ಮಂಡ್ಯ: ‘87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಟಿಪ್ಪು ಸುಲ್ತಾನ್ ಬಗ್ಗೆ ವಿಚಾರಗೋಷ್ಠಿ ಇಟ್ಟುಕೊಳ್ಳಬೇಕು ಎಂದು ಕೆಲವರು ಆಗ್ರಹ ಮಾಡಿರುವುದು ಖಂಡನೀಯ. ಬುದ್ಧಿಜೀವಿಗಳ ಆಗ್ರಹಕ್ಕೆ ಮಣಿದು ಗೋಷ್ಠಿ ನಡೆಸಿದರೆ, ಉಗ್ರ ಪ್ರತಿಭಟನೆ ನಡೆಸುತ್ತೇವೆ’ ಎಂದು ‘ಬಜರಂಗಸೇನೆ ಕರ್ನಾಟಕ’ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಬಿ.ಮಂಜುನಾಥ್ ಎಚ್ಚರಿಕೆ ನೀಡಿದರು.
‘ಟಿಪ್ಪು ಒಬ್ಬ ಕನ್ನಡ ದ್ವೇಷಿ. ಕನ್ನಡಕ್ಕೆ ಅನ್ಯಾಯ ಮಾಡಿದ ದ್ರೋಹಿ. ತನ್ನ ಆಳ್ವಿಕೆಯಲ್ಲಿ ಕನ್ನಡವನ್ನು ಕಡೆಗಣಿಸಿ, ಪರ್ಷಿಯನ್ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಮಾಡಿದ್ದ. ಅದಕ್ಕೆ ಬೇಕಾದ ಎಲ್ಲ ದಾಖಲೆಗಳು ಮೈಸೂರು ಅರಮನೆಯ ಪತ್ರಾಗಾರದಲ್ಲಿ ಇವೆ. ಪಹಣಿ, ಅಸಾಮಿ, ಕವಾಯತು, ಮೊಹರು, ಅಸಲು, ಇನಾಮು, ಉಮೇದು, ತೂಫಾನು, ಇರಾದೆ ಮುಂತಾದ ಪರ್ಷಿಯನ್ ಪದಗಳು ಟಿಪ್ಪು ಸುಲ್ತಾನ್ ಕಾರಣಕ್ಕೆ ಬಳಕೆಗೆ ಬಂದವು’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಮೈಸೂರು ಮಹಾರಾಜರ ಬಳಿ ಕುದುರೆ ನೋಡಿಕೊಳ್ಳಲು ಕೆಲಸಕ್ಕೆ ಬಂದ ಹೈದರಾಲಿ, ಮಹಾರಾಜರಿಗೆ ಮೋಸ ಮಾಡಿ, ಅಕ್ರಮ ಬಂಧನದಲ್ಲಿಟ್ಟು, ರಾಜ್ಯವನ್ನು ಕಿತ್ತುಕೊಂಡ ಒಬ್ಬ ರಾಜದ್ರೋಹಿ. ಮೂಡಲಬಾಗಿಲು ಆಂಜನೇಯಸ್ವಾಮಿ ದೇವಸ್ಥಾನ ಸೇರಿದಂತೆ ಹತ್ತಾರು ದೇವಾಲಯಗಳನ್ನು ಧ್ವಂಸ ಮಾಡಿ ಆ ಜಾಗದಲ್ಲಿ ಮಸೀದಿ ಕಟ್ಟಿದ. ಲಕ್ಷಾಂತರ ಹಿಂದೂಗಳನ್ನು ಮತಾಂತರ ಮಾಡಿದ ಹಿಂದೂ ವಿರೋಧಿ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.