ಮೇಲುಕೋಟೆ (ಮಂಡ್ಯ): ವಿಶ್ವವಿಖ್ಯಾತ ಮೇಲುಕೋಟೆ ಚೆಲುವನಾರಾಯಣಸ್ವಾಮಿ ವೈರಮುಡಿ ಉತ್ಸವ ಶನಿವಾರ ನಡೆಯಲಿದ್ದು ಶ್ರೀಕ್ಷೇತ್ರಕ್ಕೆ ರಾಜ್ಯ, ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಬಂದಿದ್ದಾರೆ.
ಮಾರ್ಚ್ 27ರಂದೇ ‘ಅಂಕುರಾರ್ಪಣ’ ಧಾರ್ಮಿಕ ಕಾರ್ಯಕ್ರಮದ ಮೂಲಕ 10 ದಿನಗಳ ವೈರಮುಡಿ ಉತ್ಸವಕ್ಕೆ ಚಾಲನೆ ನೀಡಲಾಗಿದೆ. ಶನಿವಾರ ರಾತ್ರಿ 8.30ಕ್ಕೆ ಚೆಲುವನಾರಾಯಣಸ್ವಾಮಿಗೆ ವಜ್ರಖಚಿತ ಕಿರೀಟ ಧಾರಣೆ ಮಾಡಿಲಾಗುತ್ತದೆ, ನಂತರ ಉತ್ಸವ ಮೂರ್ತಿಯ ಮೆರವಣಿಗೆ ರಾತ್ರಿಯಿಡೀ ನಡೆಯಲಿದೆ.
ಮಂಡ್ಯದ ಜಿಲ್ಲಾ ಖಜಾನೆ ಕಚೇರಿಯಲ್ಲಿರುವ ವೈರಮುಡಿ ತಿರುವಾಭರಣ ಪೆಟ್ಟಿಗೆಯನ್ನು ಬೆಳಿಗ್ಗೆ 6 ಗಂಟೆಗೆ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ತೆರೆಯಲಾಗುತ್ತದೆ. ಲಕ್ಷ್ಮಿಜನಾರ್ಧನ ದೇವಾಲಯದಲ್ಲಿ ಪ್ರಥಮ ಪೂಜೆ ಸಲ್ಲಿಸಿ ಆಭರಣದ ಪೆಟ್ಟಿಗೆಯನ್ನು ಮೇಲುಕೋಟೆಗೆ ಕೊಂಡೊಯ್ಯಲಾಗುತ್ತದೆ. ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಪೆಟ್ಟಿಗೆ ಕೊಂಡೊಯ್ಯಲಾಗುತ್ತದೆ.
ಮಾರ್ಗದುದ್ದಕ್ಕೂ ವಿವಿಧ ಹಳ್ಳಿಗಳಲ್ಲಿರುವ ವೈರಮುಡಿ ಮಂಟಪದಲ್ಲಿ ಪೆಟ್ಟಿಗೆಯನ್ನು ಇರಿಸಲಾಗುತ್ತದೆ, ಆಯಾ ಗ್ರಾಮಗಳ ಜನರು ಆಭರಣಗಳಿಗೆ ಪೂಜೆ ಸಲ್ಲಿಸಲಿದ್ದಾರೆ.
ನಂತರ ಚೆಲುವನಾರಾಯಣಸ್ವಾಮಿ ಆಸ್ಥಾನೀಕರು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಮ್ಮುಖದಲ್ಲಿ ಆಭರಣಗಳನ್ನು ತೆರೆದು ಕಿರೀಟವನ್ನಾಗಿ (ಪರ್ಕಾವಣೆ) ಜೋಡಿಸಲಿದ್ದಾರೆ. ರಾತ್ರಿ 8.30ಕ್ಕೆ ವೈರಮುಡಿ ಧರಿಸಿದ ಚೆಲುವನಾರಾಯಣಸ್ವಾಮಿ ಭಕ್ತರಿಗೆ ದರ್ಶನ ನೀಡಲಿದ್ದಾನೆ.
ಉತ್ಸವದ ಅಂಗವಾಗಿ ಮೇಲುಕೋಟೆ ಕ್ಷೇತ್ರ ದೀಪಾಲಂಕಾರದಲ್ಲಿ ಕಂಗೊಳಿಸುತ್ತಿದೆ. ಹೋಟೆಲ್, ವಸತಿ ಗೃಹಗಳು ಭಕ್ತರಿಂದ ತುಂಬಿ ತುಳುಕುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.