ADVERTISEMENT

ಸಂತೇಬಾಚಹಳ್ಳಿ: ಕೆರೆ ಏರಿ ದುರಸ್ತಿ ಯಾವಾಗ?

ಮಾವಿನಕಟ್ಟೆಕೊಪ್ಪಲು ಗ್ರಾಮದಲ್ಲಿ ಬರಿದಾಗುತ್ತಿರುವ ಜೀವಜಲ: ಜನ–ಜಾನುವಾರುಗಳಿಗೆ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 15 ಜೂನ್ 2024, 5:23 IST
Last Updated 15 ಜೂನ್ 2024, 5:23 IST
ಸಂತೇಬಾಚಹಳ್ಳಿ ಹೋಬಳಿಯ ಮಾವಿನಕಟ್ಟೆಕೊಪ್ಪಲು ಗ್ರಾಮದ ಕೆರೆ ಏರಿ ಒಡೆದು ನೀರಿಲ್ಲದೆ ಬರಿದಾಗಿದೆ
ಸಂತೇಬಾಚಹಳ್ಳಿ ಹೋಬಳಿಯ ಮಾವಿನಕಟ್ಟೆಕೊಪ್ಪಲು ಗ್ರಾಮದ ಕೆರೆ ಏರಿ ಒಡೆದು ನೀರಿಲ್ಲದೆ ಬರಿದಾಗಿದೆ   

ಸಂತೇಬಾಚಹಳ್ಳಿ: ಮಾವಿನಕಟ್ಟೆಕೊಪ್ಪಲು ಗ್ರಾಮದ ಕೆರೆ ಏರಿ ಒಡೆದು ವರ್ಷವಾದರೂ ದುರಸ್ತಿ ಮಾಡದ ಕಾರಣದಿಂದ ನೀರು ಶೇಖರಣೆಯಾಗದೆ ಪೋಲಾಗುತ್ತಿದೆ. ಇದನ್ನೇ ನಂಬಿಕೊಂಡಿರುವ ಜನ– ಜಾನುವಾರುಗಳಿಗೆ ತೀವ್ರ ತೊಂದರೆಯಾಗಿರುವುದಕ್ಕೆ ಗ್ರಾಮಸ್ಥರ ಆಕ್ರೋಶ ಹೆಚ್ಚಾಗಿದೆ.

ಹೌದು, ಮಳೆಯಾಶ್ರಿತ ಕರೆಯಾಗಿರುವ ಸಂತೇಬಾಚಹಳ್ಳಿ ಹೋಬಳಿಯ ಮಾವಿನಕಟ್ಟೆಕೊಪ್ಪಲು ಗ್ರಾಮದ ಸ.ನಂ.4ರಲ್ಲಿ 13 ಎಕರೆ ಕೆರೆ ವಿಸ್ತೀರ್ಣ ಹೊಂದಿದೆ. ಕಳೆದ ಒಂದು ವರ್ಷದ ಹಿಂದೆ ಭಾರಿ ಮಳೆಗೆ ಕೆರೆ ಏರಿಯ ಒಂದು ಭಾಗ ಒಡೆದು ಹೋಗಿತ್ತು. ದುರಸ್ತಿಗೊಳಿಸಲು ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. 

ಕೆರೆ ಏರಿ ಹಿಂಭಾಗ ಇರುವ ತೆಂಗಿನ ಮರಗಳು ನಶಿಸುವ ಸಾಧ್ಯತೆ ಹೆಚ್ಚಾಗಿದೆ. ಈಗಾಗಲೇ ಮಳೆ ಇಲ್ಲದೇ ಒಣಗುತ್ತಿರುವ ತೆಂಗಿನ ಮರಗಳು ಒಂದು ಕಡೆಯಾದರೆ, ಪ್ರಸ್ತುತ ಮಳೆ ಬೀಳುತ್ತಿರುವುದರಿಂದ ಚೇತರಿಕೆ ಕಾಣುವ ಸ್ಥಿತಿಯಲ್ಲಿರುವ ತೋಟಗಾರಿಕೆ ಬೆಳೆಗಳನ್ನಾದರೂ ಉಳಿಸಿಕೊಳ್ಳಬೇಕೆನ್ನುವ ಹಂಬಲ ರೈತರಲ್ಲಿ ಹೆಚ್ಚಾಗಿದೆ. ಹಾಗಾಗಿ ಕೆರೆ ನೀರು ತುಂಬಲು ಏರಿ ದುರಸ್ತಿ ಮಾಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. 

ADVERTISEMENT

ಕೆರೆ ಏರಿ ಹಿಂಭಾಗದಲ್ಲಿ ನೂರಾರು ಎಕರೆ ಜಮೀನಿದ್ದು ಭತ್ತದ ಬೆಳೆಗಾರರಿಗೆ ತೊಂದರೆಯಾಗಿದೆ. ನೀರಾವರಿ ಇಲಾಖೆ ಅಧಿಕಾರಿಗಳು ಅಥವಾ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಕೇವಲ ಕಾಟಾಚಾರಕ್ಕೆ ಭೇಟಿ ನೀಡಿ ಹೋಗುತ್ತಾರೆ. ಬಿಜೆಪಿ ಸರ್ಕಾರ ಇದ್ದಾಗ ಅಂದಿನ ಕಂದಾಯ ಸಚಿವ ಆರ್.ಅಶೋಕ್ ಕೂಡ ಭೇಟಿ ನೀಡಿದ್ದರು. ಶಾಸಕ ಎಚ್.ಟಿ. ಮಂಜು ಕೂಡ ಭೇಟಿ ನೀಡಿ ಶೀಘ್ರ ಸಮಸ್ಯೆ ಪರಿಹರಿಸುತ್ತೇವೆ ಎಂದಿದ್ದರು. ಆದರೆ, ಇನ್ನೂ ಕೂಡ ಅಧಿಕಾರಿಗಳು ಇತ್ತ ಸುಳಿದಿಲ್ಲ ಎಂದು ಗ್ರಾಮದ ಜನರು ಆರೋಪಿಸಿದರು. 

ಮುಂಗಾರು ಮಳೆ ಉತ್ತಮವಾಗಿ ಆಗುತ್ತಿದ್ದು ರೈತರಲ್ಲಿ ಸಂತಸ ಮೂಡಿದೆ. ಆದರೆ ಕೆರೆ ಏರಿ ದುರಸ್ತಿಯಾಗದ ಕಾರಣ ಅಮೂಲ್ಯ ಮಳೆ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ ಎಂದು ಗ್ರಾಮಸ್ಥ ಎಂ.ಆರ್.ಚೇತನ್‌ ಕುಮಾರ್ ಸಮಸ್ಯೆ ತೋಡಿಕೊಂಡರು. 

‘ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕೆರೆ ಏರಿ ಒಡೆದು ವರ್ಷ ಕಳೆದರೂ ಏರಿ ದುರಸ್ತಿ ಮಾಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ರೈತರಿಗೆ ಹಾಗೂ ಜಾನುವಾರುಗಳಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಜಾನುವಾರು ಮಾಲೀಕ ದೇವರಾಜು ಒತ್ತಾಯಿಸಿದ್ದಾರೆ. 

ಜಿಲ್ಲಾ ಪಂಚಾಯ್ತಿ ಸಿ.ಇ.ಒ ಮೂಲಕ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸರ್ಕಾರ ಹಣ ಬಿಡುಗಡೆ ಮಾಡಿದರೆ ಕೆರೆ ಏರಿ ದುರಸ್ತಿ ಮಾಡಲಾಗುವುದು
–ಪಿ.ಸ್ವಾಮಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೆ.ಆರ್.ಪೇಟೆ ಉಪ ವಿಭಾಗ
ಸ್ಥಳ ಪರಿಶೀಲನೆ ಮಾಡಿದ್ದೇವೆ. ಲೋಕಸಭಾ ಚುನಾವಣೆ ಮುಗಿದಿದೆ. ಸರ್ಕಾರದ ಗಮನಕ್ಕೆ ತಂದು ಹಣ ಬಿಡುಗಡೆ ಮಾಡಿಸಿ ಟೆಂಡರ್ ಕರೆದು ಕ್ರಮ ಕೈಗೊಳ್ಳುತ್ತೇವೆ.
– ಎಚ್.ಟಿ.ಮಂಜು ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.