ಮಂಡ್ಯ: ‘ಅತ್ಯಂತ ಬಹುಮತದಿಂದ ಎಚ್.ಡಿ. ಕುಮಾರಸ್ವಾಮಿ ಗೆದ್ದಿದ್ದಾರೆ. ಕೇಂದ್ರದಲ್ಲಿ ಉತ್ತಮವಾದ ಖಾತೆಯನ್ನು ಪಡೆದುಕೊಂಡಿದ್ದಾರೆ. ಜಿಲ್ಲೆಯ ಯುವಕರಿಗೆ ಉದ್ಯೋಗ ಕೊಡಿಸುವುದನ್ನು ಸ್ವಾಗತಿಸುತ್ತೇನೆ. ಅಭಿವೃದ್ಧಿ ಬಗ್ಗೆ ಸಹಕಾರ ಬೇಕಿದ್ದರೆ ನೀಡೋದಕ್ಕೆ ನಾವು ಸಿದ್ಧ. ಚುನಾವಣೆ ಮುಗಿದಿದ್ದು ಟೀಕೆ, ಟಿಪ್ಪಣಿ ಬೇಡ. ನಮಗೆ ಅಭಿವೃದ್ಧಿ ಅಷ್ಟೇ ಬೇಕು’ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದರು.
ಬುಧವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಚನ್ನಪಟ್ಟಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸ್ಪರ್ಧೆ ಮಾಡೋ ಅವಶ್ಯಕತೆಯಿಲ್ಲ. ಸ್ಪರ್ಧೆ ಮಾಡುತ್ತಾರೆ ಎನ್ನುವುದೆಲ್ಲಾ ಊಹಾ ಪೋಹಾ ಅಷ್ಟೇ? ಡಿ.ಕೆ.ಸುರೇಶ್ ಸಂಸದ ಚುನಾವಣೆಯಲ್ಲಿ ಸೋತಿರುವುದರಿಂದ ಅವರು ಅಲ್ಲಿ ಸ್ಪರ್ಧೆ ಮಾಡುತ್ತಾರೆ ಅನ್ನೋ ಮಾತಿದೆ. ಡಿ.ಕೆ.ಸುರೇಶ್ ಅವರ ಸ್ಪರ್ಧೆ ಬಗ್ಗೆ ಪಕ್ಷ ಮತ್ತು ಮುಖ್ಯಮಂತ್ರಿ ನಿರ್ಧಾರ ಮಾಡುತ್ತಾರೆ ಎಂದರು.
ದರ್ಶನ್ ಬಿಡುಗಡೆಗೆ ಒತ್ತಡ ಹಾಕಿಲ್ಲ
ಯಾವ ಸಚಿವರೂ ನಟ ದರ್ಶನ್ ಬಿಡುಗಡೆಗೆ ಒತ್ತಡ ಹಾಕಿಲ್ಲ. ನಮ್ಮ ಮುಖ್ಯಮಂತ್ರಿ ಒತ್ತಡಕ್ಕೆ ಮಣಿಯುವವರು ಅಲ್ಲ. ನ್ಯಾಯಾಲಯದಲ್ಲಿ ತೀರ್ಮಾನ ಆಗುತ್ತದೆ. ನಿಷ್ಪಕ್ಷಪಾತ ತನಿಖೆಗೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಬಿಜೆಪಿಗೆ ನೈತಿಕತೆ ಇಲ್ಲ
ಬಿಜೆಪಿಯವರಿಗೆ ಯಾವ ನೈತಿಕತೆಯಿದೆ. ರಾಜಕೀಯ ಮಾಡೋದು ಅವಶ್ಯಕತೆ ಇದೆಯಾ? ಪೆಟ್ರೋಲ್ ₹70ರಿಂದ ₹100 ಹೋದಾಗ ಏನು ಮಾಡುತ್ತಿದ್ದರು, ಮನಮೋಹನ್ ಸಿಂಗ್ ₹1 ಲಕ್ಷ ಕೋಟಿ ಕೊಟ್ಟು ಸಬ್ಸಿಡಿ ನೀಡಿ ತೈಲ ಬೆಲೆ ಕಡಿಮೆ ಮಾಡಿದರು. ಮಹಾರಾಷ್ಟ್ರ, ಮಧ್ಯಪ್ರದೇಶ, ಕೇರಳದಲ್ಲಿ ಬೆಲೆ ಎಷ್ಟಿದೆ. ರೈತರಿಗೆ ಅನುಕೂಲ ಮಾಡಬೇಕು. ಅಭಿವೃದ್ಧಿ ಮಾಡಬೇಕು ಅಂದಾಗ ಬೆಲೆ ಏರಿಕೆಯಾಗುತ್ತೆ. ಟ್ಯಾಕ್ಸ್ ಇಲ್ಲದೆ ಸರ್ಕಾರ ನಡೆಸೋಕೆ ಆಗುತ್ತಾ? ಆಗ ಎರಡು ಲಕ್ಷ ಕೋಟಿ ಬಜೆಟ್ ಆಗುತ್ತಿತ್ತು. ಬಿಜೆಪಿಯವರ ರೀತಿ ನಾವು ಬೆಲೆ ಏರಿಕೆ ಮಾಡಿಲ್ಲ. ಇತಿಮಿತಿಯಲ್ಲಿ ಬೆಲೆ ಏರಿಕೆ ಮಾಡಿದ್ದೇವೆ ಎಂದು ತಿರುಗೇಟು ನೀಡಿದರು.
ಅಶೋಕ್‌ಗೆ ತಿಳಿವಳಿಕೆ ಕಡಿಮೆ
ಸರ್ಕಾರ ಆರ್ಥಿಕ ದಿವಾಳಿಯಾಗಿದೆ ಎಂಬ ಅಶೋಕ ಆರೋಪಕ್ಕೆ ಪ್ರತಿಕ್ರಿಯಿಸಿ, ‘ಸರ್ಕಾರದಿಂದ ಚೆಕ್ ಬೌನ್ಸ್ ಆಗಿದೆಯಾ? ನೌಕರರ ಸಂಬಳ ನಿಲ್ಲಿಸಿದೆಯಾ? ಸಾರ್ವಜನಿಕರಿಗೆ ಕೊಡುವ ಸೇವೆ ನಿಂತಿದೆಯಾ? ಸಿದ್ದರಾಮಯ್ಯ ಅವರ ರೀತಿ ‘ಗುಡ್ ಗೌರ್ನಮೆಂಟ್’ ಕೊಡುವವರು ಮತ್ತೊಬ್ಬರಿಲ್ಲ. ಅಶೋಕ್ ಅವರು ತಮ್ಮ ಸ್ಥಾನದ ಬಗ್ಗೆ ಗಾಂಭೀರ್ಯ ಅರಿತು ಮಾತನಾಡಬೇಕು. ಸಿ.ಎಂ ಹೇಳಿದಂತೆ ಅಶೋಕ ಅವರಿಗೆ ತಿಳವಳಿಕೆ, ಮಾಹಿತಿ ಕಡಿಮೆ ಎಂದು ವ್ಯಂಗ್ಯವಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.