ADVERTISEMENT

ನಗರಸಭೆಯಾಗಿ ಮದ್ದೂರು ಪುರಸಭೆ ಮೇಲ್ದರ್ಜೆಗೆ

ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಶಾಸಕ ಉದಯ್

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 13:58 IST
Last Updated 19 ಜೂನ್ 2024, 13:58 IST
ಮದ್ದೂರು ಪುರಸಭೆಯನ್ನು ನಗರಸಭೆಗೆ ಮೇಲ್ದರ್ಜೆಗೇರಿಸುವ ಸಂಬಂಧ ಬುಧವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ  ಶಾಸಕ ಉದಯ್ ಮಾತನಾಡಿದರು. ಗ್ರೇಡ್ 2 ತಹಶೀಲ್ದಾರ್ ಸೋಮಶೇಖರ್, ತಾ.ಪಂ. ಇಒ ಸಂದೀಪ್, ಸಹಾಯಕ ಕೃಷಿ ನಿರ್ದೇಶಕ ಪರಮೇಶ್, ಎಡಿಎಲ್‌ಆರ್ ಶ್ರೀನಿವಾಸ್ ಮೂರ್ತಿ ಪಾಲ್ಗೊಂಡಿದ್ದರು
ಮದ್ದೂರು ಪುರಸಭೆಯನ್ನು ನಗರಸಭೆಗೆ ಮೇಲ್ದರ್ಜೆಗೇರಿಸುವ ಸಂಬಂಧ ಬುಧವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ  ಶಾಸಕ ಉದಯ್ ಮಾತನಾಡಿದರು. ಗ್ರೇಡ್ 2 ತಹಶೀಲ್ದಾರ್ ಸೋಮಶೇಖರ್, ತಾ.ಪಂ. ಇಒ ಸಂದೀಪ್, ಸಹಾಯಕ ಕೃಷಿ ನಿರ್ದೇಶಕ ಪರಮೇಶ್, ಎಡಿಎಲ್‌ಆರ್ ಶ್ರೀನಿವಾಸ್ ಮೂರ್ತಿ ಪಾಲ್ಗೊಂಡಿದ್ದರು   

ಮದ್ದೂರು: ಬಹು ನಿರೀಕ್ಷಿತ ಪಟ್ಟಣ ಪುರಸಭೆಯನ್ನು ನಗರಸಭೆಯನ್ನಾಗಿಸುವ ಸಂಬಂಧ ಎಲ್ಲಾ ರೀತಿಯ ಕ್ರಮಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಶಾಸಕ ಉದಯ್ ತಿಳಿಸಿದರು.

ಬುಧವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸುವ ವಿಷಯದ ಕುರಿತು ಕರೆಯಲಾಗಿದ್ದ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಲೋಕಸಭಾ ಚುನಾವಣೆ ಹಾಗೂ ನೀತಿ ಸಂಹಿತೆ ಇದ್ದ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳು ತಡವಾಗಿತ್ತು. ಆದರೆ ಈ ಪ್ರಕ್ರಿಯೆಗಳನ್ನು ತ್ವರಿತಗತಿಯಲ್ಲಿ ಮಾಡುವ ಸಲುವಾಗಿ ಮೊದಲ ಬಾರಿಗೆ ತಾಲ್ಲೂಕು ಮಟ್ಟದ ಸಂಬಂಧಪಟ್ಟ ಪುರಸಭೆ, ಕೃಷಿ ಇಲಾಖೆ, ಕಂದಾಯ ಇಲಾಖೆ, ತಾಲ್ಲೂಕು ಪಂಚಾಯಿತಿ, ಭೂಮಾಪನ ಸೇರಿದಂತೆ ಇತರ ಇಲಾಖೆಯ ಅಧಿಕಾರಿಗಳೊಂದಿಗೆ ಈ ದಿನ ಸಭೆ ಕರೆದು ಚರ್ಚಿಸಲಾಯಿತು ಎಂದರು.

ADVERTISEMENT

ಪಟ್ಟಣ ಸೇರಿದಂತೆ ಪಟ್ಟಣಕ್ಕೆ ಹೊಂದಿಕೊಂಡಿರುವ ನಾಲ್ಕು ಗ್ರಾ.ಪಂ.ಗಳಾದ ಗೊರವನಹಳ್ಳಿ, ಚಾಮನಹಳ್ಳಿ, ಸೋಮನಹಳ್ಳಿ ಹಾಗೂ ಗೆಜ್ಜಲಗೆರೆ ಗ್ರಾ.ಪಂ ವ್ಯಾಪ್ತಿಯನ್ನು ಸೇರಿಕೊಳ್ಳುವ ಸಂಬಂಧ ಪುರಸಭಾ ಮುಖ್ಯಾಧಿಕಾರಿ ಕರಿಬಸವಯ್ಯ ಮತ್ತು ನಗರಾಭಿವೃದ್ದಿ ಸಚಿವಾಲಯದೊಂದಿಗೆ ಪತ್ರ ವ್ಯವಹಾರ ಮಾಡಿದ್ದು, ಸೋಮನಹಳ್ಳಿ ಹೊರತುಪಡಿಸಿ ಉಳಿದ ಎಲ್ಲಾ ಪಂಚಾಯಿತಿಗಳು ಈಗಾಗಲೇ ಒಪ್ಪಿಗೆ ಸೂಚಿಸಿದ್ದು, ಸೋಮನಹಳ್ಳಿ ಗ್ರಾ.ಪಂ ಕೂಡ ಇಷ್ಟರಲ್ಲೇ ಸಭೆ ಕರೆದು ಒಪ್ಪಿಗೆ ನೀಡುವ ವಿಶ್ವಾಸ ಇದೆ ಎಂದರು.

ಸ್ಥಳೀಯ ಪುರಸಭೆಯು ನಗರಸಭೆಯಾಗಲು ಜನಸಂಖ್ಯೆಯ ಪರಿಮಿತಿ ಕನಿಷ್ಠ 50 ಸಾವಿರ ಇರಬೇಕಾದ ಅಗತ್ಯವಿರುವುದರಿಂದ ಅದಕ್ಕೆ ಅನುಗುಣವಾಗಿ, ನಕ್ಷೆ ತಯಾರಿಸುವುದು, ಗಡಿ ಗೊತ್ತುಪಡಿಸುವುದು, ಜನ ಸಂಖ್ಯೆಗೆ ಅನುಗುಣವಾಗಿ ಯಾವ ಹಳ್ಳಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಸೇರಿದಂತೆ ನಗರಸಭೆಯನ್ನಾಗಿ ಮೇಲ್ದರ್ಜೆ ಗೇರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಶಾಸಕರು ಎಂದು ತಾಕೀತು ಮಾಡಿದರು.

ನಂತರ ಮಾತನಾಡಿದ ಅವರು, ಕೂಡಲೇ ಪಟ್ಟಣದ ಪೇಟೆಬೀದಿಯ ರಸ್ತೆಯನ್ನು 100 ಅಡಿಗೆ ವಿಸ್ತರಣೆ ಮಾಡಲಾಗುವುದು. ಈ ಬಗ್ಗೆ ಸರ್ವೆ ಮಾಡಿಸಿ, ಪುರಸಭೆಯ ಒತ್ತುವರಿಯಾಗಿರುವ ಸ್ಥಳವನ್ನು ತೆರವುಗೊಳಿಸಲಾಗುವುದು.ರಸ್ತೆಗೆ ಬೇಕಾಗಿರುವ ಜಾಗಕ್ಕೆ ಸರ್ಕಾರದಿಂದ ಪರಿಹಾರ ಕೊಡಿಸಲಾಗುವುದು ಎಂದರು. ಅಷ್ಟೇ ಅಲ್ಲದೇ ಕೆಮ್ಮಣ್ಣು ನಾಲಾ ಅಭಿವೃದ್ಧಿ ಕೆಲಸಗಳ ಬಗ್ಗೆ ಟೆಂಡರ್ ಪ್ರಕ್ರಿಯೆಯು ಇಷ್ಟರಲ್ಲೇ ಆಗಲಿದೆ ಎಂದರು.

ಈಗಾಗಲೇ ತಾಲೂಕಿನಲ್ಲಿ ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಸ್ಥಳಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಪಟ್ಟಣ ವ್ಯಾಪ್ತಿಯಲ್ಲೂ ಒತ್ತುವರಿ ಮಾಡಿಕೊಂಡಿರುವ ಪುರಸಭೆಯ ವ್ಯಾಪ್ತಿಯ ಸರ್ಕಾರಿ ಜಾಗಗಳನ್ನು ತೆರವುಗೊಳಿಸಲಾಗುವುದು ಎಂದರು.

ಬಿಎಂಐಸಿಪಿ ಯೋಜನೆಯಿಂದ ಪಟ್ಟಣದ ಅಭಿವೃದ್ಧಿ ಕಾರ್ಯಗಳಿಗೆ ಹಿಂದಿನಿಂದಲೂ ತಡೆ ಉಂಟಾಗುತ್ತಿದೆ, ಆದ್ದರಿಂದ ಇದನ್ನು ಪಟ್ಟಣದ ವ್ಯಾಪ್ತಿಯಿಂದ ತೆರವು ಗೊಳಿಸಿ, ವಾಪಾಸ್ ತೆಗೆದುಕೊಳ್ಳುವಂತೆ ಸರ್ಕಾರದ ಗಮನಕ್ಕೆ ತರಲಾಗಿದ್ದು, ಇಷ್ಟರಲ್ಲೇ ಆ ಕೆಲಸ ವಾಗಲಿದೆ ಎಂದರು.

ಸಭೆಯಲ್ಲಿ ತಾಪಂ ಇಒ ಸಂದೀಪ್, ಪುರಸಭಾ ಮುಖ್ಯಾಧಿಕಾರಿ ಕರಿಬಸವಯ್ಯ, ಎಡಿಎಲ್ಆರ್ ಶ್ರೀನಿವಾಸ್ ಮೂರ್ತಿ, ಗ್ರೇಡ್-2 ತಹಸೀಲ್ದಾರ್ ಸೋಮಶೇಖರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.