ADVERTISEMENT

ಶ್ರೀರಂಗಪಟ್ಟಣ: ದೇವರ ಅಭಿಷೇಕಕ್ಕೂ ಸಲ್ಲದ ಕಾವೇರಿ ನೀರು!

ಪಟ್ಟಣ, ಸುತ್ತಲಿನ ದೇಗುಲದಲ್ಲಿ ಮಲಿನ ನೀರು ಬಳಕೆ ಸ್ಥಗಿತ

ಗಣಂಗೂರು ನಂಜೇಗೌಡ
Published 7 ನವೆಂಬರ್ 2024, 8:13 IST
Last Updated 7 ನವೆಂಬರ್ 2024, 8:13 IST
ಶ್ರೀರಂಗಪಟ್ಟಣ ಸಮೀಪದ ಗಂಜಾಂ ನಿಮಿಷಾಂಬಾ ದೇವಾಲಯದ ಬಳಿ ಕಾವೇರಿ ನದಿಯ ನೀರನ್ನು ಗಂಜಾಂ ಆದಿ ಶಂಕರ ಮಠದ ಪೀಠಾಧ್ಯಕ್ಷ ಸ್ವಾಮಿ ಗಣೇಶ ಸ್ವರೂಪಾನಂದಗಿರಿ ಬುಧವಾರ ಪರಿಶೀಲಿಸಿದರು
ಶ್ರೀರಂಗಪಟ್ಟಣ ಸಮೀಪದ ಗಂಜಾಂ ನಿಮಿಷಾಂಬಾ ದೇವಾಲಯದ ಬಳಿ ಕಾವೇರಿ ನದಿಯ ನೀರನ್ನು ಗಂಜಾಂ ಆದಿ ಶಂಕರ ಮಠದ ಪೀಠಾಧ್ಯಕ್ಷ ಸ್ವಾಮಿ ಗಣೇಶ ಸ್ವರೂಪಾನಂದಗಿರಿ ಬುಧವಾರ ಪರಿಶೀಲಿಸಿದರು   

ಶ್ರೀರಂಗಪಟ್ಟಣ: ಕಾವೇರಿ ನದಿಯ ನೀರು ತೀವ್ರವಾಗಿ ಮಲಿನಗೊಂಡಿರುವ ಹಿನ್ನೆಲೆಯಲ್ಲಿ ಪಟ್ಟಣ ಹಾಗೂ ಆಸುಪಾಸಿನಲ್ಲಿರುವ ದೇವಾಲಯಗಳಲ್ಲಿ ದೇವರ ಅಭಿಷೇಕಕ್ಕೆ ಈ ನೀರನ್ನು ಬಳಸುವುದನ್ನು ನಿಲ್ಲಿಸಲಾಗಿದೆ.

ಪಟ್ಟಣ ಸಮೀಪದ ಗಂಜಾಂ ಬಳಿಯ ದೊಡ್ಡ ಗೋಸಾಯಿಘಾಟ್‌ನ ಐತಿಹಾಸಿಕ ಕಾಶಿ ವಿಶ್ವನಾಥಸ್ವಾಮಿ ದೇವಾಲಯವು ಕಾವೇರಿ ನದಿಯ ದಡದಲ್ಲೇ ಇದೆ. ಈ ದೇವಾಲಯ ನದಿಗೆ ಕೇವಲ 15 ಅಡಿಗಳ ಅಂತರದಲ್ಲಿ ಇದ್ದರೂ ದೇವರ ಅಭಿಷೇಕಕ್ಕೆ ಈ ನದಿಯ ನೀರನ್ನು ಬಳಸುತ್ತಿಲ್ಲ. ನದಿಯ ನೀರು ಮಲಿನವಾಗಿರುವುದರಿಂದ ದೇವರ ಅಭಿಷೇಕಕ್ಕೆ ಬಳಸುವುದನ್ನು ನಿಲ್ಲಿಸಲಾಗಿದೆ.

‘ಮೈಸೂರು ಕಡೆಯಿಂದ ಬರುವ ಕೊಳಚೆ ನೀರು, ತಾಲ್ಲೂಕಿನ ಚಂದಗಾಲು ಬಳಿ ಕಾವೇರಿ ನದಿಗೆ ಸೇರುತ್ತಿದೆ. ಕೆಲವೊಮ್ಮ ನದಿಯ ನೀರು ಗಬ್ಬು ವಾಸನೆ ಬೀರುತ್ತಿದೆ. ತ್ಯಾಜ್ಯ ತೇಲಾಡುತ್ತಿರುತ್ತದೆ. ಇಂತಹ ನೀರನ್ನು ದೇವರ ಅಭಿಷೇಕಕ್ಕೆ ಬಳಸುವುದಾದರೂ ಹೇಗೆ?’ ಎಂದು ಕಾಶಿ ವಿಶ್ವನಾಥಸ್ವಾಮಿ ದೇವಾಲಯದ ಅರ್ಚಕ ಸುಬ್ರಹ್ಮಣ್ಯ ಪ್ರಶ್ನೆ ಮುಂದಿಡುತ್ತಾರೆ.

ADVERTISEMENT

‘ಗಂಜಾಂ ನಿಮಿಷಾಂಬ ದೇವಾಲಯದಲ್ಲಿರುವ ನಿಮಿಷಾಂಬ ದೇವಿ, ಮೌಕ್ತಿಕೇಶ್ವರ ಇತರ ದೇವರ ಮೂರ್ತಿಗಳ ಅಭಿಷೇಕಕ್ಕೆ ಕಾವೇರಿ ನದಿಯ ನೀರನ್ನು ನೇರವಾಗಿ ಬಳಸುತ್ತಿಲ್ಲ. ಕಾವೇರಿ ನದಿಯಿಂದ ಒಂದು ತಂಬಿಗೆ ನೀರು ತಂದು ಅದನ್ನು ಒಂದು ಬಿಂದಿಗೆ ಶುದ್ಧ ನೀರಿನೊಂದಿಗೆ ಬೆರೆಸಿ ನಂತರ ದೇವರಿಗೆ ಅಭಿಷೇಕ ಮಾಡಲಾಗುತ್ತಿದೆ’ ಎಂದು ದೇವಾಲಯದ ಅರ್ಚಕ ಸೂರ್ಯನಾರಾಯಣಭಟ್‌ ತಿಳಿಸಿದರು.

‘ಕಾವೇರಿ ನದಿಗೆ ಮೈಸೂರು ಕಡೆಯಿಂದ ಬರುವ ಮಲಿನ ನೀರಿನ ಜತೆಗೆ ನದಿ ತೀರದ ಜನ ವಸತಿ ಸ್ಥಳಗಳಿಂದಲೂ ಕೊಳಚೆ ನೀರು ನೇರವಾಗಿ ಸೇರುತ್ತಿದೆ. ಶ್ರೀರಂಗಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆ ರೂಪಿಸಿದ್ದರೂ ಮಲಿನ ನೀರು ನದಿಗೆ ಸೇರುವುದು ತಪ್ಪಿಲ್ಲ. ಮೀನು ಮತ್ತು ಕೋಳಿ ಮಾಂಸ ಮಾರಾಟದ ಅಂಗಡಿಗಳ ತ್ಯಾಜ್ಯವನ್ನು ನದಿಗೆ ತಂದು ಸುರಿಯಲಾಗುತ್ತಿದೆ. ನದಿ ಚರಂಡಿಯಂತಾಗಿದೆ. ಹಾಗಾಗಿ ಈ ನದಿಯಲ್ಲಿ ಸ್ನಾನ ಮಾಡುವುದನ್ನೇ ನಿಲ್ಲಿಸಿದ್ದೇನೆ’ ಎಂದು ಗಂಜಾಂ ಆದಿ ಶಂಕರ ಮಠದ ಸ್ವಾಮಿ ಗಣೇಶ ಸ್ವರೂಪಾನಂದಗಿರಿ ಅವರು ಕಾವೇರಿ ನದಿಯ ನೀರಿನ ಮಲಿನತೆಗೆ ಕನ್ನಡಿ ಹಿಡಿದಿದ್ದಾರೆ.

‘ನದಿಯ ಪಾವಿತ್ರ್ಯ ಕಾಪಾಡುವ ದಿಸೆಯಲ್ಲಿ ಅಖಿಲ ಭಾರತ ಸನ್ಯಾಸಿಗಳ ಸಂಘದ ಸಾಧು ಸಂತರು, ಸಂಘ ಸಂಸ್ಥೆಗಳಿಂದ ಒಂದು ದಶಕದಿಂದ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಕಾವೇರಿ ನದಿಯ ಉಗಮ ಸ್ಥಾನದಿಂದ ಅದು ಬಂಗಾಳ ಕೊಲ್ಲಿ ಸೇರುವ ಪೂಂಪುಹಾರ್‌ ವರೆಗೆ ರಥಯಾತ್ರೆ ನಡೆಸಲಾಗುತ್ತದೆ. ಆದರೆ ಅಧಿಕಾರಿಗಳು ಮತ್ತು ರಾಜಕಾರಣಿಗಳು ಈ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಶ್ರಿರಂಗಪಟ್ಟಣದ ಸಮೀಪದ ಗಂಜಾಂ ಆದಿ ಶಂಕರ ಮಠದ ಪಕ್ಕದ ಚರಂಡಿ ಮೂಲಕ ಕಾವೇರಿ ನದಿಯ ಒಡಲು ಸೇರುತ್ತಿರುವ ಕೊಳಚೆ ನೀರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.