ADVERTISEMENT

ವೇಣುಗೋಪಾಲಸ್ವಾಮಿ; ಇಲ್ಲಿದೆ ಮೂಲ ವಿಗ್ರಹ

ಹಾರೋಹಳ್ಳಿ ಪ್ರಕಾಶ್‌
Published 10 ನವೆಂಬರ್ 2023, 23:30 IST
Last Updated 10 ನವೆಂಬರ್ 2023, 23:30 IST
ಕೆಆರ್‌ಎಸ್‌ ನಾರ್ತ್‌ ಬ್ಯಾಂಕ್‌ ಬಳಿ ಪ್ರತಿಷ್ಠಾಪನೆಗೊಂಡಿರುವ ವೇಣುಗೋಪಾಲಸ್ವಾಮಿ ಮೂಲ ವಿಗ್ರಹ
ಕೆಆರ್‌ಎಸ್‌ ನಾರ್ತ್‌ ಬ್ಯಾಂಕ್‌ ಬಳಿ ಪ್ರತಿಷ್ಠಾಪನೆಗೊಂಡಿರುವ ವೇಣುಗೋಪಾಲಸ್ವಾಮಿ ಮೂಲ ವಿಗ್ರಹ   

ಪಾಂಡವಪುರ: ಕೆಆರ್‌ಎಸ್ ಜಲಾಶಯದಲ್ಲಿ ಮುಳುಗಡೆಯಾಗಿದ್ದ ಐತಿಹಾಸಿಕ ವೇಣುಗೋಪಾಲಸ್ವಾಮಿ ದೇವಸ್ಥಾನವನ್ನು ಕನ್ನಂಬಾಡಿ ಗ್ರಾಮದ ಬಳಿ ಹಿನ್ನೀರಿನ ದಂಡೆಗೆ ಸ್ಥಳಾಂತರಿಸಿ ಜೀರ್ಣೋದ್ಧಾರ ಮಾಡಲಾಗಿದೆ. ದೇವಾಲಯವನ್ನು ಖೋಡೆ ಇಂಡಿಯಾ ಲಿಮಿಟೆಡ್‌ ಅಭಿವೃದ್ಧಿಗೊಳಿಸಿದೆ. ಆದರೆ, ಆ ದೇವಾಲಯದಲ್ಲಿರುವ ದೇವರ ವಿಗ್ರಹ ಮೂಲ ವಿಗ್ರಹವಲ್ಲ. ಮೂಲ ವಿಗ್ರಹವನ್ನು ಜಲಾಶಯದ ನಾರ್ತ್‌ ಬ್ಯಾಂಕ್‌ ಗ್ರಾಮದ ಬಳಿ ಪ್ರತಿಷ್ಠಾಪನೆ ಮಾಡಲಾಗಿದ್ದು, ಅಲ್ಲಿಯೂ ನಿರಂತರ ಪೂಜಾ ಕೈಂಕರ್ಯ ನಡೆಯುತ್ತಿದೆ.

ಇತಿಹಾಸಕಾರರ ಅಭಿಪ್ರಾಯದಂತೆ ದೇವಾಲಯ ಕ್ರಿ.ಶ.1300ಕ್ಕಿಂತಲೂ ಪ್ರಾಚೀನವಾದದು. ಮೂರನೇ ವೀರಬಲ್ಲಾಳ ಹಾಗೂ ಮೈಸೂರು ರಾಜ ಒಡೆಯರ್ ಮಗ ನರಸರಾಜ ಒಡೆಯರ್ ಈ ದೇಗುಲವನ್ನು ವಿಸ್ತರಿಸಿ, ದುರಸ್ತಿ ಮಾಡಿಸಿದರೆಂದು ತಿಳಿದು ಬರುತ್ತದೆ. ಗೋಪಾಲಕೃಷ್ಣ, ಕಣ್ವೇಶ್ವರ ಹಾಗೂ ಮಹಾಲಕ್ಷ್ಮಿ ವಿಗ್ರಹಗಳು ಮೂಲ ದೇವಾಲಯದಲ್ಲಿದ್ದವು. ನರಸರಾಜ ಒಡೆಯರ್ ಅವರು ಹೊಸಹೊಳಲು ಲಕ್ಷ್ಮೀನಾರಾಯಣ ದೇವಸ್ಥಾನದಿಂದ ವಿಗ್ರಹ ತಂದು ನವರಂಗದ ದಕ್ಷಿಣ ಗರ್ಭಗೃಹದಲ್ಲಿ ಸ್ಥಾಪಿಸಿದರೆಂದು ತಿಳಿದು ಬರುತ್ತದೆ.

1911ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೆಆರ್‌ಎಸ್ ಜಲಾಶಯಕ್ಕೆ ಅಣೆಕಟ್ಟೆ ನಿರ್ಮಾಣ ಪ್ರಾರಂಭಿಸಿದರು. 1924ರ ವೇಳೆಗೆ ಕನ್ನಂಬಾಡಿ ಗ್ರಾಮ ಸೇರಿದಂತೆ ಸುಮಾರು 26 ಹಳ್ಳಿಗಳ ಜತೆಗೆ ವೇಣುಗೋಪಾಲಸ್ವಾಮಿ ದೇವಸ್ಥಾನ ಮುಳುಗಿತು. ಮುಳುಗಡೆ ಒಳಗಾಗಿದ್ದ ಎಲ್ಲ ಹಳ್ಳಿಯ ಜನರು ಅಲ್ಲಿಂದ ಸ್ಥಳಾಂತರಗೊಂಡರು.

ADVERTISEMENT

ವೇಣುಗೋಪಾಲಸ್ವಾಮಿ ದೇವಸ್ಥಾನವನ್ನು ಸ್ಥಳಾಂತರ ಮಾಡಬೇಕು ಎಂಬುದು ಜನರ ಬೇಡಿಕೆಯಾಗಿತ್ತು. ಆದರೆ, ಕೆಆರ್‌ಎಸ್‌ ಅಣೆಕಟ್ಟೆ ನಿ‌ರ್ಮಾಣಕ್ಕೆ ಆರ್ಥಿಕ ವೆಚ್ಚ ಹೆಚ್ಚಾಗುತ್ತಿತ್ತು. ಹಣಕಾಸು ಪರಿಸ್ಥಿತಿಯ ಸರಿ ಇಲ್ಲದ್ದರಿಂದ ದೇವಸ್ಥಾನವನ್ನು ಸ್ಥಳಾಂತರಿಸಲು ನಾಲ್ವಡಿ ಒಡೆಯರ್‌ಗೆ ಕಷ್ಟವಾಗಿತ್ತು.

ಈ ಸಂದರ್ಭದಲ್ಲಿ ಗೋಪಾಲಕೃಷ್ಣ ಹಾಗೂ ಮಹಾಲಕ್ಷ್ಮಿ ವಿಗ್ರಹಗಳನ್ನು ಸ್ಥಳಾಂತರಿಸಿ ಅಣೆಕಟ್ಟೆಯ ಸಮೀಪದ ಚಿಕ್ಕಾಯರಹಳ್ಳಿ ಬಳಿಯ ನಾರ್ತ್ ಬ್ಯಾಂಕ್‌ನಲ್ಲಿ ತಾತ್ಕಾಲಿಕವಾಗಿ ವೇಣುಗೋಪಾಲಸ್ವಾಮಿ, ಮಹಾಲಕ್ಷ್ಮಿ ದೇವಸ್ಥಾನ ನಿರ್ಮಿಸಲಾಯಿತು. ಮೂಲ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಜೀರ್ಣೋದ್ಧಾರ ಮಾಡಲಾಯಿತು.

2011ರಲ್ಲಿ ಮಳೆಯಾಗದೆ ತೀವ್ರ ಬರಗಾಲಕ್ಕೆ ನಾಡು ತುತ್ತಾಗಿ ಕೆಆರ್‌ಎಸ್ ಜಲಾಶಯ ಬರಿದಾಯಿತು. ಆ ವೇಳೆ ವೇಣುಗೋಪಾಲಸ್ವಾಮಿ ದೇವಸ್ಥಾನ ಕಾಣಿಸಿಕೊಂಡಿತು. ಅದನ್ನು ನೋಡಲು ಜನಸಾಗರವೇ ಹರಿದು ಬಂದಿತ್ತು. ಉದ್ಯಮಿ ಹರಿಖೋಡೆ ಈ ದೇಗುಲವನ್ನು ಸ್ಥಳಾಂತರಿಸಿ ಹೊಸಕನ್ನಂಬಾಡಿ ಬಳಿಯ ಹಿನ್ನೀರಿನ ದಂಡೆಯಲ್ಲಿ ಪುನರ್ ಪ್ರತಿಷ್ಠಾಪನೆ ಮಾಡಿದರು. ಈ ದೇಗುಲಕ್ಕೆ ಮೂಲ ವೇಣುಗೋಪಾಲಸ್ವಾಮಿ ವಿಗ್ರಹದ ಮಾದರಿಯಲ್ಲಿಯೇ ಹೊಸದಾಗಿ ವಿಗ್ರಹ ನಿ‌ರ್ಮಾಣ ಮಾಡಿ ಪ್ರತಿಷ್ಠಾಪಿಸಲಾಯಿತು.

‘ಹೊಸಕನ್ನಂಬಾಡಿ ಬಳಿಯ ವೇಣುಗೋಪಾಲಸ್ವಾಮಿ ದೇವಸ್ಥಾನ ಈಗ ಪ್ರಸಿದ್ಧ ಪ್ರವಾಸಿ ತಾಣವಾಗಿ ರೂಪುಗೊಂಡಿದೆ. ಚಿಕ್ಕಾಯರಹಳ್ಳಿಯ ನಾರ್ತ್ ಬ್ಯಾಂಕ್‌ನಲ್ಲಿರುವ ವೇಣುಗೋಪಾಲಸ್ವಾಮಿ ದೇವಾಲಯ ಹೆಚ್ಚು ಪ್ರಸಿದ್ಧಿಗೆ ಬಂದಿಲ್ಲ. ಹಿನ್ನೀರಿನ ದೇವಾಲಯಕ್ಕೆ ಬರುವ ಪ್ರವಾಸಿಗರು ಮೂಲ ವಿಗ್ರಹವಿರುವ ದೇವಾಲಯಕ್ಕೂ ಬಂದು ದೇವರ ದರ್ಶನ ಪಡೆಯಬೇಕು’ ಎಂದು ಸ್ಥಳೀಯರು ಮನವಿ ಮಾಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.