ಮಂಡ್ಯ: ‘ನನ್ನ ಪತಿ, ದಿವಂಗತ ಕೆ.ಎಸ್.ಪುಟ್ಟಣ್ಣಯ್ಯನವರ ಸತತ ಪ್ರಯತ್ನದಿಂದಾಗಿ ದುದ್ದ ಹೋಬಳಿಗಳಿಗೆ ಕೆರೆ ತುಂಬಿಸುವ ಯೋಜನೆ ಅನುಷ್ಠಾನಗೊಳ್ಳಲು ಸಾಧ್ಯವಾಯಿತು. ಆದರೆ, ಈಗಿನ ಶಾಸಕರು ನಮ್ಮ ಕುಟುಂಬವನ್ನು ಗೌರವಿಸದಿರಲಿ, ಕನಿಷ್ಠ ಪುಟ್ಟಣ್ಣಯ್ಯನವರವನ್ನು ಸ್ಮರಿಸಿಕೊಳ್ಳುವ ಕೆಲಸ ಮಾಡಲಿಲ್ಲ’ ಎಂದು ರೈತ ಸಂಘ ವರಿಷ್ಠೆ ಸುನೀತಾ ಪುಟ್ಟಣ್ಣಯ್ಯ ಕಣ್ಣೀರು ಹಾಕಿದರು.
ತಾಲ್ಲೂಕಿನ ಹುಲಿಕೆರೆ ಗ್ರಾಮಸ್ಥರು ಶುಕ್ರವಾರ ರಾತ್ರಿ ಆಯೋಜಿಸಿದ್ದ ಪುಟ್ಟಣ್ಣಯ್ಯನವರ ಕನಸಿನ ಕೂಸು ದುದ್ದ ಹೋಬಳಿಯ ಏತ ನೀರಾವರಿ ಯೋಜನೆ ರೂಪಿಸಿದ ಕೆ.ಎಸ್.ಪುಟ್ಟಣ್ಣಯ್ಯರವರ ಕುಟುಂಬಕ್ಕೆ ದುದ್ದ ಹೋಬಳಿಯ ಜನತೆ ನೀಡಿದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
‘ದುದ್ದಹೋಬಳಿಯ ಕೆರೆ ತುಂಬಿಸುವ ಯೋಜನೆಯು ಪುಟ್ಟಣ್ಣಯ್ಯನವರು ಶಾಸಕರಾಗಿದ್ದಾಗ ನೀರಾವರಿ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಯೋಜನೆ ರೂಪಿಸಿದರು. 2018 ಫೆಬ್ರವರಿಯಲ್ಲಿ ನನ್ನ ಪತಿ ನಿಧನರಾದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿಮ್ಮ ಕುಟುಂಬಕ್ಕೆ ಯಾವುದಾದರೂ ಸಹಾಯು ಬೇಕೇ ಎಂದು ಕೇಳಿದಾಗ, ನಾನು ಪುಟ್ಟಣ್ಣಯ್ಯನವರ ಕನಸಿನ ಕೂಸು ದುದ್ದಹೋಬಳಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅಸ್ತು ನೀಡಿ ಎಂದು ಕೇಳಿಕೊಂಡೆ, ಅವರ ಗೌರವಾರ್ಥ ದುದ್ದಹೋಬಳಿ ಗ್ರಾಮಗಳ ಕೆರೆ ನೀರು ತುಂಬಿಸುವ ಯೋಜನೆಗೆ ಅನುಮೋದನೆ ನೀಡಿದ್ದರು’ ಎಂದರು.
ಹಂತ ಹಂತವಾಗಿ ಯೋಜನೆ ಈಗ ಪೂರ್ಣಗೊಂಡಿದೆ. ಆದರೆ, ಶಾಸಕ ಪುಟ್ಟರಾಜು ಈ ಯೋಜನೆಯ ನನ್ನದು ಎಂದು ಹೇಳಿ, ಪುಟ್ಟಣ್ಣಯ್ಯನವರ ಪರಿಶ್ರಮವನ್ನು ಮರೆಮಾಚಿದ್ದಾರೆ, ಕೆಆರ್‌ಎಸ್ ಜಲಾಶಯದಲ್ಲಿ ಕೇವಲ 70 ಅಡಿ ನೀರಿದ್ದಾಗ ದುದ್ದ ಹೋಬಳಿಯ ರೈತರ ಜಮೀನಿನ ಬೆಳೆ ಒಣಗಿಹೋಗುತ್ತಿತ್ತು. ನನ್ನ ಪತಿ ಪುಟ್ಟಣ್ಣಯ್ಯನವರು ಹೋರಾಟ ನಡೆಸಿ ನಾಲೆಗಳಿಗೆ ನೀರು ಹರಿಸಿ ರೈತರ ರಕ್ಷಣೆ ಮಾಡಿದರು. ಇದನ್ನು ದುದ್ದಹೋಬಳಿಯ ಜನತೆ ಸ್ಮರಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಯುವ ನಾಯಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ ‘ದುದ್ದ ಹೋಬಳಿ ಕೆರೆತುಂಬಿಸುವ ಯೋಜನೆಯನ್ನು ಕೆ.ಎಸ್.ಪುಟ್ಟಣ್ಣಯ್ಯ ಪ್ರಾರಂಭಿಸಿದ್ದರು, ಪುಟ್ಟರಾಜು ಪೂರ್ಣಗೊಳಿಸಿದ್ದಾರೆ. ನಾವೆಲ್ಲರೂ ಕೆಲಸ ಮಾಡಿ ಜನರಿಗೆ ಒಳ್ಳೆಯದು ಮಾಡೋಣ ಎಂಬ ದೊಡ್ಡತನವನ್ನು ಶಾಸಕ ಪುಟ್ಟರಾಜು ತೋರಬೇಕಿತ್ತು. ನಾನು ನಡೆಸುತ್ತಿರುವ ಪಾದಯಾತ್ರೆಯ ವೇಳೆ ಜನರು, ನಿಮ್ಮಪ್ಪ ನಮಗೆ ನೀರು ಕೊಟ್ಟಿದ್ದಾನೆ, ನಿಮ್ಮ ಋಣ ತೀರಿಸುತ್ತೇವೆ’ಎಂದು ಹೇಳುತ್ತಿದ್ದಾರೆ’ ಎಂದರು.
ರೈತ ಸಂಘದ ರಾಜ್ಯ ಘಟಕ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಶಿವಳ್ಳಿ ಕೆಂಪೇಗೌಡ, ಮಹಿಳಾ ನಾಯಕಿ ನಂದಿನಿ ಜಯರಾಮ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ, ಮುಖಂಡರಾದ ಶಿವಳ್ಳಿ ಚಂದ್ರಣ್ಣ, ಸ್ಮಿತಾ ಪುಟ್ಟಣ್ಣಯ್ಯ, ಅಕ್ಷತಾ ಪುಟ್ಟಣ್ಣಯ್ಯ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.