ADVERTISEMENT

ಅನ್ಯಾಯದ ವಿರುದ್ಧ ಬೀದಿಗಿಳಿದು ಪ್ರತಿಭಟಿಸಬೇಕು: ಸತೀಶ್ ಜವರೇಗೌಡ ಕರೆ

ಕಾವ್ಯಸಂಗಮ–ಕವಿಗೋಷ್ಠಿ ಉದ್ಫಾಟಿಸಿ ಟಿ.ಸತೀಶ್ ಜವರೇಗೌಡ ಕರೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 14:41 IST
Last Updated 23 ನವೆಂಬರ್ 2024, 14:41 IST
ಪಾಂಡವಪುರದಲ್ಲಿ ಶನಿವಾರ ಕಾರ್ತಿಕ ಮಾಸದ ಪ್ರಯುಕ್ತ ಆಯೋಜಿಸಿದ್ದ ಕವಿಗೋಷ್ಠಿಯನ್ನು ಕವಿ ಟಿ.ಸತೀಶ್ ಜವರೇಗೌಡ ಉದ್ಫಾಟಿಸಿದರು. ಶಿವಕುಮಾರ್, ಹಳ್ಳಿ ವೆಂಕಟೇಶ್, ನಿಶಾ ಮುಳಗುಂದ, ಕಟ್ಟೆ ಕೃಷ್ಣಸ್ವಾಮಿ ಭಾಗವಹಿಸಿದ್ದರು
ಪಾಂಡವಪುರದಲ್ಲಿ ಶನಿವಾರ ಕಾರ್ತಿಕ ಮಾಸದ ಪ್ರಯುಕ್ತ ಆಯೋಜಿಸಿದ್ದ ಕವಿಗೋಷ್ಠಿಯನ್ನು ಕವಿ ಟಿ.ಸತೀಶ್ ಜವರೇಗೌಡ ಉದ್ಫಾಟಿಸಿದರು. ಶಿವಕುಮಾರ್, ಹಳ್ಳಿ ವೆಂಕಟೇಶ್, ನಿಶಾ ಮುಳಗುಂದ, ಕಟ್ಟೆ ಕೃಷ್ಣಸ್ವಾಮಿ ಭಾಗವಹಿಸಿದ್ದರು   

ಪಾಂಡವಪುರ: 87ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಜಿಲ್ಲೆಯ ಲೇಖಕರು, ಬರಹಗಾರರು, ಸಾಹಿತಿಗಳು ದನಿ ಎತ್ತಿದಿದ್ದರಿಂದಲೇ ಹಿರಿಯ ಸಾಹಿತಿ ಅಪ್ಪಟ ಗಾಂಧಿವಾದಿ ಗೊ.ರು.ಚನ್ನಬಸಪ್ಪ ಅವರನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಮಾಡಲು ಸಾಧ್ಯವಾಯಿತು. ಇಲ್ಲವಾದರೆ ಉದ್ಯಮಿಯೋ, ರಾಜಕಾರಣಿಯೋ ಅಧ್ಯಕ್ಷರಾಗಿ ಬಿಡುತ್ತಿದ್ದರು ಎಂದು ಕವಿ ಟಿ.ಸತೀಶ್ ಜವರೇಗೌಡ ಹೇಳಿದರು.

ಪಟ್ಟಣದಲ್ಲಿನ ಬಾಲಶನೇಶ್ವರಸ್ವಾಮಿ ಭಕ್ತಮಂಡಳಿ ಶನಿವಾರ ಆಯೋಜಿಸಿದ್ದ ಕಾರ್ತಿಕ ಮಾಸದ ಲಕ್ಷ ದೀಪೋತ್ಸವ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಡೆದ ‘ಕಾವ್ಯಸಂಗಮ–ಕವಿಗೋಷ್ಠಿ’ಯನ್ನು ಉದ್ಫಾಟಿಸಿ ಅವರು ಮಾತನಾಡಿದರು.

ಬರಹದ ಮೂಲಕ ದನಿಎತ್ತುವುದು ಎಷ್ಟು ಮುಖ್ಯವೋ, ಅನ್ಯಾಯದ ವಿರುದ್ಧ ಬೀದಿಗಿಳಿದ ಹೋರಾಟ ಮಾಡುವುದು ಅಷ್ಟೇ ಮುಖ್ಯ. ಮಂಡ್ಯ ಸಾಹಿತ್ಯ ಸಮ್ಮೇಳನದ ಸಾಹಿತ್ಯಗಳಲ್ಲದವರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಪರಿಷತ್ತಿನ ಮಹೇಶ್ ಜೋಷಿಯವರು ಅಲ್ಲಲ್ಲಿ ಹೇಳುತ್ತಿದ್ದರು. ಇದಕ್ಕೆ ಜಿಲ್ಲೆಯ ಲೇಖಕರು, ಬರಹಗಾರರು ಪ್ರತಿರೋಧ ವ್ಯಕ್ತಪಡಿಸಿ ಬೀದಿಗಿಳಿದು ಪ್ರತಿಭಟಿಸಿದೆವು. ಅಲ್ಲದೇ ಪರ್ಯಾಯ ಸಮ್ಮೇಳನದ ನಡೆಸುವುದಾಗಿ ಎಚ್ಚರಿಸಿದಾಗ ಎಚ್ಚೆತ್ತುಗೊಂಡ ಕಸಾಪ ಸಂಘಟನಾಕಾರು ಗೊ.ರು.ಚನ್ನಬಸಪ್ಪನವನರನ್ನು ಅಧ್ಯಕ್ಷರನ್ನಾಗಿ ಮಾಡಿದರು. ಸಮಾಜದಲ್ಲಿನ ಅನ್ಯಾಯದ ವಿರುದ್ಧ ಬರೆಯುವುದರ ಜೊತೆಗೆ ಸಂದರ್ಭ ಬಂದಾಗ ಹೋರಾಟಕ್ಕೂ ಇಳಿಯಬೇಕಿದೆ ಎಂದರು.

ADVERTISEMENT

ಒಬ್ಬ ಕವಿ ಜಾತ್ಯತೀತ–ಧರ್ಮಾತೀತವಾಗಿ ಬರೆದರೆ ಸಾಲದು. ಅವನು ಹಾಗೇ ನಡೆದುಕೊಳ್ಳಬೇಕು. ಅಲ್ಲದೇ ಸಮಾಜದ ಎಲ್ಲ ಅನ್ಯಾಯಗಳನ್ನು ಕಾವ್ಯಮೂಲಕ ಪ್ರತಿಭಟಿಸಿ ತಣ್ಣಗೆ ಕೂತರೆ ಸಾಲದು, ಸಮಾಜದಲ್ಲಿ ಅನ್ಯಾಯ ನಡೆದಾಗ ಪಲಾಯನ ಮಾಡದೆ ಅವಶ್ಯಕತೆಯ ಸಂದರ್ಭದಲ್ಲಿ ಹೋರಾಟ ನಡೆಸಲೇಬೇಕಿದೆ. ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ, ದೌರ್ಜನ್ಯ, ದಬ್ಬಾಳಿಕೆಯನ್ನು ಪ್ರತಿಭಟಿಸುವ ಮನೋಭಾವ ಬೆಳೆಸಿಕೊಳ್ಳಬೇಕಿದೆ ಎಂದು ಹೇಳಿದರು.

ಎಲ್ಲವನ್ನು ವಿಕಾಸಗೊಳಿಸುವ ಶಕ್ತಿ ಇರುವುದು ಸಾಹಿತ್ಯಕ್ಕೆ ಮಾತ್ರ. ನಮ್ಮ ಸಾಹಿತ್ಯ ಪ್ರಾರಂಭವಾದದ್ದೆ ಕಾವ್ಯ ಪರಂಪರೆಯಿಂದ. ನಮ್ಮ ಆದಿ ಕವಿ ಪಂಪ ಪ್ರಾರಂಭಿಸಿದ ‘ಮನುಷ್ಯ ಜಾತಿ ತಾನೊಂದೇ ವಲಂ’ಎಂಬ ಕಾವ್ಯ ಪರಂಪರೆಯು ಚಾರಿತ್ರಿಕವಾದುದು. ಇಂತಹ ಪರಂಪರೆಯನ್ನು ಮುಂದುವರಿಸಿದ ಕುವೆಂಪು ಅವರು ವಿಶ್ವಮಾನದ ದೃಷ್ಟಿಯಿಂದ ಬರೆಯುತ್ತಾ ಹೋದರು. ಕನ್ನಡ ಸಾಹಿತ್ಯವು ವಿಶಾಲವಾಗಿ, ಸಮೃದ್ಧಿಯಿಂದ ಕೂಡಿದೆ. ತಮಿಳು ಸಾಹಿತ್ಯದ ನಂತರದಲ್ಲಿ ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ  ಹಿರಿಮೆ ಇದೆ. ಸಮಾಜದ ಎಲ್ಲ ಜನವರ್ಗಗಳು ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಸಾಮಾನ್ಯನಿಂದ ಹಿಡಿದು ಪ್ರಧಾನಿಯವರೆಗೂ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ. ಪ್ರಧಾನಿಗಳಾಗಿದ್ದ ಜವಾರಲಾಲ್ ನೆಹರು ಮತ್ತು ವಾಜಪೇಯಿ ಅವರಂತಹವರು ಕವಿತೆಗಳನ್ನು ಬರೆಯುವುದರಲ್ಲಿ ತೊಡಗಿಸಿಕೊಂಡಿದ್ದರು ಎಂಬುದನ್ನು ನಾವು ಅರಿಯಬೇಕಿದೆ ಎಂದು ಹೇಳಿದರು.

ಸಾಹಿತ್ಯ ರಚನೆಯಲ್ಲಿ ಸಾಮಾಜಿಕ ಜಾಲ ತಾಣವು ವರವೂ ಹೌದು ಶಾಪವು ಹೌದು. ಪ್ರಸ್ತುತದಲ್ಲಿ ಬರೆಯುವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗೆ ಬರೆಯುವವರು ಪುಸ್ತಕ ಪ್ರಕಟಿಸಲು ಆರ್ಥಿಕವಾಗಿ ಕಷ್ಟವಾಗುತ್ತಿದೆಯಲ್ಲದೆ ಪ್ರಕಟಣೆಗೆ ತಿರಸ್ಕೃತವಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಬರಹಗಾರರು ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವುದು ಅನಿವಾರ್ಯವಾಗಿದೆ. ಸಾಮಾಜಿಕ ಜಾಲತಾಣವು ಬರವಣಿಗೆಯ ಅಭಿವೃಕ್ತಿಯಾಗಿದೆ. ಆದರೆ ಸಾಮಾಜಿಕ ತಾಲ ತಾಣದ ವಿವಿಧ ಶಾಖೆಗಳು ಓದುವ ಬರೆಯವ ಪರಂಪರೆಯನ್ನು ಮತ್ತು ಪುಸ್ತಕ ಕೊಂಡು ಓದುವ ಹವ್ಯಾಸವನ್ನು ಕಸಿದುಕೊಂಡಿವೆ ಎಂದರು.

ವರ್ತಮಾನದ ತಲ್ಲಣಗಳನ್ನು ಸಮಾಜ ಅನುಭವಿಸಿದೆ. ಕವಿಗೆ ತುಂಬ ಸಾಮಾಜಿಕ ಹೊಣೆಗಾರಿಕೆ ಇದೆ. ಕುವೆಂಪು ಅವರ ಕನಸಿನ ಸರ್ವಜನಾಂಗದ ತೋಟ ನೆಲದಲ್ಲಿ ಹಿಂಸೆ ತಲೆಎತ್ತಿದೆ. ಮಂಡ್ಯದಂತಹ ನೆಲದಲ್ಲಿಯೂ ಕೋಮು ಹಿಂಸೆ ತಲೆಎತ್ತುತ್ತಿದೆ. ಇಂತಹ ಸಂದರ್ಭದಲ್ಲಿ ಬರಹಗಾರ ಸಾಮಾಜಿಕ ಹೊಣೆಗಾರಿಕೆಯನ್ನು ಅರಿತು ಬರೆಯಬೇಕಿದೆ. ಅಹಿಂಸಾ ಸಮಾಜವನ್ನು ಕಟ್ಟುವ ಕಡೆ ಸಾಹಿತ್ಯ ರಚನೆಯಾಗಬೇಕಿದೆ. ಸಮಾಜವನ್ನು ಒಡೆಯು ಕೆಲಸ ಮಾಡದೇ ಕಟ್ಟುವ ಕೆಲಸವನ್ನು ನಾವೆಲ್ಲ ಮಾಡಬೇಕಿದೆ. ಈ ನಿಟ್ಟಿನಲ್ಲಿ ಬರಹಗಾರ, ಲೇಖಕ, ಸಾಹಿತಿಗಳು ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಪತ್ರಕರ್ತ ಮಂಡ್ಯ ಶಿವಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಚನ್ನರಾಯಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾ‍ಪಕ ಹಳ್ಳಿ ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಕವಿಯತ್ರಿ ನಿಶಾ ಮುಳಗುಂದ, ಸಾಹಿತಿ ದೇವಪ್ಪ, ಪುರಸಭೆ ಸದಸ್ಯ ಎ.ಕೃಷ್ಣ ಅಣ್ಣಯ್ಯ, ಲಿಂಗಾಯುತ ಮಹಾಸಭಾದ ಅಧ್ಯಕ್ಷ ಎಂ.ಎಸ್.ಮಂಜುನಾಥ್, ಬಾಲಶನೇಶ್ವರಸ್ವಾಮಿ ಭಕ್ತ ಮಂಡಳಿಯ ಧರ್ಮದರ್ಶಿ ರವಿತೇಜ, ಅಭಿನವಶ್ರೀ ಪ್ರಶಸ್ತಿ ಪುರಸ್ಕೃತ ಕಟ್ಟೆ ಕೃಷ್ಣಸ್ವಾಮಿ ಉಪಸ್ಥಿತರಿದ್ದರು. ಕವಿಗಳು ಕವಿತೆ ವಾಚಿಸಿದರು.

ಪಾಂಡವಪುರದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಶನಿವಾರ ನಡೆದ ಕವಿಗೋಷ್ಠಿಯಲ್ಲಿ ಕವಿ ಟಿ.ಸತೀಶ್ ಜವರೇಗೌಡ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.