ADVERTISEMENT

‘ಮುತ್ಸದ್ಧಿ ನಾಯಕರಾಗಿ ಬೆಳೆದ ಶ್ರೀನಿವಾಸ ಪ್ರಸಾದ್‌’

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2024, 14:49 IST
Last Updated 30 ಏಪ್ರಿಲ್ 2024, 14:49 IST
ಮಂಡ್ಯ ಸುಭಾಷ್ ನಗರದ ಬುದ್ಧ ಭಾರತ ಫೌಂಡೇಷನ್ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಸದಸ್ಯರು ವಿ.ಶ್ರೀನಿವಾಸ ಪ್ರಸಾದ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು
ಮಂಡ್ಯ ಸುಭಾಷ್ ನಗರದ ಬುದ್ಧ ಭಾರತ ಫೌಂಡೇಷನ್ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಸದಸ್ಯರು ವಿ.ಶ್ರೀನಿವಾಸ ಪ್ರಸಾದ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು   

ಮಂಡ್ಯ: ‘ಯುವಕರಾಗಿದ್ದಾಗಲೇ ಉತ್ಸಾಹಿಯಾಗಿದ್ದ ಶ್ರೀನಿವಾಸ ಪ್ರಸಾದ್‌ ಅವರು ರಾಜಕಾರಣದಲ್ಲಿ ಮುತ್ಸದ್ಧಿ ನಾಯಕರಾಗಿ ಬೆಳೆದರು. ಆ ಮೂಲಕ ರಾಜ್ಯ, ರಾಷ್ಟ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದರು’ ಎಂದು ಶ್ರೀನಿವಾಸ ಪ್ರಸಾದ್‌ ಅವರ ಒಡನಾಡಿ ಬಿ.ಬಸವರಾಜು ಹೇಳಿದರು.

ಸುಭಾಷ್ ನಗರದ ಬುದ್ಧ ಭಾರತ ಫೌಂಡೇಷನ್ ಕಚೇರಿಯಲ್ಲಿ ಮಂಗಳವಾರ ನಡೆದ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಸ್ವಾಭಿಮಾನಿಯಾಗಿದ್ದ ಶ್ರೀನಿವಾಸ ಪ್ರಸಾದ್ ಅವರು ರಾಜಕಾರಣಕ್ಕೆ ಬರಲು ಮಂಡ್ಯ ಜನರು ಆರ್ಥಿಕ ಶಕ್ತಿ ತುಂಬಿದರು. 1973ರಲ್ಲಿ ನಾನು ಮತ್ತು ಪ್ರಸಾದ್ ಕಾಲೇಜು ಗೆಳೆಯರಾಗಿದ್ದೆವು. ಅವರ ತಂದೆ ಒಂದು ಪ್ರಿಂಟಿಂಗ್‌ ಯಂತ್ರ ಇಟ್ಟುಕೊಂಡಿದ್ದರು. ಅಲ್ಲಿ ಶ್ರೀನಿವಾಸ್‌ ಪ್ರಸಾದ್ ಕೆಲಸ ಮಾಡುತ್ತಿರಲಿಲ್ಲ. ಅವರು ಸ್ವತಂತ್ರ ಅಭ್ಯರ್ಥಿಯಾಗಿ ರಾಜಕಾರಣ ಪ್ರವೇಶಿಸಿಸಲು ಪ್ರೇರಣೆ ನೀಡಿ, ಠೇವಣಿ ಹಣವನ್ನು ನಾವೇ ಕಟ್ಟಿದೆವು’ ಎಂದರು.

ADVERTISEMENT

‘ವೀರೇಂದ್ರ ಪಾಟೀಲ ಮತ್ತು ರಾಮಕೃಷ್ಣ ಹೆಗಡೆ ಅವರು ಶೋಷಿತ ಸಮಾಜದ ಮುಖಂಡರು ಯಾರೂ ಇಲ್ಲ ಎಂದು ಶ್ರೀನಿವಾಸ ಪ್ರಸಾದ್‌ ಅವರನ್ನು ತಮ್ಮ ಜೊತೆ ಕರೆದುಕೊಂಡರು. ಆ ನಂತರ ಅವರು ಯುವ ನಾಯಕರಾಗಿ ಹೊರಹೊಮ್ಮಿದರು. ಶಾಸಕರಾಗಿ, ಸಚಿವರಾಗಿ, ಸಂಸದರಾಗಿ ಕೆಲಸ ಮಾಡಿದರು’ ಎಂದರು.

ಬುದ್ಧ ಭಾರತ ಫೌಂಡೇಷನ್‌ ಅಧ್ಯಕ್ಷ, ವಕೀಲ ಜೆ.ರಾಮಯ್ಯ ಮಾತನಾಡಿ ‘ಕಳೆದ 5 ದಶಕಗಳಿಂದಲೂ ಶ್ರೀನಿವಾಸ ಪ್ರಸಾದ್‌ ಅವರು ಶೋಷಿತ ಸಮುದಾಯದ ಜನಪ್ರಿಯ ನಾಯಕರಾಗಿದ್ದರು. ತಮ್ಮ ಜೀವಿತಾವಧಿಯಲ್ಲಿ ಎಲ್ಲಿಯೂ ಕಪ್ಪು ಚುಕ್ಕೆ ಇಲ್ಲದಂತೆ ಜೀವನ ಮತ್ತು ರಾಜಕಾರಣ ನಡೆಸಿದರು. ಈಗ ಅವರು ನಮ್ಮಿಂದ ದೂರವಾಗಿರುವುದು ಮಾನವ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿರುತ್ತದೆ’ ಎಂದರು.

‘ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ತಮ್ಮದೇ ಆದ ವ್ಯಕ್ತಿತ್ವ ಬೆಳೆಸಿಕೊಂಡು, ಸಂವಿಧಾನದ ತತ್ವಗಳಾದ ನ್ಯಾಯ, ಸ್ವತಂತ್ರ, ಸಮಾನತ, ಸಹೋದರತ್ವಗಳ ಜೊತೆ ಜೀವನ ಸಾಗಿಸಿ, ಸರ್ವರಿಗೂ ನ್ಯಾಯ ನೀಡಿದ್ದಾರೆ. ಇವರು ಆದರ್ಶಗಳು ಮುಂದಿನ ಪೀಳಿಗೆಗೆ ದಾರಿದೀಪವಾಗಬೇಕು’ ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಎಂಜಿನಿಯರ್‌ ಮಹದೇವಸ್ವಾಮಿ, ಕರವೇ ಮುಖಂಡ ಅಶೋಕ್, ವಕೀಲ ಸಿ.ಎಲ್. ಶಿವಕುಮಾರ್, ಕುಮಾರ್, ಮುಸ್ಲಿಂ ಮುಖಂಡ ಅಮ್ಜದ್ ಪಾಷಾ, ದಸಂಸ ನಾಯಕ ವೆಂಕಟಗಿರಿಯಯ್ಯ, ಅನಿಲ್ ಕುಮಾರ್, ಅಭಿಗೌಡ, ಬೊಮ್ಮಯ್ಯ , ಮೋಹನ್ ಕುಮಾರ್, ನಾಗರಾಜ್ ಅಂಬೇಡ್ಕರ್, ಡಾ.ಯೋಗೇಂದ್ರ ಕುಮಾರ್, ಬಿ.ಪಿ ಪ್ರಕಾಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.