ADVERTISEMENT

ಅನ್ನಭಾಗ್ಯ ಯೋಜನೆಯಡಿ ಬಳಕೆಗೆ ಯೋಗ್ಯವಲ್ಲದ ಪಡಿತರ ವಿತರಣೆ; ಗ್ರಾಮಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 13:28 IST
Last Updated 24 ಜುಲೈ 2024, 13:28 IST
ನಾಗಮಂಗಲ ತಾಲ್ಲೂಕಿನ ಸುಖಧರೆ ಪಡಿತರ ಅಂಗಡಿಯ ಮಾಲೀಕ ಕಳಪೆ ಮಣ್ಣು ಕಲ್ಲು ಮಿಶ್ರತ ರಾಗಿಯನ್ನು ವಿತರಣೆ ಮಾಡಿರುವುದನ್ನು ಖಂಡಿಸಿ ರಾಗಿಯನ್ನು ತಿಪ್ಪೆಗೆ ಸುರಿದು ಪ್ರತಿಭಟಿಸಿದರು.
ನಾಗಮಂಗಲ ತಾಲ್ಲೂಕಿನ ಸುಖಧರೆ ಪಡಿತರ ಅಂಗಡಿಯ ಮಾಲೀಕ ಕಳಪೆ ಮಣ್ಣು ಕಲ್ಲು ಮಿಶ್ರತ ರಾಗಿಯನ್ನು ವಿತರಣೆ ಮಾಡಿರುವುದನ್ನು ಖಂಡಿಸಿ ರಾಗಿಯನ್ನು ತಿಪ್ಪೆಗೆ ಸುರಿದು ಪ್ರತಿಭಟಿಸಿದರು.   

ನಾಗಮಂಗಲ: ಅನ್ನಭಾಗ್ಯ ಯೋಜನೆಯಡಿ ನ್ಯಾಯಬೆಲೆ ಅಂಗಡಿಯಿಂದ ಕಲ್ಲು, ಮಣ್ಣು ಮಿಶ್ರಿತ ಕಲಬೆರಕೆ ರಾಗಿ ವಿತರಣೆ ಮಾಡಲಾಗುತ್ತಿದೆ ಎಂದು ಆರೋಪಿಸಿ ತಾಲ್ಲೂಕಿನ ಸುಖಧರೆ ಗ್ರಾಮಸ್ಥರು ರಾಗಿಯನ್ನು ತಿಪ್ಪೆಗೆ ಸುರಿದು ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಸುಖಧರೆ ಗ್ರಾಮದ ಪಡಿತರ ವಿತರಣೆಯ ಅಂಗಡಿ ಮಾಲೀಕ ಪಡಿತರದಾರರಿಗೆ ಇಲಿ ಹಿಕ್ಕೆ ಮಣ್ಣು ಮಿಶ್ರಿತ ಕಳಪೆ ದರ್ಜೆ ರಾಗಿ ವಿತರಣೆ ಮಾಡಲಾಗಿದೆ ಎಂದು ಆಹಾರ ಇಲಾಖೆ ಮತ್ತು ನ್ಯಾಯಬೆಲೆ ಅಂಗಡಿ ಮಾಲೀಕನ ವಿರುದ್ಧ ಘೋಷಣೆ ಕೂಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

‘ಸುಖಧರೆ ನ್ಯಾಯಬೆಲೆ ಅಂಗಡಿ ಸಂಖ್ಯೆ 66ರಲ್ಲಿ ಸೀಗೆಕೊಪ್ಪಲು, ಬೊಮ್ಮನಾಯಕನಹಳ್ಳಿ, ಮಲ್ಲಸಂದ್ರ ಮಠದಭುವನಹಳ್ಳಿ, ಮಲ್ಲನಾಯಕನಹಳ್ಳಿ ಗ್ರಾಮಗಳು ಒಳಗೊಂಡತೆ 586 ಪಡಿತರದಾರರು ಸರ್ಕಾರದಿಂದ ವಿತರಣೆ ಮಾಡುವ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಾಗಿದ್ದಾರೆ. ನ್ಯಾಯಬೆಲೆ ಅಂಗಡಿಯ ಮಾಲೀಕ ಪ್ರತಿ ತಿಂಗಳು ಕೂಡ ಕಳಪೆ ದರ್ಜೆಯ ರಾಗಿ ವಿತರಣೆ ಮಾಡುತ್ತಿದ್ದಾನೆ’ ಎಂದು ಅವರು ಆರೋಪಿಸಿದರು.

ADVERTISEMENT

‘ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ ಆಹಾರ ನಿರೀಕ್ಷಕರು ಕ್ರಮ ವಹಿಸುತ್ತಿಲ್ಲ. ಆಹಾರ ಇಲಾಖೆಯೂ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಈಗಲಾದರೂ ಗುಣಮಟ್ಟದ ಆಹಾರ ಪಡಿತರ ನೀಡಬೇಕು. ತಾಲ್ಲೂಕಿನ ವ್ಯಾಪ್ತಿಯ 97 ನ್ಯಾಯಬೆಲೆ ಅಂಗಡಿಗಳಲ್ಲಿ ಶುದ್ಧವಾದ ರಾಗಿ ವಿತರಣೆ ಮಾಡುತ್ತಿದ್ದು, ಸುಖಧರೆ ಗ್ರಾಮದ ಅಂಗಡಿ ಮಾಲೀಕ ಮಾತ್ರ ಕಳಪೆ ರಾಗಿ ನೀಡುತ್ತಿರುವುದು ಖಂಡನೀಯ’ ಎಂದು ಕಿಡಿಕಾರಿದರು.

ಅಧಿಕಾರಿಗಳ ಭೇಟಿ ಪರಿಶೀಲನೆ: ಪ್ರತಿಭಟನೆ ಹಿನ್ನೆಲೆಯಲ್ಲಿ ಜಿಲ್ಲಾ ಆಹಾರ ಇಲಾಖೆಯ ಆಹಾರ ನಿರೀಕ್ಷಕರಾದ ಪವಿತ್ರಾ ಹಾಗೂ ರೇವಣ್ಣ ಸ್ಥಳಕ್ಕೆ ಭೇಟಿ ನೀಡಿ ಮಾಲೀಕರಿಂದ ಮಾಹಿತಿ ಪಡೆದು ಗೋದಾಮನ್ನು ವೀಕ್ಷಿಸಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಪಡಿತರದಾರರನ್ನು ಭೇಟಿ ಮಾಡಿ ಅವರಿಂದಲೂ ಮಾಹಿತಿ ಪಡೆದು ಸೊಸೈಟಿ ಮಾಲೀಕನ ಪರವಾನಗಿಯ ಅಮಾನತಿಗೆ ಕ್ರಮವಹಿಸುವಂತೆ ಮೇಲಧಿಕಾರಿಗಳಿಗೆ ವರದಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.