ADVERTISEMENT

ವೈರಮುಡಿ: ಕಲಾವಿದರ ಗೌರವಧನಕ್ಕೂ ಹಣವಿಲ್ಲ

ಮೂರು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮ ರದ್ದು, ಒಂದೆಡೆ ಅನವಶ್ಯ ಖರ್ಚು, ಇನ್ನೊಂದೆಡೆ ಕೊರತೆ

ಎಂ.ಎನ್.ಯೋಗೇಶ್‌
Published 11 ಮಾರ್ಚ್ 2022, 20:00 IST
Last Updated 11 ಮಾರ್ಚ್ 2022, 20:00 IST
ಮೇಲುಕೋಟೆ ವೈರಮುಡಿ ಉತ್ಸವ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪು.ತಿ.ನ ಕಲಾಮಂದಿರ ಸಿದ್ಧಗೊಳ್ಳುತ್ತಿರುವುದು
ಮೇಲುಕೋಟೆ ವೈರಮುಡಿ ಉತ್ಸವ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪು.ತಿ.ನ ಕಲಾಮಂದಿರ ಸಿದ್ಧಗೊಳ್ಳುತ್ತಿರುವುದು   

ಮಂಡ್ಯ: ವೈರಮುಡಿ ಬ್ರಹ್ಮೋತ್ಸವದ ಅಂಗವಾಗಿ ಮೇಲುಕೋಟೆಯಲ್ಲಿ ಆಯೋಜಿಸಲಾಗಿರುವ ಸಾಂಸ್ಕೃತಿಕ ಕಾರ್ಯಕ್ರಮ ಗೊಂದಲದ ಗೂಡಾಗಿದೆ. ಕಲಾವಿದರಿಗೆ ಹಣ ಕೊಡಲು ಹಣವಿಲ್ಲ ಎನ್ನುತ್ತಿರುವ ಅಧಿಕಾರಿಗಳು ಮೂರು ದಿನಗಳ ಕಾರ್ಯಕ್ರಮವನ್ನೇ ರದ್ದು ಮಾಡಿರುವುದು ಆಕ್ರೋಶಕ್ಕೆ ಗುರಿಯಾಗಿದೆ.

‘ಕಳೆದೆರಡು ವರ್ಷಗಳಿಂದ ಕೋವಿಡ್‌ ಕಾರಣಕ್ಕೆ ಸರಳವಾಗಿ ನಡೆದಿದ್ದ ವೈರಮುಡಿ ಉತ್ಸವ ಈ ಬಾರಿ ವೈಭವಯುತವಾಗಿ ನಡೆಯಲಿದ್ದು ಮುಖ್ಯಮಂತ್ರಿ ಭಾಗವಹಿಸುತ್ತಿದ್ದಾರೆ’ ಎಂದು ಮೇಲುಕೋಟೆ ಶಾಸಕ ಸಿ.ಎಸ್‌.ಪುಟ್ಟರಾಜು ಹೇಳುತ್ತಾರೆ. ಆದರೆ ಅಧಿಕಾರಿ ವರ್ಗ ‘ಕಲಾವಿದರ ಗೌರವಧನಕ್ಕೂ ಹಣ ಇಲ್ಲ’ ಎಂದು ಹೇಳುತ್ತಿರುವುದು ವೈರುಧ್ಯಕ್ಕೆ ಕಾರಣವಾಗಿದೆ.

ಇದೇ ಮೊದಲ ಬಾರಿಗೆ ವೈರಮುಡಿ ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಮಾರ್ಚ್‌ 9ರಿಂದ 21ರವರೆಗೂ ಕಾರ್ಯಕ್ರಮ ಆಯೋಜಿಸಿ, ಕಲಾವಿದರನ್ನು ಕಾಯ್ದಿರಿಸಿ, ಆಹ್ವಾನ ಪತ್ರಿಕೆಯನ್ನೂ ಮುದ್ರಣ ಮಾಡಲಾಗಿತ್ತು. ಆದರೆ, ಅನುದಾನ ಕೊರತೆಯ ಕಾರಣ ನೀಡಿ ಏಕಾಏಕಿ ಮಾರ್ಚ್‌ 9, 20, 21 ಮೂರು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮ ರದ್ದು ಮಾಡಿ 6 ದಿನಗಳಿಗೆ ಸೀಮಿತಗೊಳಿಸಲಾಗಿದೆ.

ADVERTISEMENT

ರದ್ದುಗೊಂಡಿರುವ 3 ದಿನಗಳಲ್ಲಿ ಜಿಲ್ಲೆಯ ಹಲವು ಕಲಾವಿದರು ಕಾರ್ಯಕ್ರಮ ನೀಡಬೇಕಾಗಿತ್ತು. ಈಗ ಯಾವುದೇ ಮುನ್ಸೂಚನೆ ನೀಡದೇ ಕಾರ್ಯಕ್ರಮ ರದ್ದುಗೊಳಿಸಿರುವ ಕಾರಣ ಕಲಾವಿದರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘2 ಕಿ.ಮೀ.ವರೆಗೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ, ಅನಾವಶ್ಯಕವಾಗಿ ಹಣ ಚೆಲ್ಲಲಾಗುತ್ತಿದೆ. ಐತಿಹಾಸಿಕ ಉತ್ಸವವನ್ನು ರಾಜಕೀಯ ಶಕ್ತಿ ಪ್ರದರ್ಶನದ ವೇದಿಕೆ ಮಾಡಿಕೊಳ್ಳಲಾಗಿದೆ. ಆದರೆ ಬಡ ಕಲಾವಿದರ ಗೌರವಧನಕ್ಕೆ ಅನುದಾನ ಇಲ್ಲವೇ’ ಎಂದು ಕಲಾವಿದರು ಪ್ರಶ್ನಿಸಿದ್ದಾರೆ.

‘ಕೋವಿಡ್‌ ಪರಿಸ್ಥಿತಿಯಲ್ಲಿ ಕಾರ್ಯಕ್ರಮಗಳಿಲ್ಲದೆ ಕಂಗಾಲಾಗಿದ್ದೆವು. ಸಿಕ್ಕ ಒಂದು ಕಾರ್ಯಕ್ರಮವನ್ನೂ ರದ್ದು ಮಾಡಲಾಗಿದೆ. ಜಗಮಗಿಸುವ ದೀಪಾಲಂಕಾರದಲ್ಲಿ ಒಂದಿಷ್ಟು ಕಡಿಮೆ ಮಾಡಿದ್ದರೂ ಕಲಾವಿದರಿಗೆ ಗೌರವಧನ ಕೊಡಬಹುದಾಗಿತ್ತು. ಅಧಿಕಾರಿಗಳು, ರಾಜಕಾರಣಿಗಳು ನಮ್ಮ ಮೇಲೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ಗಮಕ ಕಲಾವಿದ ಸಿ.ಪಿ.ವಿದ್ಯಾಶಂಕರ್‌ ಬೇಸರ ವ್ಯಕ್ತಪಡಿಸಿದರು.

ವೈರಮುಡಿ ವಿಷಯದಲ್ಲಿ ಅಧಿಕಾರಿಗಳು ಅನುಮಾನಾಸ್ಪದವಾಗಿ ನಡೆದುಕೊಳ್ಳುತ್ತಿದ್ದಾರೆ. ಹಣ ಎಷ್ಟು ಬಿಡುಗಡೆಯಾಗಿದೆ ಎಂಬ ಬಗ್ಗೆಯೂ ಸ್ಪಷ್ಟತೆ ಇಲ್ಲವಾಗಿದೆ. ಒಮ್ಮೆ ₹ 2 ಕೋಟಿ ಎಂದರೆ, ಮತ್ತೊಮ್ಮೆ ₹ 3 ಕೋಟಿ ಎಂದು ಹೇಳುತ್ತಿದ್ದಾರೆ. ‘ಪಾರದರ್ಶಕ ಚಟುವಟಿಕೆ ಇಲ್ಲವಾಗಿದ್ದು ಉತ್ಸವದಲ್ಲಿ ಅಧಿಕಾರಿಗಳ ಆಟ ಜೋರಾಗಿದೆ’ ಎಂದು ದೇವಾಲಯದ ಸಿಬ್ಬಂದಿಯೇ ಆರೋಪಿಸುತ್ತಾರೆ.

ಸದ್ಯ ಮುಜರಾಯಿ ಇಲಾಖೆಯಿಂದ ₹ 2 ಕೋಟಿ, ಪ್ರವಾಸೋದ್ಯಮ ಇಲಾಖೆಯಿಂದ ₹ 25 ಲಕ್ಷ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ₹ 10 ಲಕ್ಷ, ಲೋಕೋಪಯೋಗಿ ಇಲಾಖೆಯಿಂದ ₹ 50 ಲಕ್ಷ ಬಿಡುಗಡೆಯಾಗಿರುವ ಮಾಹಿತಿ ಇದೆ. ಆದರೆ ಇದನ್ನು ಅಧಿಕಾರಿಗಳು ಸ್ಪಷ್ಟವಾಗಿ ಹೇಳದ ಕಾರಣ ಅನುಮಾನಕ್ಕೆ ಕಾರಣವಾಗಿದೆ.

‘ಐತಿಹಾಸಿಕ ಉತ್ಸವಕ್ಕೆ ಕನಿಷ್ಠ ಒಂದು ಸಮಿತಿಯನ್ನೂ ರಚಿಸಿಲ್ಲ. ಕಾರ್ಯಕ್ರಮಗಳ ನಿರ್ವಹಣೆಯೂ ಸರಿಯಾಗಿಲ್ಲ. ಯಾರಿಗೂ ಆಹ್ವಾನ ಪತ್ರಿಕೆಯನ್ನೇ ತಲುಪಿಸಿಲ್ಲ’ ಎಂದು ಕಲಾವಿದ ರಮೇಶ್‌ ಬೇಸರ ಹೇಳಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳು ಪು.ತಿ.ನ ಟ್ರಸ್ಟ್‌ ವೇದಿಕೆಯಲ್ಲಿ ನಡೆಯುತ್ತಿವೆ. ಮುಖ್ಯಮಂತ್ರಿ ಬರುತ್ತಿರುವ ಕಾರಣ ಇನ್ನೊಂದು ಪ್ರಧಾನ ವೇದಿಕೆ ನಿರ್ಮಾಣ ನಡೆಯುತ್ತಿದೆ. ಇಲ್ಲಿ ಸಿನಿಮಾ ನಟರು, ಗಾಯಕರು ಕಾರ್ಯಕ್ರಮ ನೀಡುವ ನಿರೀಕ್ಷೆ ಇದೆ.

‘ಸ್ಥಳೀಯ ಕಲಾವಿದರನ್ನು ಕಡೆಗಣಿಸಿ ಹೆಚ್ಚಿನ ಹಣ ಕೊಟ್ಟು ಸಿನಿಮಾ ಕಲಾವಿದರನ್ನು ಕರೆತರಲಾಗುತ್ತಿದೆ. ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮ ಮಾಡಲಾಗುತ್ತಿದೆ’ ಎಂದು ಸ್ಥಳೀಯರು ಆರೋಪಿಸಿದ್ದಾರೆ.

***

ಮಾಹಿತಿ ನೀಡಲು ಹಿಂದೇಟು

ವೈರಮುಡಿ ಉತ್ಸವದ ಗೊಂದಲಗಳ ಬಗ್ಗೆ ಮಾತನಾಡಲು ಅಧಿಕಾರಿಗಳು ಹಿಂದೇಟು ಹಾಕುತ್ತಾರೆ, ಒಂದು ರೀತಿಯ ಭಯ ವ್ಯಕ್ತಪಡಿಸುತ್ತಾರೆ. ‘ಈ ವಿಚಾರದಲ್ಲಿ ನಮ್ಮನ್ನು ಏನೂ ಕೇಳಬೇಡಿ, ನಾವು ಯಾವ ಹೇಳಿಕೆಗಳನ್ನೂ ಕೊಡುವುದಿಲ್ಲ’ ಎಂದು ಉತ್ಸವದ ಜವಾಬ್ದಾರಿ ಹೊತ್ತಿರುವ ಪಾಂಡವಪುರ ಉಪ ವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ತಿಳಿಸಿದರು.

*****

ಯಾವುದಕ್ಕೂ ಟೆಂಡರ್‌ ಇಲ್ಲ?

‘ಪ್ರತಿ ವರ್ಷ ದೀಪಾಲಂಕಾರ, ಬೆಳಕು, ಧ್ವನಿ ಸೇರಿದಂತೆ ವಿವಿಧ ಚಟುವಟಿಕೆಗೆ ಟೆಂಡರ್‌ ಆಹ್ವಾನಿಸಲಾಗುತ್ತಿತ್ತು. ಆದರೆ ಈ ಬಾರಿ ಯಾವುದಕ್ಕೂ ಟೆಂಡರ್‌ ಮಾಡಿಲ್ಲ, ಇದಕ್ಕೆ ಅಧಿಕಾರಿಗಳೇ ಉತ್ತರ ಕೊಡಬೇಕು’ ಎಂದು ಹೆಸರು ಹೇಳಲಿಚ್ಛಿಸದ ದೇವಾಲಯದ ಸಿಬ್ಬಂದಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.