ADVERTISEMENT

ಸೇತುವೆ ಮೇಲೆ ಹರಿದ ನೀರು: ಸಂಪರ್ಕ ಕಡಿತವಾದ ಚೌಡೇನಹಳ್ಳಿ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 15:30 IST
Last Updated 26 ಅಕ್ಟೋಬರ್ 2024, 15:30 IST
ಕಿಕ್ಕೇರಿ ಹೋಬಳಿಯ ಚೌಡೇನಹಳ್ಳಿ ಗ್ರಾಮದ ಸೇತುವೆ ಮೇಲೆ ಮಳೆಯ ಆರ್ಭಟಕ್ಕೆ ಅಧಿಕವಾಗಿ ನೀರು ಹರಿದು ಗ್ರಾಮಸ್ಥರು ಸಂಚಾರಕ್ಕೆ ಸಂಚಕಾರವಾಗಿರುವುದು
ಕಿಕ್ಕೇರಿ ಹೋಬಳಿಯ ಚೌಡೇನಹಳ್ಳಿ ಗ್ರಾಮದ ಸೇತುವೆ ಮೇಲೆ ಮಳೆಯ ಆರ್ಭಟಕ್ಕೆ ಅಧಿಕವಾಗಿ ನೀರು ಹರಿದು ಗ್ರಾಮಸ್ಥರು ಸಂಚಾರಕ್ಕೆ ಸಂಚಕಾರವಾಗಿರುವುದು   

ಕಿಕ್ಕೇರಿ: ಧಾರಾಕಾರ ಮಳೆಯಿಂದ ಪಟ್ಟಣದ ಅಮಾನಿಕೆರೆ ಉಕ್ಕಿ ಚೌಡೇನಹಳ್ಳಿ ಗ್ರಾಮದ ಸೇತುವೆ ಮೇಲೆ ಹರಿದು ಶನಿವಾರ  ಗ್ರಾಮಸ್ಥರು ಸಂಚಾರಕ್ಕೆ ತೊಂದರೆ ಅನುಭವಿಸಿದರು.

ಗ್ರಾಮಕ್ಕೆ   ಸಾರಿಗೆ  ಸಂಪರ್ಕ ಕಡಿತವಾದ ಪರಿಣಾಮ ವಿದ್ಯಾರ್ಥಿಗಳು ಮನೆಯಲ್ಲೇ ಉಳಿಯುವಂತಾಯಿತು. ಖಾಸಗಿ ವಾಹನಗಳು ಗ್ರಾಮಕ್ಕೆ ಬರಲಾಗದ್ದರಿಂದ ವಯೋವೃದ್ಧರು, ಗರ್ಭಿಣಿಯರು ಆಸ್ಪತ್ರೆಗೆ ತೆರಳಲು ಪರಿತಪಿಸಿದರು. ಹಲವರು ಕೆ.ಆರ್. ಪೇಟೆ, ಕಿಕ್ಕೇರಿ ಮತ್ತಿತರ ಪ್ರದೇಶಗಳಿಗೆ  ನಾಲ್ಕೈದು ಕಿ.ಮೀ. ದೂರ ಸುತ್ತಿ ಬಳಸಿಕೊಂಡು  ತೆರಳಿದರು.

ಅಘಲಯ ಕೆರೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಕಿಕ್ಕೇರಿ ಅಮಾನಿಕೆರೆಗೆ ಹರಿದು ಬಂದಿದ್ದು, ಶಿಥಿಲವಾಗಿದ್ದ ಚೌಡೇನಹಳ್ಳಿ ಸೇತುವೆ ಮತ್ತಷ್ಟು ಹಾಳಾಯಿತು. ಹಲವೆಡೆ ಸೇತುವೆ ಬಿರುಕು ಬಿಟ್ಟು, ಕಲ್ಲುಗಳು ಕೊಚ್ಚಿಕೊಂಡು ಹೋಗಿವೆ. ರಾಜ್ಯಹೆದ್ದಾರಿಯ ಕೃಷ್ಣಾಪುರ ಗೇಟ್ ಮಾರ್ಗದಿಂದ ಮಾಕವಳ್ಳಿ ಕೋರಮಂಡಲ ಸಕ್ಕರೆ ಕಾರ್ಖಾನೆಗೆ ರೈತರು ಕಬ್ಬು ಸಾಗಣೆಗೆ   ಏಳೆಂಟು ಕಿ.ಮೀ. ದೂರ ಸುತ್ತಿಬಳಸಿ ಸಾಗಿದರು.

 ಪ್ರತಿ ವರ್ಷ ಕಿಕ್ಕೇರಿ ಅಮಾನಿಕೆರೆಯ ಕೋಡಿ ಬಿದ್ದರೆ ಚೌಡೇನಹಳ್ಳಿ ಸೇತುವೆ ಮುಳುಗಡೆಯಾಗುತ್ತದೆ. ಹಳೆಯ ಸೇತುವೆಯನ್ನು ದುರಸ್ತಿ ಜೊತೆಗೆ ಎತ್ತರಿಸಿದರೆ ಮಾತ್ರ ಚೌಡೇನಹಳ್ಳಿ ಗ್ರಾಮಸ್ಥರು ನೆಮ್ಮದಿಯಿಂದ ಓಡಾಡಬಹುದು ಎಂದು ರೈತಸಂಘದ ಮುಖಂಡ ನಾರಾಯಣಸ್ವಾಮಿ ತಮ್ಮ ಅಳಲು ತೋಡಿಕೊಂಡರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.