡಿಸಿದ್ದರು. ಅದನ್ನು ಪ್ರಶ್ನಿಸಿ 17 ಕ್ರಷರ್ ಮಾಲೀಕರು ಹೈಕೋರ್ಟ್‌ ಮೊರೆ ಹೋಗಿದ್ದರು. 2022ರಲ್ಲಿ ನ್ಯಾಯಾಲಯ ಜಲಾಶಯ ಸುರಕ್ಷತಾ ಸಮಿತಿಯ ವರದಿ ಆಧರಿಸಿ ಪರೀಕ್ಷಾರ್ಥ ಸ್ಫೋಟ ನಡೆಸುವಂತೆ ಸೂಚಿಸಿದೆ’ ಎಂಬುದು ಜಿಲ್ಲಾಡಳಿತದ ವಾದ. 

ಕಾಣದ ಕೈಗಳ ಕೈವಾಡ: ‘ಪರೀಕ್ಷಾರ್ಥ ಸ್ಫೋಟ’ ನಡೆಸಲು ನ್ಯಾಯಾಲಯ ಆದೇಶಿಸಿಲ್ಲ. ಸರ್ಕಾರದ ಪರ ವಕೀಲರೇ ಒಪ್ಪಿಕೊಂಡು, ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾರೆ. ಅದನ್ನೇ ಮುಂದಿಟ್ಟುಕೊಂಡು ‘ಟ್ರಯಲ್‌ ಬ್ಲಾಸ್ಟ್‌’ ನಡೆಸಲು ಮುಂದಾಗಿರುವ ಕ್ರಮ ಖಂಡನೀಯ. ‘ಕಾಣದ ಕೈ’ಗಳು ಗಣಿಗಾರಿಕೆ ಪರವಾಗಿ ಕೆಲಸ ಮಾಡುತ್ತಿವೆ. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಒತ್ತಡಕ್ಕೆ ಮಣಿದಿದ್ದಾರೆ’ ಎಂದು ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆರೋಪಿಸಿದ್ದಾರೆ. 

‘ಅಣೆಕಟ್ಟು ಸುರಕ್ಷತಾ ಕಾಯ್ದೆ 2021’ ಅನ್ನು ರಾಜ್ಯದಲ್ಲೂ ಜಾರಿಗೆ ತರಬೇಕು. ‘ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ’ ಗಣಿಗಾರಿಕೆ ನಿಷೇಧಿಸಿ ನೀಡಿದ ವರದಿ ಜಾರಿಗೊಳಿಸಬೇಕು. ‘ಜಲಾಶಯ ಸುರಕ್ಷತಾ ಸಮಿತಿ’ಗೆ ಪರಿಣತರನ್ನು ನೇಮಿಸಿ, ಸಮಿತಿಯ ನಿರ್ಣಯವನ್ನು ಸರ್ಕಾರ ಪಾಲಿಸಬೇಕು. ಅಟಾರ್ನಿ ಜನರಲ್‌ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಕೆಆರ್‌ಎಸ್ ಅಣೆಕಟ್ಟೆಗೆ ಆಗುವ ಅಪಾಯದ ಬಗ್ಗೆ ಮನವರಿಕೆ ಮಾಡಿಕೊಡಬೇಕು’ ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ. 

ಜುಲೈ 3ರಂದು ‘ಪರೀಕ್ಷಾರ್ಥ ಸ್ಫೋಟ’ ಸರ್ಕಾರದ ಕ್ರಮಕ್ಕೆ ಹಿಂದಿನಿಂದಲೂ ತೀವ್ರ ವಿರೋಧ ಗಣಿಗಾರಿಕೆ ನಿಷೇಧಿಸಿ ನೀಡಿದ ವರದಿ ಜಾರಿಗೆ ಒತ್ತಾಯ
ಬೇಬಿ ಬೆಟ್ಟದಲ್ಲಿ ‘ಪರೀಕ್ಷಾರ್ಥ ಸ್ಫೋಟ’ ನಡೆಸಿ ವರದಿ ನೀಡುವಂತೆ ಹೈಕೋರ್ಟ್‌ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಜುಲೈ 3ರಂದು ತಜ್ಞರ ತಂಡದಿಂದ ಪ್ರಯೋಗಕ್ಕೆ ಸಿದ್ಧತೆ ನಡೆಸಿದ್ದೇವೆ
ಎಚ್‌.ಎಲ್‌. ನಾಗರಾಜ್‌ ಹೆಚ್ಚುವರಿ ಜಿಲ್ಲಾಧಿಕಾರಿ ಮಂಡ್ಯ
‘ಟ್ರಯಲ್‌ ಬ್ಲಾಸ್ಟ್‌’ ವಿರೋಧಿಸಿ ‘ಗಣಿಗಾರಿಕೆ ನಿಲ್ಲಿಸಿ ಕನ್ನಂಬಾಡಿ ರಕ್ಷಿಸಿ’ ಎಂಬ ಧ್ಯೇಯದೊಂದಿಗೆ ಕೆ.ಆರ್‌.ಎಸ್‌. ಕಾವೇರಿ ನೀರಾವರಿ ನಿಗಮದ ಕಚೇರಿ ಮುಂದೆ ಇದೇ ಜುಲೈ 2ರಂದು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ
ಎ.ಎಲ್‌. ಕೆಂಪೂಗೌಡ ಜಿಲ್ಲಾ ಘಟಕದ ಅಧ್ಯಕ್ಷ ರೈತಸಂಘ
‘ವಿಚಾರಣೆಗೂ ಮುನ್ನವೇ ಸ್ಫೋಟಕ್ಕೆ ಸಂಚು’
‘2007ರಿಂದ ಬೇಬಿಬೆಟ್ಟದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಆರಂಭವಾಯಿತು. 2017ರಲ್ಲಿ ಜಿಲ್ಲಾಧಿಕಾರಿ ಮತ್ತು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ ನಂತರ 2018ರಲ್ಲಿ ಗಣಿಗಾರಿಕೆ ಸ್ಥಗಿತಗೊಂಡಿತು. 48 ಕ್ರಷರ್‌ ಮಾಲೀಕರ ವಿರುದ್ಧ ಪಾಂಡವಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ಕ್ರಷರ್‌ ಮಾಲೀಕರು ಸಲ್ಲಿಸಿರುವ ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ಜುಲೈ 5ರಂದು ನಡೆಯಬೇಕಿದೆ. ಅದಕ್ಕೂ ಮುನ್ನವೇ ತರಾತುರಿಯಲ್ಲಿ ‘ಪರೀಕ್ಷಾರ್ಥ ಸ್ಫೋಟ’ ನಡೆಸಲು ಮುಂದಾಗಿರುವುದು ಏತಕ್ಕೆ?’ ಈ ಹಿಂದೆ ನಡೆದ ಗಣಿಗಾರಿಕೆಯಿಂದ ಕೆ.ಆರ್‌.ಎಸ್‌. ಅಣೆಕಟ್ಟೆಯ ಸೈಜುಗಲ್ಲುಗಳು ಉದುರಿಬಿದ್ದಿದ್ದವು. ಇಷ್ಟಾದರೂ ಅಧಿಕಾರಿಗಳು ಬುದ್ಧಿ ಕಲಿತಿಲ್ಲ’ ಎಂದು ಸಾಮಾಜಿಕ ಹೋರಾಟಗಾರ ರವೀಂದ್ರ ಆಕ್ರೋಶ ವ್ಯಕ್ತಪಡಿಸಿದರು.
‘ಶಿಲಾಪದರ ಕಂಪಿಸಿದರೆ ಅಣೆಕಟ್ಟೆಗೆ ಧಕ್ಕೆ’
ಶಿಲಾ ಪದರದ ಮೇಲೆ ಕೆ.ಆರ್‌.ಎಸ್‌ ಅಣೆಕಟ್ಟೆ ನಿಂತಿದೆ. ಗಣಿಗಾರಿಕೆಯಿಂದ ಶಿಲಾ ಪದರ ಕಂಪಿಸುತ್ತದೆ. ಕಂಪನದ ಅಲೆಗಳು ಅಣೆಕಟ್ಟೆಗೆ ಧಕ್ಕೆ ತರುತ್ತವೆ. ‘ಟ್ರಯಲ್‌ ಬ್ಲಾಸ್ಟ್‌’ ನಡೆಸಿ ಅಣೆಕಟ್ಟೆಗೆ ಧಕ್ಕೆ ಇಲ್ಲ ಎಂದು ಸಾಬೀತು ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಗಣಿಗಾರಿಕೆಗೆ ಅನುಮತಿ ಸಿಕ್ಕರೆ ನೂರಾರು ಅಡಿ ಆಳದ ಕಂದಕ ತೋಡುತ್ತಾರೆ. ಈಗ ಅಣೆಕಟ್ಟೆಯಲ್ಲಿ 96 ಅಡಿ ನೀರಿದ್ದು ‘ಹೈಡ್ರಾಲಿಕ್‌ ಪ್ರೆಷರ್‌’ ಇದೆ. ಈ ಸಮಯದಲ್ಲಿ ಪರೀಕ್ಞಾರ್ಥ ಸ್ಫೋಟ ನಡೆಸುವುದು ಸರಿಯಲ್ಲ. ಇದೊಂದು ಕಣ್ಣೊರೆಸುವ ತಂತ್ರ’ ಎಂದು ನಿವೃತ್ತ ಹಿರಿಯ ಭೂವಿಜ್ಞಾನಿ ಎಚ್‌.ಟಿ. ಬಸವರಾಜಪ್ಪ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.