ADVERTISEMENT

ಶ್ರೀರಂಗಪಟ್ಟಣ | ಮೂರು ಬಾರಿ ಮುಳುಗಿತ್ತು ವೆಲ್ಲೆಸ್ಲಿ ಸೇತುವೆ!

ಕಾವೇರಿ ನದಿಯಲ್ಲಿ ಉಂಟಾದ ಪ್ರವಾಹ

ಗಣಂಗೂರು ನಂಜೇಗೌಡ
Published 24 ಜುಲೈ 2024, 6:26 IST
Last Updated 24 ಜುಲೈ 2024, 6:26 IST
ಕೆಆರ್‌ಎಸ್‌ ಅಣೆಕಟ್ಟೆಯಿಂದ ಆ.8, 2022ರಂದು 97,969 ಕ್ಯುಸೆಕ್‌ ನೀರನ್ನು ನದಿಗೆ ಬಿಟ್ಟಾಗ ಶ್ರೀರಂಗಪಟ್ಟಣದ ಐತಿಹಾಸಿಕ ವೆಲ್ಲೆಸ್ಲಿ ಸೇತುವೆ ಬಳಿ ಕಾವೇರಿ ನದಿ ಮೈದುಂಬಿ ಹರಿಯುತ್ತಿದ್ದ ದೃಶ್ಯ
ಕೆಆರ್‌ಎಸ್‌ ಅಣೆಕಟ್ಟೆಯಿಂದ ಆ.8, 2022ರಂದು 97,969 ಕ್ಯುಸೆಕ್‌ ನೀರನ್ನು ನದಿಗೆ ಬಿಟ್ಟಾಗ ಶ್ರೀರಂಗಪಟ್ಟಣದ ಐತಿಹಾಸಿಕ ವೆಲ್ಲೆಸ್ಲಿ ಸೇತುವೆ ಬಳಿ ಕಾವೇರಿ ನದಿ ಮೈದುಂಬಿ ಹರಿಯುತ್ತಿದ್ದ ದೃಶ್ಯ   

ಶ್ರೀರಂಗಪಟ್ಟಣ: ಕಾವೇರಿ ನದಿಯಲ್ಲಿ ಉಂಟಾದ ಪ್ರವಾಹದಿಂದಾಗಿ, ಪಟ್ಟಣದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ 1804ರಲ್ಲಿ ನಿರ್ಮಿಸಿರುವ ಐತಿಹಾಸಿಕ ವೆಲ್ಲೆಸ್ಲಿ ಸೇತುವೆ ಇದುವರೆಗೆ ಮೂರು ಬಾರಿ ಸಂಪೂರ್ಣ ಮುಳುಗಡೆಯಾಗಿತ್ತು.

ಕೆಆರ್‌ಎಸ್‌ ಅಣೆಕಟ್ಟೆ ನಿರ್ಮಾಣ ಕಾರ್ಯ ಆರಂಭ (1911) ವಾದ 13 ವರ್ಷಗಳ ಬಳಿಕ, ಅಂದರೆ 1924ರಲ್ಲಿ ಕಾವೇರಿ ಕಣಿವೆಯಲ್ಲಿ ಭಾರಿ ಮಳೆ ಸುರಿದು ನದಿಯಲ್ಲಿ ಭೀಕರ ಸ್ವರೂಪದ ಪ್ರವಾಹ ಉಂಟಾಗಿ, ಆ ವರ್ಷದ ಜುಲೈ 22ರಂದು ನದಿಯಲ್ಲಿ 2 ಲಕ್ಷದ 90 ಸಾವಿರ ಕ್ಯುಸೆಕ್‌ ನೀರು ಹರಿದಿತ್ತು. ಇದು ಅಣೆಕಟ್ಟೆ ನಿರ್ಮಾಣ ಕಾರ್ಯ ಶುರುವಾದ ಬಳಿಕ ಕಾವೇರಿ ನದಿಯಲ್ಲಿ ಉಂಟಾದ ಇದುವರೆಗೆ ಅತಿ ದೊಡ್ಡ ಪ್ರವಾಹ ಎನಿಸಿದೆ.

ಆ ಸಂದರ್ಭದಲ್ಲಿ ನಿರ್ಮಾಣ ಹಂತದಲ್ಲಿದ್ದ ಕನ್ನಂಬಾಡಿ ಕಟ್ಟೆಯ ಮೇಲೆ 11 ಅಡಿಗಳಷ್ಟು ನೀರು ಹರಿದು ಅಣೆಕಟ್ಟೆಗೆ ಆಧಾರವಾಗಿ ನಿರ್ಮಿಸುತ್ತಿದ್ದ ಇಳಿಜಾರು ಮಾದರಿಯ ರಚನೆಯ ಒಂದು ಭಾಗ ಕೊಚ್ಚಿ ಹೋಗಿತ್ತು. ಜಲಾಶಯದ ತಗ್ಗಿನಲ್ಲಿರುವ ವೆಲ್ಲೆಸ್ಲಿ ಸೇತುವೆ ಸಂಪೂರ್ಣ ಮುಳುಗುತ್ತು. ಪಟ್ಟಣದ ಕೋಟೆಗೆ ಹೊಂದಿಕೊಂಡ ಕಂದಕಗಳು ಜಲಾವೃತವಾಗಿದ್ದವು ಎಂದು ಕಾವೇರಿ ನೀರಾವರಿ ನಿಗಮದ ಮೂಲಗಳು ತಿಳಿಸಿವೆ.

ADVERTISEMENT

ಬೆಂಗಳೂರು– ಮೈಸೂರು ನಗರಗಳ ನಡುವೆ ಅಂದು ಪ್ರಮುಖ ಸಂಪರ್ಕ ಕೊಂಡಿಯಾಗಿದ್ದ ವೆಲ್ಲೆಸ್ಲಿ ಸೇತುವೆ ಮುಳುಗಿದ್ದರಿಂದ ಈ ಎರಡೂ ನಗರಗಳ ನಡುವೆ ವಾಹನ ಮತ್ತು ಜನ ಸಂಚಾರ ಸ್ಥಗಿತವಾಗಿತ್ತು ಎಂದು ಆಂಗ್ಲ ದೈನಿಕ ದಿ ಹಿಂದೂ ಪತ್ರಿಕೆ ಕೂಡ ಜುಲೈ 22ರಂದು ‘ಎ ಹಂಡ್ರೆಡ್‌ ಇಯರ್ಸ್‌ ಎಗೊ‘ ಅಂಕಣದಲ್ಲಿ ಪ್ರಕಟಿಸಿದೆ.

ಕಾವೇರಿ ನದಿಯ ಪ್ರವಾಹದಿಂದಾಗಿ 1924ರ ಜುಲೈ 18ರಂದು ತಮಿಳುನಾಡಿನ ಕೊಲೆರೂನ್‌ ಸೇತುವೆ ಕೊಚ್ಚಿ ಹೋಗಿದೆ ಎಂದೂ ಈ ಪತ್ರಿಕೆ ವರದಿ ಮಾಡಿದೆ. ಆದರೆ ಅಂದು ನದಿಯಲ್ಲಿ ಎಷ್ಟು ಕ್ಯುಸೆಕ್‌ ನೀರು ಹರಿದಿತ್ತು ಎಂದು ಉಲ್ಲೇಖಿಸಿಲ್ಲ.

1961ರ ಜುಲೈ 6ರಂದು ಅಣೆಕಟ್ಟೆಯಿಂದ ನದಿಗೆ 2,13,115 ಕ್ಯುಸೆಕ್‌ ನೀರು ಹರಿಸಲಾಗಿತ್ತು. 1991ರ ಜುಲೈ 27ರಂದು ಕೂಡ 2,11,736 ಕ್ಯುಸೆಕ್‌ ನೀರು ಹರಿಸಿದಾಗಲೂ ಈ ಸೇತುವೆ ಮುಳುಗಿತ್ತು. ನಂತರ 2019ರ ಆ.12ರಂದು ಜಲಾಶಯದಿಂದ 1,51,315 ಕ್ಯುಸೆಕ್‌ ನೀರನ್ನು ನದಿಗೆ ಬಿಡಲಾಗಿತ್ತು ಎಂದು ಕಾವೇರಿ ನೀರಾವರಿ ನಿಗಮದ ಅಂಕಿ–ಅಂಶಗಳು ತಿಳಿಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.