ADVERTISEMENT

₹ 200ರ ಗಡಿ ದಾಟಿದ ಬೀನ್ಸ್‌, ನುಗ್ಗೇಕಾಯಿ ಅಗ್ಗ

ಏರುತ್ತಿರುವ ತಾಪಮಾನ; ಹೂವು, ಸೊಪ್ಪು, ತರಕಾರಿ ದುಬಾರಿ, ಸಾಮಾನ್ಯರ ಜೇಬಿಗೆ ಕತ್ತರಿ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2024, 14:48 IST
Last Updated 30 ಏಪ್ರಿಲ್ 2024, 14:48 IST
ಪೇಟೆಬೀದಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಸೊಪ್ಪು, ತರಕಾರಿ
ಪೇಟೆಬೀದಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಸೊಪ್ಪು, ತರಕಾರಿ   

ಮಂಡ್ಯ: ಬಿಸಿಲಿನ ತಾಪಮಾನ ದಿನೇ ದಿನೇ ಏರುತ್ತಿದ್ದು ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗುತ್ತಿದೆ. ಮಾರುಕಟ್ಟೆಯಲ್ಲಿ ಹೂವು, ಹಣ್ಣು, ತರಕಾರಿ ಬೆಲೆಯನ್ನು ಮಾತನಾಡಿಸಲು ಸಾಧ್ಯವಾಗುತ್ತಿಲ್ಲ. ಸಾಮಾನ್ಯ ಜನರ ಜೇಬಿಗೆ ಕತ್ತರಿ ಬಿದ್ದಿದ್ದು ಅವರು ಪರಿತಪಿಸುವಂತಾಗಿದೆ.

ಮಾರುಕಟ್ಟೆಗೆ ಬೀನ್ಸ್‌ ಕೊರತೆಯಾಗಿದ್ದು ಬೆಲೆ ಏರುಗತಿಯಲ್ಲಿ ಸಾಗುತ್ತಿದೆ. ದರ ಕೇಳಿದರೆ ವರ್ತಕರು ಕಾಲು ಕೆ.ಜಿಯ ದರವನ್ನಷ್ಟೇ ಹೇಳುತ್ತಿದ್ದಾರೆ. ಕೆ.ಜಿ ₹ 200ರ ಗಟಿ ದಾಟಿದ್ದು ಸಾಮಾನ್ಯ ಗ್ರಾಹಕರು ಬೆಚ್ಚಿ ಬೀಳುವಂತಾಗಿದೆ.

ಬೇಸಿಗೆಯಲ್ಲಿ ಎಲ್ಲೆಡೆ ನುಗ್ಗೇಕಾಯಿ ಬೆಳೆ ಬಂದಿದ್ದು ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುತ್ತಿದೆ. ಹೀಗಾಗಿ ಬೆಲೆಯೂ ಕಡಿಮೆಯಾಗಿದ್ದ ಕೆ.ಜಿ ₹ 60ರಂತೆ ಮಾರಾಟವಾಗುತ್ತಿದೆ. ಗೆಡ್ಡೆಕೋಸು ಬೆಲೆ ₹ 80ಕ್ಕೆ ಮಾರಾಟವಾಗುತ್ತಿದ್ದು ದುಬಾರಿ ಎನಿಸಿದೆ.

ADVERTISEMENT

ಹೂಗಳಲ್ಲಿ ಕನಕಾಂಬರ, ಕಾಕಡ, ಮಲ್ಲಿಗೆ, ಮರಳೆ ಸೇರಿದಂತೆ ಬಹುತೇಕ ಹೂಗಳ ಬೆಲೆ ಏರಿಕೆಯಾಗಿದೆ. ಹಣ್ಣುಗಳಲ್ಲಿ ಸೇಬು ಮತ್ತು ಕಿತ್ತಳೆ ದುಬಾರಿಯಾಗಿವೆ. ಮೆಂತೆ ಸೊಪ್ಪಿನ ಬೆಲೆ ತೀವ್ರವಾಗಿ ಏರುತ್ತಿದ್ದು ಪ್ರತಿ ಕಟ್ಟು ₹ 60ರಂತೆ ಮಾರಾಟವಾಗುತ್ತಿದೆ. ಇಳಿಕೆ ಗತಿಯಲ್ಲಿದ್ದ ನಾಟಿ ಬೆಳ್ಳುಳ್ಳಿ ಬೆಲೆ ಸದ್ಯ ಕೆ.ಜಿಗೆ ₹320 ರಂತೆ ಮಾರಾಟವಾಗುತ್ತಿದೆ.

ಟೊಮೆಟೊ ಬೆಲೆ ಕೂಡ ಏರಿಕೆಯಾಗಿದ್ದು ಗ್ರಾಹಕರ ಜೇಬಿಗೆ ಭಾರ ಎನಿಸುತ್ತಿದೆ. ಉತ್ತಮ ಗುಣಮಟ್ಟದ ಟೊಮೆಟೊ ₹ 50, ಸಾಧಾರಣ ಗುಣಮಟ್ಟದ ಟೊಮೆಟೊವನ್ನು ₹ 40ರಂತೆ ಮಾರಾಟ ಮಾಡಲಾಗುತ್ತಿದೆ. ‘ಬಿಸಿಲಿಗೆ ಟೊಮೆಟೊ ಗಿಡದಲ್ಲಿಯೇ ನಾಶವಾಗುತ್ತಿದ್ದು ಮಾರುಕಟ್ಟೆಗೆ ಪೂರೈಕೆ ಕಡಿಮೆಯಾಗಿದೆ. ಹೀಗಾಗಿ ಬೆಲೆ ಹೆಚ್ಚಾಗಿದೆ’ ಎಂದು ವರ್ತಕರು ಹೇಳುತ್ತಾರೆ.

ಮಂಗಳೂರು ಸೌತೆ, ಸಿಹಿಗುಂಬಳ, ಈರುಳ್ಳಿ ₹20, ಭಜಿ ಮೆಣಸಿನಕಾಯಿ, ಎಲೆಕೋಸು ₹30, ಸೀಮೆಬದನೆಕಾಯಿ, ಹೂಕೋಸು, ಈರೇಕಾಯಿ, ಮೂಲಂಗಿ, ಬೆಂಡೆಕಾಯಿ, ಸಿಹಿಗೆಣಸು, ಸೋರೆಕಾಯಿ, ನುಗ್ಗೇಕಾಯಿ, ಆಲೂಗೆಡ್ಡೆ ₹ 50, ಕ್ಯಾರೆಟ್‌, ಬೀಟರೂಟ್‌ ₹ 60ರಂತೆ ಕೆ.ಜಿಗೆ ಮಾರಾಟವಾಗುತ್ತಿವೆ.

ಗೆಡ್ಡೆಕೋಸು, ಹಾಗಲಕಾಯಿ, ಗೋರಿಕಾಯಿ, ಸುವರ್ಣಗೆಡ್ಡೆ, ಹಸಿಬಟಾಣಿ, ಪಡವಲಕಾಯಿ ₹60, ಫಾರಂಬೀನ್ಸ್‌, ರಾಜ್‌ಈರುಳ್ಳಿ ₹80, ಹಸಿರುಮೆಣಸಿನಕಾಯಿ ₹100, ಫಾರಂ ಬೀನ್ಸ್‌ ₹110, ಒಂದು ನಿಂಬೆಹಣ್ಣಿಗೆ ಒಂದಕ್ಕೆ ₹8 –₹10ರಂತೆ ಮಾರಾಟ ಮಾಡಲಾಗುತ್ತಿದೆ.

ಮೆಂತೆ ಸೊಪ್ಪು ಹೊರತುಪಡಿಸಿ ಉಳಿದ ಸೊಪ್ಪುಗಳ ಬೆಲೆ ಸಾಧಾರಣವಾಗಿವೆ. ಕೀರೆ ₹5, ಸಬ್ಬಸಿಗೆ, ಕರಿಬೇವು, ಚಿಕ್ಕಿಸೊಪ್ಪು, ಪುದಿನಾ, ದಂಟು ₹10, ಫಾರಂ ಕೊತ್ತಂಬರಿ ₹15, ನಾಟಿ ಕೊತ್ತಂಬರಿ ₹30ರಂತೆ ಮಾರಾಟವಾಗುತ್ತಿವೆ.

ಹೂವಿನ ಬೆಲೆಯಲ್ಲಿ ಕೆಲವು ದುಬಾರಿಯಾಗಿದ್ದವು, ಅವುಗಳಲ್ಲಿ ಕೆ.ಜಿ ಹಳದಿ ಮತ್ತು ಕೆಂಪು ಚೆಂಡು ಹೂವು ₹100, ಸಣ್ಣಗುಲಾಬಿ, ಸುಗಂಧರಾಜ, ಬಟನ್ಸ್‌ ₹200, ಗಣಗಲೆ ₹260, ಸೇವಂತಿಗೆ ಮತ್ತು ಬಿಳಿ ಸೇವಂತಿಗೆ ₹300, ಕಲ್ಕತ್ತಾ ಮಲ್ಲಿಗೆ ₹350, ಮಲ್ಲಿಗೆ ₹450, ಮರಳೆ ₹500, ಕಾಕಡ ₹600, ಕನಕಾಂಬರ ₹800 ರಂತೆ ಕೆಜಿಗೆ ಮಾರಾಟವಾಗುತ್ತಿವೆ.

ಮಾರು ತುಳಸಿ ₹30, ಗಣಗಲೆ ₹60, ಕನಕಾಂಬರ, ಮರಳೆ, ಮಲ್ಲಿಗೆ ₹80, ಹಳದಿ ಮತ್ತು ಕೆಂಪು ಚೆಂಡು ಹೂವು, ಕಾಕಡ, ಬಟನ್ಸ್‌ ₹100, ಬಿಳಿಸೇವಂತಿಗೆ, ಸೇವಂತಿಗೆ ₹120ರಂತೆ ಮಾರಾಟ ಮಾಡಲಾಗುತ್ತಿದೆ.

ಹಣ್ಣುಗಳಲ್ಲಿ ಪಪ್ಪಾಯ ₹30, ಕಲ್ಲಂಗಡಿ ₹34, ಪಚ್ಚಬಾಳೆ ₹ 40, ಕರಬುಜ, ಏಲಕ್ಕಿಬಾಳೆ 50, ಸೀಬೆ ₹60, ಕಿತ್ತಳೆ ₹146, ಮೂಸಂಬೆ ₹98, ಕಪ್ಪು ದ್ರಾಕ್ಷಿ ₹120, ಕಿವಿಹಣ್ಣು (ಬಾಕ್ಸ್‌) ₹128, ಶರತ್‌ದ್ರಾಕ್ಷಿ ₹228, ಡ್ರ್ಯಾಗನ್‌ ಹಣ್ಣು ₹230, ದಾಳಿಂಬೆ ₹245, ಆಸ್ಟ್ರೇಲಿಯಾ ಸೇಬು ₹290, ರಾಯಲ್‌ ಗಾಲ ಸೇಬು ₹330 ರಂತೆ ಬಿಕರಿಯಾಗುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.