ADVERTISEMENT

ಮಂಡ್ಯ: ಮಿಮ್ಸ್‌ ಭದ್ರತಾ ಸಿಬ್ಬಂದಿ ನೇಮಕಾತಿಯಲ್ಲಿ ಅಕ್ರಮ, ಕಾರ್ಮಿಕರ ಕಣ್ಣೀರು

ಸರ್ಕಾರಿ ಕೆಲಸ ಎಂದು ನಂಬಿಸಿ ಬಡವರಿಗೆ ಮೋಸ

ಎಂ.ಎನ್.ಯೋಗೇಶ್‌
Published 22 ಸೆಪ್ಟೆಂಬರ್ 2018, 10:03 IST
Last Updated 22 ಸೆಪ್ಟೆಂಬರ್ 2018, 10:03 IST
ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಕಟ್ಟಡ
ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಕಟ್ಟಡ   

ಮಂಡ್ಯ: ಮಿಮ್ಸ್‌ ಆಸ್ಪತ್ರೆಯ ಭದ್ರತಾ ಸಿಬ್ಬಂದಿ ನೇಮಕಾತಿಯಲ್ಲಿ ಭಾರಿ ಅಕ್ರಮ ಕಂಡುಬಂದಿದ್ದು ಬಡ ಉದ್ಯೋಗಾಕಾಂಕ್ಷಿಗಳಿಂದ ಅಪಾರ ಹಣ ವಸೂಲಿ ಮಾಡಿರುವುದು ಪತ್ತೆಯಾಗಿದೆ. ಈ ಬಗ್ಗೆ ಮಿಮ್ಸ್‌ ನಿರ್ದೇಶಕರು ಯಾವುದೇ ಕ್ರಮ ಜರುಗಿಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

2017–18ನೇ ಸಾಲಿನಲ್ಲಿ ಭದ್ರತಾ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಮೈಸೂರು ಮೂಲದ ಕಾಂತಿ ಏಜೆನ್ಸಿಗೆ ಗುತ್ತಿಗೆ ನೀಡಲಾಗಿತ್ತು. ಏಜೆನ್ಸಿಯ ಪಾಲದಾರ ಹಾಗೂ ವ್ಯವಸ್ಥಾಪಕರು ಉದ್ಯೋಗ ಕಾಯಂ ಎಂದು ಉದ್ಯೋಗಾಕಾಂಕ್ಷಿಗಳಲ್ಲಿ ನಂಬಿಸಿ ಪ್ರತಿಯೊಬ್ಬರಿಂದ ₹ 20 ಸಾವಿರ ವಸೂಲಿ ಮಾಡಿದ್ದಾರೆ. ಕೆಲವರಿಗೆ ಸಾಲ ಕೊಟ್ಟು ಪ್ರತಿ ತಿಂಗಳು ಸಿಬ್ಬಂದಿಯ ಸಂಬಳದಲ್ಲಿ ಹಣ ಕಡಿತ ಮಾಡಿದ್ದಾರೆ. ಕಾಯಂ ಉದ್ಯೋಗ ಎಂದು ನಂಬಿದ ಅಭ್ಯರ್ಥಿಗಳು ಒಡವೆ, ಜಮೀನು ಮಾರಾಟ ಮಾಡಿ, ಬಡ್ಡಿ ಸಾಲ ತಂದು ಹಣ ಕೊಟ್ಟಿದ್ದಾರೆ.

ಕಾಂತಿ ಏಜೆನ್ಸಿಯ ಪಾಲುದಾರ ಟಿ.ವಿ.ವೆಂಕಟೇಶ್‌ ಹಾಗೂ ಆತನ ಮಗ ಶ್ರೀನಿವಾಸ್‌ ಅಭ್ಯರ್ಥಿಗಳಿಂದ ಹಣ ವಸೂಲಿ ಮಾಡಿದ್ದಾರೆ. ಇವರ ವಿರುದ್ಧ ಸಿಬ್ಬಂದಿ ನಿರ್ದೇಶಕರಿಗೆ ದೂರು (ದೂರಿನ ಪ್ರತಿ ಪ್ರಜಾವಾಣಿಗೆ ಲಭ್ಯವಾಗಿದೆ) ನೀಡಿದ್ದಾರೆ. ಹಣ ನೀಡಿದ ಬಗ್ಗೆ ದಾಖಲೆಯನ್ನೂ ದೂರಿನ ಜೊತೆ ಸಲ್ಲಿಸಿದ್ದಾರೆ. ಆದರೂ ನಿರ್ದೇಶಕರು ಯಾವುದೇ ಕ್ರಮ ಕೈಗೊಳ್ಳದೆ ಮೌನವಹಿಸಿದ್ದಾರೆ. ‘ಕೆಲಸಕ್ಕೆ ಬಂದ ನಂತರವಷ್ಟೇ ಇದು ಹೊರಗುತ್ತಿಗೆ ನೇಮಕಾತಿ ಎಂಬ ವಿಷಯ ತಿಳಿಯಿತು. ಸರ್ಕಾರಿ ಕೆಲಸ ಎಂದು ನಂಬಿ ಏಜೆನ್ಸಿಯವರಿಗೆ ಹಣ ನೀಡಿದೆವು. ಹಣ ಕೊಡದವರನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ಉದ್ಯೋಗ ಭದ್ರತೆ ಇಲ್ಲದ ಕಾರಣ ನಾವು ಕೊಟ್ಟಿರುವ ಹಣ ವಾಪಸ್‌ ಕೊಡಿಸಬೇಕು ಎಂದೂ ನಿರ್ದೇಶಕರಿಗೆ ಮನವಿ ಮಾಡಿದೆವು’ ಎಂದು ಹೆಸರು ಹೇಳಲಿಚ್ಛಿಸದ ಭದ್ರತಾ ಸಿಬ್ಬಂದಿಯೊಬ್ಬರು ತಿಳಿಸಿದರು.

ADVERTISEMENT

ರಜೆಯ ಹಣವನ್ನೂ ಲಪಟಾಯಿಸಿದರು
ಸಿಬ್ಬಂದಿಯ ವಾರದ ರಜೆಯನ್ನು ದಾಖಲಾತಿಯಲ್ಲಿ ‘ಹಾಜರು’ ಎಂದು ನಮೂದಿಸಿ ಕಾರ್ಮಿಕರ ಖಾತೆಗೆ ಸಂಬಳ ಹೋಗುವಂತೆ ನೋಡಿಕೊಂಡಿದ್ದಾರೆ. ನಂತರ ಆ ಹಣವನ್ನು ಕಾರ್ಮಿಕರಿಂದ ವಸೂಲಿ ಮಾಡಿದ್ದಾರೆ. ಇಷ್ಟೇ ಅಲ್ಲದೆ ಕಾರ್ಮಿಕರಿಗೆ ಬೆದರಿಕೆ ಹಾಕಿ ಹೆಚ್ಚುವರಿ ಕರ್ತವ್ಯ ಮಾಡಿಸಿದ್ದಾರೆ. ಆ ಸಂಬಳವನ್ನೂ ವಸೂಲಿ ಕಾರ್ಮಿಕರಿಂದ ಮಾಡಿದ್ದಾರೆ.

ಪತ್ತೆಯಾದರೂ ಕ್ರಮವಿಲ್ಲ
ಏಜೆನ್ಸಿಯವರಿಗೆ ಹಣ ಕೊಟ್ಟಿರುವುದಾಗಿ 42 ಸಿಬ್ಬಂದಿ ದೂರು ಸಲ್ಲಿಸಿದ್ದಾರೆ. ನಂತರ ಆಡಳಿತ ಮಂಡಳಿ ಏಜೆನ್ಸಿ ಮಾಲೀಕ ಶಿವಣ್ಣ ಅವರಿಗೆ ನೋಟಿಸ್‌ ನೀಡಿದೆ. ಈ ಕುರಿತು 2018, ಮಾರ್ಚ್‌ನಲ್ಲಿ ನಡೆದ ಸಭೆಗೆ ಹಾಜರಾದ ಶಿವಣ್ಣ, ವೆಂಟಕೇಶ್‌ ಹಾಗೂ ಶ್ರೀನಿವಾಸ್‌ ಅವರನ್ನು ಏಜೆನ್ಸಿಯಿಂದ ತೆಗೆದುಹಾಕಲಾಗುವುದು ಭರವಸೆ ನೀಡಿದ್ದಾರೆ. ಹಣ ವಸೂಲಾತಿ ಮಾಡಿದ್ದರೆ ಅದನ್ನು ವಾಪಸ್‌ ಕೊಡಿಸುವುದಾಗಿಯೂ ಭರವಸೆ ನೀಡಿದ್ದಾರೆ. ಆದರೆ ಇಲ್ಲಿಯವರೆಗೂ ಯಾವುದೇ ಹಣ ಕೊಟ್ಟಿಲ್ಲ ಎಂದು ಸಿಬ್ಬಂದಿ ಅಳಲು ತೋಡಿಕೊಂಡರು.

ಇಲಾಖೆಗೆ ಮನವಿ
ಈ ಅವ್ಯವಹಾರ ಕುರಿತು ಕಾರ್ಮಿಕ ಹೋರಾಟಗಾರ ರುದ್ರಯ್ಯ, ವಿಧಾನ ಪರಿಷತ್‌ ಸದಸ್ಯ ಡಿ.ಎಸ್‌.ವೀರಯ್ಯ ಅವರ ನೃತೃತ್ವದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ.ಮಂಜುಳಾ ಅವರಗೆ ಮನವಿ ಸಲ್ಲಿಸಿದ್ದರು. ಈ ಬಗ್ಗೆ ವರದಿ ನೀಡುವಂತೆ ಮಿಮ್ಸ್‌ ನಿರ್ದೇಶಕರಿಗೆ ಮಂಜುಳಾ ಸೂಚನೆ ನೀಡಿದರು. ಆದರೆ ಇಲ್ಲಿಯವರೆಗೂ ಯಾವುದೇ ವರದಿ ನೀಡದಿರುವುದು ಅನುಮಾನ ಮೂಡಿಸಿದೆ.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಮಿಮ್ಸ್‌ ನಿರ್ದೇಶಕ ಡಾ. ಜಿ.ಎಂ.ಪ್ರಕಾಶ್‌ ಅವರಿಗೆ ಕರೆ ಮಾಡಿದಾಗ ಅವರ ಮೊಬೈಲ್‌ ಫೋನ್‌ ಸ್ವಿಚ್‌ಆಫ್‌ ಆಗಿತ್ತು.

* ಭದ್ರತಾ ಸಿಬ್ಬಂದಿಯಿಂದ ಏಜೆನ್ಸಿಯವರು ಹಣ ಪಡೆದಿರುವುದು ತಿಳಿದು ಬಂದಿದೆ. ಈ ಕುರಿತು ಶೀಘ್ರ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು
–ಸಿ.ಎಸ್‌.ಪುಟ್ಟರಾಜು, ಜಿಲ್ಲಾ ಉಸ್ತುವಾರಿ ಸಚಿವ

ಕ್ರಿಮಿನಲ್‌ ಕೇಸ್‌ ದಾಖಲಿಸಲು ಆಗ್ರಹ

‘ಕಮಿಷನ್‌ ಆಸೆಗಾಗಿ ಭದ್ರತಾ ಬಡವರ ಕೆಲಸವನ್ನೂ ಮಾರಾಟ ಮಾಡಿಕೊಂಡಿದ್ದಾರೆ. ಬಡವರಿಂದ ಹಣ ವಸೂಲಿ ಮಾಡಿ ಕಣ್ಣೀರು ಹಾಕಿಸುತ್ತಿದ್ದಾರೆ. ತಪ್ಪೆಸಗಿದ ಏಜೆನ್ಸಿಗೆ ಮಿಮ್ಸ್‌ ನಿರ್ದೇಶಕರು ಕನಿಷ್ಠ ಒಂದು ನೋಟಿಸ್‌ ಕೂಡ ಜಾರಿ ಮಾಡಿಲ್ಲ. ಹಣ ವಸೂಲಿ ಮಾಡಿದ ಆರೋಪಿಗಳ ಮೇಲೆ ಕ್ರಿಮಿನಲ್‌ ಮೊಕದ್ದಮೆ ಹೂಡಿ ಕಾನೂರು ಕ್ರಮ ಜರುಗಿಸಬೇಕು’ ಎಂದು ಕಾರ್ಮಿಕ ಹೋರಾಟಗಾರ ರುದ್ರಯ್ಯ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.