ADVERTISEMENT

ಹಳ್ಳಿಗಾಡಿನ ಮಕ್ಕಳು ಬುದ್ಧಿವಂತರು: ಶಾಸಕ ದರ್ಶನ್‌ ಪುಟ್ಟಣ್ಣಯ್ಯ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2023, 13:18 IST
Last Updated 3 ಸೆಪ್ಟೆಂಬರ್ 2023, 13:18 IST
ಪಾಂಡವಪುರ ವಿಜಯ ಪಿಯು ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಸನ್ಮಾನಿಸಲಾಯಿತು ವಿದ್ಯಾಪ್ರಚಾರ ಸಂಘದ ಗೌರವ ಕಾರ್ಯದರ್ಶಿ ಕೆ.ವಿ.ಬಸವರಾಜು, ಸಹ ಕಾರ್ಯದರ್ಶಿ ಬಿ.ಎನ್.ಗೋಪಾಲಸ್ವಾಮಿ, ಖಜಾಂಚಿ ಎನ್.ರಾಮೇಗೌಡ, ನಿರ್ದೇಶಕರಾದ ಸುನೀತಾ ಪುಟ್ಟಣ್ಣಯ್ಯ ಇತರರು ಇದ್ದಾರೆ.
ಪಾಂಡವಪುರ ವಿಜಯ ಪಿಯು ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಸನ್ಮಾನಿಸಲಾಯಿತು ವಿದ್ಯಾಪ್ರಚಾರ ಸಂಘದ ಗೌರವ ಕಾರ್ಯದರ್ಶಿ ಕೆ.ವಿ.ಬಸವರಾಜು, ಸಹ ಕಾರ್ಯದರ್ಶಿ ಬಿ.ಎನ್.ಗೋಪಾಲಸ್ವಾಮಿ, ಖಜಾಂಚಿ ಎನ್.ರಾಮೇಗೌಡ, ನಿರ್ದೇಶಕರಾದ ಸುನೀತಾ ಪುಟ್ಟಣ್ಣಯ್ಯ ಇತರರು ಇದ್ದಾರೆ.   

ಪಾಂಡವಪುರ: ‘ನಗರ ಪ್ರದೇಶಕ್ಕಿಂತ ಹಳ್ಳಿಗಾಡಿನ ಮಕ್ಕಳು ಬುದ್ಧಿವಂತರಿದ್ದಾರೆ. ಹಾಗಾಗಿ ಬಹಳ ಆಸಕ್ತಿಯಿಂದ ವಿದ್ಯಾಭ್ಯಾಸ ಮಾಡಿ ಸಾಧನೆ ಮಾಡಬೇಕು’ ಎಂದು ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಹೇಳಿದರು.

ಪಟ್ಟಣದ ವಿಜಯ ಪದವಿಪೂರ್ವ ಕಾಲೇಜಿನ ಪ್ರಸಕ್ತ ಸಾಲಿನ ಸಾಂಸ್ಕೃತಿಕ, ಕ್ರೀಡಾ ಹಾಗೂ ಎನ್‌ಎಸ್‌ಎಸ್‌ ಚಟುವಟಿಕೆಗಳನ್ನು ಉದ್ಫಾಟಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ತಮಗೆ ದೊರೆಯುವ ಅವಕಾಶಗಳನ್ನು ಬಳಸಿಕೊಂಡು ನಿರಂತರ ಕಲಿಕೆಯಲ್ಲಿರಬೇಕು. ಜತೆಗೆ ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಂಡು ಬಹಳ ಎತ್ತರಕ್ಕೆ ಬೆಳೆಯಬೇಕು. ವೈದ್ಯ, ಎಂಜಿನಿಯರ್ ಆಗಬೇಕೆಂದು ಒತ್ತಡಕ್ಕೆ ಒಳಗಾಗಿ ಓದುವ ಬದಲು ನಿಮಗೆ ಆಸಕ್ತಿ ಇರುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಖುಷಿಯಿಂದ ಓದಬೇಕು. ಸಮಾಜದಲ್ಲಿ ಏನಾದರೂ ಬದಲಾವಣೆ ತರಬೇಕಾದರೆ ಯುವ ಶಕ್ತಿಯಿಂದ ಮಾತ್ರ ಸಾಧ್ಯ. ಹೀಗಾಗಿ ಯುವ ಸಮುದಾಯ ಸಾಮಾಜಿಕ ಹೊಣೆಗಾರಿಕೆ ಕಡೆಗೂ ಗಮನಹರಿಸಬೇಕಿದೆ’ ಎಂದರು.

ADVERTISEMENT

ವಿದ್ಯಾಪ್ರಚಾರ ಸಂಘದ ಗೌರವ ಕಾರ್ಯದರ್ಶಿ ಕೆ.ವಿ.ಬಸವರಾಜು ಮಾತನಾಡಿ, ‘ರೈತ ನಾಯಕ ದಿ.ಕೆ.ಎಸ್.ಪುಟ್ಟಣ್ಣಯ್ಯ ಅವರು ಸದನದಲ್ಲಿ ಸ್ಫೂರ್ತಿದಾಯಕವಾಗಿ ಮಾತನಾಡುವ ಏಕೈಕ ಶಾಸಕರಾಗಿದ್ದರು. ಯಾವುದೇ ವಿಷಯವಾಗಲಿ ಬಹಳ ಅರ್ಥಗರ್ಭಿತವಾಗಿ ಹಾಗೂ ರಸವತ್ತಾಗಿ ಮಾತನಾಡುವ ಮೂಲಕ ಸರ್ಕಾರಕ್ಕೆ ಚಾವಟಿ ಬೀಸುತ್ತಿದ್ದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಂತಹ ಮಹಾನ್ ನಾಯಕರೆದರೇ ನೇರ ನುಡಿಗಳನ್ನಾಡುತ್ತಿದ್ದರು. ಪುಟ್ಟಣ್ಣಯ್ಯ ತಮ್ಮ 40 ವರ್ಷಗಳ ಹೋರಾಟ ಮತ್ತು ರಾಜಕಾರಣದಲ್ಲಿ ಒಂಟಿ ಸಲಗದಂತೆ ಕೆಲಸ ಮಾಡಿದರು. ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೌಮ್ಯ ಸ್ವಭಾವದವರು. ಕೆ.ಎಸ್.ಪುಟ್ಟಣ್ಣಯ್ಯ ಅವರ ವ್ಯಕ್ತಿತ್ವ, ಚಿಂತನೆ, ಹೋರಾಟಗಳನ್ನು ದರ್ಶನ್ ಪುಟ್ಟಣ್ಣಯ್ಯ ಅಳವಡಿಸಿಕೊಂಡು ಮೇರು ನಾಯಕನಾಗಿ ಹೊರಹೊಮ್ಮಬೇಕಿದೆ’ ಎಂದು ಹೇಳಿದರು.

ವಿದ್ಯಾಪ್ರಚಾರ ಸಂಘದ ಸಹ ಕಾರ್ಯದರ್ಶಿ ಬಿ.ಎನ್.ಗೋಪಾಲಸ್ವಾಮಿ, ಖಜಾಂಚಿ ಎನ್.ರಾಮೇಗೌಡ, ನಿರ್ದೇಶಕರಾದ ಸುನೀತಾ ಪುಟ್ಟಣ್ಣಯ್ಯ, ಕೆ.ಸೋಮೇಗೌಡ, ಡಾ.ಎಚ್.ಜಿ.ಲೋಕನಾಥ್, ಪಿ.ಎಸ್.ಲಿಂಗರಾಜು, ಬಿ.ಸಿ.ಚಂದ್ರಶೇಖರ್, ಪ್ರಾಂಶುಪಾಲ ಜಿ.ಉಮೇಶ್, ಉಪ ಪ್ರಾಂಶುಪಾಲ ಎಂ.ರಮೇಶ್, ಉಪನ್ಯಾಸಕರಾದ ಮಹದೇವಯ್ಯ, ಎನ್.ಚಲುವೇಗೌಡ, ಗುರುಸ್ವಾಮಿ, ವಿಜಯ ಬಿ.ಇಡಿ ಕಾಲೇಜಿನ ಪ್ರಾಂಶುಪಾಲ ಸೋಮಶೇಖರ್, ವಿಜಯ ಕಿಡ್ಸ್‌ ಕೇರ್ ಮುಖ್ಯ ಶಿಕ್ಷಕಿ ಸೌಮ್ಯಾ ಇದ್ದರು.

ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.