ADVERTISEMENT

ವಿಸಿ ನಾಲೆಯಿಂದ 18 ಕೆರೆಗಳಿಗೆ ನೀರು: ಎನ್‌. ಚಲುವರಾಯಸ್ವಾಮಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 14:06 IST
Last Updated 19 ಜೂನ್ 2024, 14:06 IST
   

ಶ್ರೀರಂಗಪಟ್ಟಣ: ವಿಶ್ವೇಶ್ವರಯ್ಯ ನಾಲೆಯಲ್ಲಿ ನೀರು ಹರಿಸಿದರೆ ಅದರಿಂದ 18 ಕೆರೆಗಳಿಗೆ ನೀರು ತುಂಬುವಂತೆ ಆಧುನೀಕರಣ ಕಾಮಗಾರಿಯಲ್ಲಿ ಯೋಜಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌. ಚಲುವರಾಯಸ್ವಾಮಿ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದ ಬಳಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೆರೆಗಳಿಗೆ ನೀರು ತುಂಬಿಸಿದ ಬಳಿಕ ನೀರು ಮತ್ತೆ ನಾಲೆಗೆ ಹರಿದು ಬರದಂತೆ ಎಲ್ಲ ಕೆರೆಗಳಿಗೂ ಏರಿ ನಿರ್ಮಿಸಲಾಗಿದೆ. ನಾಲೆಯಲ್ಲಿ ನೀರು ಇಲ್ಲದಿದ್ದರೂ ಕೆರೆಗಳ ನೀರು ಕೃಷಿ ಮತ್ತು ಜನ, ಜಾನುವಾರುಗಳಿಗೆ ಸಿಗುತ್ತದೆ. ಹೊಸ ಮತ್ತು ಹಳೆಯ 254 ಸೇತುವೆಗಳು ಪುನರ್‌ ನಿರ್ಮಾಣವಾಗುತ್ತಿವೆ. 40ಕ್ಕೂ ಹೆಚ್ಚು ಸೋಪಾನಕಟ್ಟೆಗಳನ್ನು ನಿರ್ಮಿಸಲಾಗುತ್ತಿದೆ. ಈ ನಾಲೆಯ ಆಧುನೀಕರಣದಿಂದಾಗಿ 40ನೇ ಕಿ.ಮೀ.ಗೆ ಮೂರು ದಿನಗಳಲ್ಲಿ ತಲುಪಬೇಕಾದ ನೀರು ಒಂದೇ ದಿನದಲ್ಲಿ ತಲುಪುತ್ತದೆ ಎಂದು ಹೇಳಿದರು.

ಅಧಿಕಾರದಲ್ಲಿ ಇದ್ದಾಗ ಏನೂ ಮಾಡದ ಮಾಜಿ ಶಾಸಕರು ಜನರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ಬಹಳ ಬುದ್ಧಿವಂತಿಕೆಯಿಂದ ಮಾಡುತ್ತಿದ್ದಾರೆ. 1932ರಿಂದ ಈ ನಾಲೆಯ ಅಧುನೀಕರಣ ಆಗಿರಲಿಲ್ಲ. ಕೆ.ಎನ್‌. ನಾಗೇಗೌಡ ಅವರು ನೀರಾವರಿ ಸಚಿವರಾಗಿದ್ದಾಗ ಕೆಲವೆಡೆ ದುರಸ್ತಿ ಕೆಲಸ ಮಾತ್ರ ನಡೆದಿತ್ತು. ನಮ್ಮ ಸರ್ಕಾರ ₹300 ಕೋಟಿ ವೆಚ್ಚದಲ್ಲಿ ಆಧುನೀಕರಣ ಮಾಡುತ್ತಿದೆ. ಇದನ್ನು ಸಹಿಸದೆ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ವಿರೋಧಿಗಳು ಟೀಕೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಜಲಾಶಯದಲ್ಲಿ ಸದ್ಯ 85 ಅಡಿಗಳಷ್ಟು ನೀರಿದೆ. ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬೀಳುತ್ತಿಲ್ಲ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಒಟ್ಟಾರೆ ಇನ್ನು ನಾಲ್ಕೈದು ದಿನಗಳಲ್ಲಿ ನಾಲೆಯಲ್ಲಿ ಸರಾಗವಾಗಿ ನೀರು ಹರಿಯುವಂತೆ ಸಿದ್ದತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.