ADVERTISEMENT

ಸಮಗ್ರ ಕೃಷಿ ವಿವಿಯಾಗಿ ವಿ.ಸಿ.ಫಾರಂ?

ಜಿಲ್ಲಾ ಉಸ್ತುವಾರಿ ಸಚಿವರಿಂದ ಪ್ರಸ್ತಾವ ಸಲ್ಲಿಕೆ, ಬಜೆಟ್‌ನಲ್ಲಿ ಘೋಷಿಸುವರೇ ಸಿಎಂ?

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2024, 19:55 IST
Last Updated 8 ಫೆಬ್ರುವರಿ 2024, 19:55 IST
ಮಂಡ್ಯ ವಿ.ಸಿ.ಫಾರಂನಲ್ಲಿರುವ ಸಂಶೋಧನಾ ಘಟಕ
ಮಂಡ್ಯ ವಿ.ಸಿ.ಫಾರಂನಲ್ಲಿರುವ ಸಂಶೋಧನಾ ಘಟಕ    

ಮಂಡ್ಯ: ತಾಲ್ಲೂಕಿನ ಐತಿಹಾಸಿಕ ವಿ.ಸಿ.ಫಾರಂಗೆ ಮೈಸೂರು ವಿಭಾಗದ 8 ಜಿಲ್ಲೆಗಳನ್ನೊಳಗೊಂಡಂತೆ ‘ಸಮಗ್ರ ಕೃಷಿ ವಿಶ್ವವಿದ್ಯಾಲಯ’ ರೂಪ ನೀಡಬೇಕು ಎಂಬ ಪ್ರಸ್ತಾವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಕೆಯಾಗಿದ್ದು, ರಾಜ್ಯ ಬಜೆಟ್‌ನಲ್ಲಿ ಅದು ಸಾಕಾರಗೊಳ್ಳಲಿದೆ ಎಂಬ ನಿರೀಕ್ಷೆ ಈ ಭಾಗದ ರೈತ ಮುಖಂಡರು ಹಾಗೂ ಕೃಷಿ ವಿಜ್ಞಾನಿಗಳಲ್ಲಿದೆ.

ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ತಲಾ ಒಂದೊಂದು ಕೃಷಿ ವಿಶ್ವ ವಿದ್ಯಾಲಯಗಳಿವೆ. 9 ಜಿಲ್ಲೆಗಳನ್ನೊಳಗೊಂಡ ಬೆಂಗಳೂರು ವಿಭಾಗದಲ್ಲಿ ಬೆಂಗಳೂರು ಕೃಷಿ ವಿವಿ (ಜಿಕೆವಿಕೆ), 7 ಜಿಲ್ಲೆಗಳನ್ನು ಒಳಗೊಂಡ ಬೆಳಗಾವಿ ವಿಭಾಗದಲ್ಲಿ ಧಾರವಾಡ ಕೃಷಿ ವಿವಿ, 7 ಜಿಲ್ಲೆಗಳುಳ್ಳ ಕಲಬುರಗಿ ವಿಭಾಗದಲ್ಲಿ ರಾಯಚೂರು ಕೃಷಿ ವಿವಿ ಇವೆ. ಜೊತೆಗೆ ಬಾಗಲಕೋಟೆ ತೋಟಗಾರಿಕೆ ವಿವಿ ಇದೆ. ಆದರೆ, 8 ಜಿಲ್ಲೆಗಳನ್ನೊಳಗೊಂಡ ಮೈಸೂರು ವಿಭಾಗದಲ್ಲಿ ಒಂದೂ ಕೃಷಿ ವಿವಿ ಇಲ್ಲದ ಕಾರಣ ಮಂಡ್ಯದ ವಿ.ಸಿ.ಫಾರಂ (ವಿಶ್ವೇಶ್ವರಯ್ಯ ಕೆನಾಲ್‌ ಫಾರ್ಮ್‌)ಗೆ ಕೃಷಿ, ತೋಟಗಾರಿಕೆ, ಅರಣ್ಯ, ಪಶುವೈದ್ಯಕೀಯ ವಿಜ್ಞಾನಗಳನ್ನು ಒಳಗೊಂಡಂತೆ ಸಮಗ್ರ ಕೃಷಿ ವಿಶ್ವವಿದ್ಯಾಲಯವನ್ನಾಗಿ ಘೋಷಣೆ ಮಾಡಬೇಕು ಎಂಬ ಒತ್ತಾಯ ಮೊದಲಿನಿಂದಲೂ ಇದೆ.

ಸದ್ಯ ವಿಸಿ.ಫಾರಂ ಬೆಂಗಳೂರು ಕೃಷಿ ವಿವಿ ಅಡಿ ನಡೆಯುತ್ತಿದೆ. 650 ಎಕರೆ ವಿಶಾಲ ಕೃಷಿ ಭೂಮಿಯ ನಡುವೆ ಅರಳಿ ನಿಂತಿರುವ ವಿಸಿ ಫಾರಂನಲ್ಲಿ ವಲಯ ಕೃಷಿ ಸಂಶೋಧನಾ ಕೇಂದ್ರ (ಸಂಶೋಧನೆ), ಕೃಷಿ ವಿಜ್ಞಾನ ಕೇಂದ್ರ (ವಿಸ್ತರಣೆ) ಹಾಗೂ ಕೃಷಿ ಮಹಾವಿದ್ಯಾಲಯ (ಬೋಧನೆ) ವಿಭಾಗಗಳಿವೆ. ಸಂಶೋಧನೆಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ವಿ.ಸಿ.ಫಾರಂ ಕಬ್ಬು, ಭತ್ತ, ಮುಸುಕಿನ ಜೋಳ, ರಾಗಿ ತಳಿ ಸಂಶೋಧನೆ, ಕೃಷಿ ಯಂತ್ರೋಪಕರಣಗಳ ಸಂಶೋಧನೆಯಲ್ಲಿ ಮುಂಚೂಣಿ ಸ್ಥಾನದಲ್ಲಿದೆ.

ADVERTISEMENT

ಕೆಆರ್‌ಎಸ್‌ ಜಲಾಶಯಕ್ಕೆ ಹತ್ತಿರವಿರುವ ವಿ.ಸಿ.ಫಾರಂ ವರ್ಷದ 365 ದಿನಗಳೂ ನೀರಾವರಿ ಸೌಲಭ್ಯ ಹೊಂದಿದೆ. ಮಂಡ್ಯ, ಮೈಸೂರು, ಚಾಮರಾಜನಗರ, ದಕ್ಷಿಣ ಕನ್ನಡ, ಹಾಸನ, ಕೊಡಗು, ಉಡುಪಿ, ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ 20 ಲಕ್ಷ ಹೆಕ್ಟೇರ್‌ ಕೃಷಿ ಭೂಮಿಗೆ ಸಂಪನ್ಮೂಲ ಒದಗಿಸುವ ಸಾಮರ್ಥ್ಯ ಹೊಂದಿದೆ. ಈ ಹಿನ್ನೆಲೆಯಲ್ಲಿ 8 ಜಿಲ್ಲೆಗಳನ್ನು ಒಳಗೊಂಡಂತೆ ಸಮಗ್ರ ಕೃಷಿ ವಿವಿ ಘೋಷಣೆ ಮಾಡಬೇಕು ಎಂದು ರೈತ ಮುಖಂಡರು ಒತ್ತಾಯಿಸುತ್ತಾರೆ.

‘ವಿ.ಸಿ. ಫಾರಂನಲ್ಲಿ ಈಚೆಗೆ ನಡೆದ ರಾಗಿ ಲಕ್ಷ್ಮಣಯ್ಯ ಸ್ಮಾರಕ ಉಪನ್ಯಾಸದಲ್ಲಿ ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ವಿವಿ ಘೋಷಣೆ ಸಂಬಂಧ ರೈತ ಮುಖಂಡರು ಹಾಗೂ ಕೃಷಿ ವಿಜ್ಞಾನಿಗಳ ಅಭಿಪ್ರಾಯ ಸಂಗ್ರಹಿಸಿದ್ದಾರೆ. ನಂತರ ಬಜೆಟ್‌ನಲ್ಲಿ ಘೋಷಣೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಅವರೇ ಪ್ರಸ್ತಾವ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ’ ಎಂದು ರೈತ ಮುಖಂಡ ಕೆ.ಬೋರಯ್ಯ ತಿಳಿಸಿದರು.

ಬಜೆಟ್‌ನಲ್ಲಿ ಸಮಗ್ರ ಕೃಷಿ ವಿವಿ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಚಲುವರಾಯಸ್ವಾಮಿ ಅವರೇ ಈಚೆಗೆ ತಿಳಿಸಿದ್ದಾರೆ.

ಐತಿಹಾಸಿಕ ಹಿನ್ನೆಲೆ: ನಗರದಿಂದ 10 ಕಿ.ಮೀ ದೂರದಲ್ಲಿರುವ ವಿ.ಸಿ.ಫಾರಂಗೆ ಐತಿಹಾಸಿಕ ಹಿನ್ನೆಲೆ ಇದೆ. ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಕನಸಸಿನ ಕೂಸಿನಂತೆ ‘ಕಬ್ಬು ಸಂಶೋಧನಾ ಕೇಂದ್ರ’ವಾಗಿ  1931ರಂದು ಆರಂಭವಾಯಿತು.

ಕೆನಡಾದ ಸ್ಯಸ್ಯ ವಿಜ್ಞಾನ ತಜ್ಞ ಲೆಸ್ಲಿ ಕೋಲ್ಮನ್‌ ಅವರ ಮುನ್ನೋಟದೊಂದಿಗೆ ವಿ.ಸಿ.ಫಾರಂ ಆಗಿ ಹೊಸ ರೂಪ ಪಡೆಯಿತು. ರಾಗಿ ಬ್ರಹ್ಮ ಎಂದೇ ಪ್ರಸಿದ್ಧಿ ಪಡೆದಿರುವ ರಾಗಿ ಲಕ್ಷ್ಮಣಯ್ಯ ಅವರು ಇಂಡಾಫ್‌ ಸರಣಿ ತಳಿಯ ಸಂಶೋಧನೆಯ ಮೂಲಕ ಕೇಂದ್ರಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದರು. ಇಂದಿಗೂ ವಿ.ಸಿ.ಫಾರಂ ತಳಿ ಸಂಶೋಧನೆಗಳು ರೈತರಿಂದ ಮೆಚ್ಚುಗೆಗೆ ಪಾತ್ರವಾಗಿವೆ.

‘ವಿವಿ ರೂಪ ನೀಡುವ ಸಂಬಂಧ ರಾಜಕೀಯ ಮುಖಂಡರ ಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಬಜೆಟ್‌ನಲ್ಲಿ ಘೋಷಣೆಯಾಗುವ ಸಾಧ್ಯತೆ ಇದ್ದು ನಾವೂ ನಿರೀಕ್ಷೆಯಲ್ಲಿದ್ದೇವೆ’ ಎಂದು ಹೆಸರು ಹೇಳಲಿಚ್ಛಿಸದ ಕೃಷಿ ವಿಜ್ಞಾನಿಯೊಬ್ಬರು ಹೇಳಿದರು.

ಸಂಶೋಧಕರ ವಿರೋಧ ಏಕೆ?

ವಿ.ಸಿ.ಫಾರಂಗೆ ಸಮಗ್ರ ಕೃಷಿ ವಿವಿ ರೂಪಕೊಡುವ ಪ್ರಸ್ತಾವಕ್ಕೆ ಫಾರಂನ ಕೆಲ ಸಂಶೋಧಕರು ಪ್ರಾಧ್ಯಾಪಕರು ವಿಜ್ಞಾನಿಗಳು ವಿರೋಧಿಸಿದ್ದಾರೆ. ಬೆಂಗಳೂರು ವಿವಿ ಅಡಿಯಲ್ಲೇ ಇರಬೇಕು ಪ್ರತ್ಯೇಕ ಸ್ಥಾನ ಬೇಡ ಎಂದು ತಿಳಿಸಿದ್ದಾರೆ. ‘ಬಹುತೇಕ ಪ್ರಾಧ್ಯಾಪಕರು ಬೆಂಗಳೂರು ಮೈಸೂರಿನಲ್ಲಿ ನೆಲೆಸಿದ್ದಾರೆ. ವಿ.ಸಿ.ಫಾರಂ ಕೃಷಿ ವಿವಿಯಾದರೆ ಮಂಡ್ಯದಲ್ಲೇ ಉಳಿಯುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ ಎಂಬ ಕಾರಣಕ್ಕೆ ಅವರು ವಿರೊಧಿಸುತ್ತಿದ್ದಾರೆ. ಅವರು ತಮ್ಮ ಮನೋಭಾವ ಬದಲಾಯಿಸಿಕೊಳ್ಳಬೇಕು’ ಎಂದು ರೈತ ಮುಖಂಡರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.