ಆನೇಕಲ್: ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಮಟೆ ಚಳವಳಿ ನಡೆಸಿದರು. ತಮಿಳುನಾಡಿನ ಹೊಸೂರನ್ನು ಕರ್ನಾಟಕಕ್ಕೆ ಸೇರಿಸಬೇಕು. ಆನೇಕಲ್‌ವರೆಗೆ ಮೆಟ್ರೊ ವಿಸ್ತರಣೆ ಮಾಡಬೇಕು ಮತ್ತು ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಬೇಕು ಎಂಬ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಮಾತನಾಡಿ, ನೂರಾರು ವರ್ಷಗಳ ಹಿಂದೆ ತಮಿಳುನಾಡಿನ ಹೊಸೂರಿನಲ್ಲಿ ಕನ್ನಡ ಭಾಷಿಕರು ಹೆಚ್ಚಿದ್ದರು. ಹಾಗಾಗಿ ಹೊಸೂರು ಕರ್ನಾಟಕಕ್ಕೆ ಸೇರಬೇಕಾಗಿತ್ತು. ಈ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಕಾಳಜಿ ವಹಿಸಿಲ್ಲ. ಕನ್ನಡ ರಾಜ್ಯೋತ್ಸವ ಸಮೀಪಿಸುತ್ತಿದೆ. ನವೆಂಬರ್ 1 ನಂತರ ತಮಿಳುನಾಡಿನ ಮುಖ್ಯಮಂತ್ರಿಯೊಂದಿಗೆ ರಾಜ್ಯ ಸರ್ಕಾರ ಸಭೆ ನಡೆಸಿ ತಮಿಳುನಾಡಿನ ಹೊಸೂರು, ತಾಳವಾಡಿ ಕರ್ನಾಟಕಕ್ಕೆ ಸೇರಿಸಬೇಕು ಎಂದು ಆಗ್ರಹಿಸಿದರು.
ಆನೇಕಲ್‌ವರೆಗೆ ಮೆಟ್ರೊ ವಿಸ್ತರಣೆ ಮಾಡಬೇಕು. ಆನೇಕಲ್–ಬೆಂಗಳೂರು ನಗರಕ್ಕೆ ಸಮೀಪದಲ್ಲಿದೆ. ಮೆಟ್ರೊ ವಿಸ್ತರಣೆ ಮಾಡದಿದ್ದರೆ ಚಳವಳಿ ಪ್ರಾರಂಭಿಸಲಾಗುವುದು. ಗಡಿನಾಡಿನಲ್ಲಿ ಕನ್ನಡ ಪ್ರೇಮ ಹೆಚ್ಚಾಗಿದೆ. ಇಲ್ಲಿ ಎಲ್ಲ ರಾಜ್ಯದವರು ವಾಸವಾಗಿದ್ದಾರೆ. ಇಲ್ಲಿಯ ಕೈಗಾರಿಕೆ ಪ್ರದೇಶಗಳು ಕನ್ನಡಿಗರಿಗೆ ನ್ಯಾಯ ದೊರಕಿಸಲಿಲ್ಲ. ಕನ್ನಡಿಗರ ಉದ್ಯೋಗ ನೀಡಬೇಕು. ಕೈಗಾರಿಕೆಗಳಿಗೆ ಲಕ್ಷಾಂತರ ಎಕರೆ ಜಮೀನು ನೀಡಲಾಗಿದೆ. ನೀರು, ಸಂಪನ್ಮೂಲ ಕೊಡಲಾಗಿದೆ. ಪ್ರತಿ ಕಾರ್ಖಾನೆಯಲ್ಲಿ ಕನ್ನಡಿಗರಿಗೆ ಕಡ್ಡಾಯವಾಗಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.
ಸರ್ಕಾರ ಈ ಬಗ್ಗೆ ಸಮೀಕ್ಷೆ ನಡೆಸಬೇಕು. ಸಮಗ್ರ ಅಧ್ಯಯನ ನಡೆಸುವ ಮೂಲಕ ಕನ್ನಡಿಗರ ಸ್ಥಿತಿಗತಿ ತಿಳಿಸಬೇಕು. ಕರ್ನಾಟಕದಲ್ಲಿನ ಅಂಗಡಿ ಮಳಿಗೆ ಕಡ್ಡಾಯವಾಗಿ ನಾಮಫಲಕದಲ್ಲಿ 90ರಷ್ಟು ಕನ್ನಡ ಬಳಸಬೇಕು. ಇಲ್ಲವಾದಲ್ಲಿ ನವೆಂಬರ್ 15ರ ನಂತರ ಬೋರ್ಡ್ ಕಿತ್ತು ಸುಡಲಾಗುವುದು ಎಂದರು.
ಮುಖಂಡ ಸನಾವುಲ್ಲಾ ಮಾತನಾಡಿ, ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಹಾಗಾಗಿ ಇಲ್ಲಿಯ ಕಾರ್ಖಾನೆಗಳು ಕನ್ನಡಗರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಿದೆ. ಆನೇಕಲ್ ನಗರ ಹೆಚ್ಚಿನ ಅಭಿವೃದ್ಧಿಯಾಗುತ್ತಿದ್ದು ಮೆಟ್ರೊ ಅವಶ್ಯ ಇದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ, ಯುವಕರಿಗೆ ಹೆಚ್ಚಿನ ಉಪಯೋಗವಾಗಲಿದೆ ಎಂದರು.
ಕನ್ನಡ ವಾಟಾಳ್ ಚಳವಳಿ ಪಕ್ಷದ ಉಪಾಧ್ಯಕ್ಷ ಚುಟುಕು ಶಂಕರ್, ಮುಖಂಡರಾದ ಸಂಪತ್ ಕುಮಾರ್, ಅಪ್ಸರ್ ಅಲಿಖಾನ್, ಶ್ರೀನಿವಾಸರೆಡ್ಡಿ, ನಾರಾಯಣಮೂರ್ತಿ, ಇಲಿಯಾಸ್ ಉಲ್ಲಖಾನ್, ಅಸ್ಲಂ ಪಾಷಾ,ಸೈಯದ್ ರೆಹಮತ್ ಇದ್ದರು.
ಕನ್ನಡಿಗರಿಗೆ ಸಿಗದ ಉದ್ಯೋಗ
ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಕನ್ನಡಿಗರ ಸಮಸ್ಯೆ ಬಗ್ಗೆ ಗಮನ ಸೆಳೆಯಲು ಆನೇಕಲ್‌ನಿಂದ ಚಳವಳಿ ರೂಪಿಸಲಾಗಿದೆ. ಬೆಂಗಳೂರು ನಗರದಲ್ಲಿ ಮುಂದಿನ ಚಳವಳಿ ನಡೆಯಲಿದೆ. ರಾಜ್ಯದಾದ್ಯಂತ ಕನ್ನಡ ಉಳಿಸಿ ಬೆಳೆಸಿ ಚಳವಳಿಯು ನಡೆಯಬೇಕು. ಕನ್ನಡ ಬಗ್ಗೆ ಜಾಗೃತಿ ಮೂಡಿಸುವುದೇ ಗುರಿಯಾಗಿದೆ. ಕನ್ನಡಿಗರಿಗೆ ಉದ್ಯೋಗ ನೀಡಬಾರದು ಎಂದು ಹಲವು ಉದ್ಯಮಿಗಳು ಆಗ್ರಹಿಸುತ್ತಾರೆ. ಆದರೆ ಇದು ಒಳ್ಳೆಯ ಬೆಳವಣಿಗೆಯಲ್ಲ. ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಬೇಕು. ಉದ್ಯಮಿಗಳು ಕನ್ನಡಿಗರಿಗೆ ಉದ್ಯೋಗ ನೀಡುವ ಮೂಲಕ ಕನ್ನಡಿಗರ ಋಣ ತೀರಿಸಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.