ADVERTISEMENT

ಜೆಡಿಎಸ್‌ ಗೆಲುವು ತಡೆಯಲು ಅಸಾಧ್ಯ: ಸಿ.ಎಸ್.ಪುಟ್ಟರಾಜು

50 ಸಾವಿರ ಅಧಿಕ ಮತಗಳ ಅಂತರದಲ್ಲಿ ಗೆಲ್ಲುವೆ: ಶಾಸಕ ಸಿ.ಎಸ್.ಪುಟ್ಟರಾಜು

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 5:54 IST
Last Updated 11 ಮಾರ್ಚ್ 2023, 5:54 IST
ಪಾಂಡವಪುರ ತಾ‌ಲ್ಲೂಕಿನ ಚಿಕ್ಕಬ್ಯಾಡರಹಳ್ಳಿ ಸರ್ಕಲ್‌ನಲ್ಲಿ ಆಯೋಜಿಸಿದ್ದ ಚಿಕ್ಕಾಡೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರ ಸಮಾವೇಶವನ್ನು ಶಾಸಕ ಸಿ.ಎಸ್.ಪುಟ್ಟರಾಜು ಉದ್ಪಾಟಿಸಿದರು
ಪಾಂಡವಪುರ ತಾ‌ಲ್ಲೂಕಿನ ಚಿಕ್ಕಬ್ಯಾಡರಹಳ್ಳಿ ಸರ್ಕಲ್‌ನಲ್ಲಿ ಆಯೋಜಿಸಿದ್ದ ಚಿಕ್ಕಾಡೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರ ಸಮಾವೇಶವನ್ನು ಶಾಸಕ ಸಿ.ಎಸ್.ಪುಟ್ಟರಾಜು ಉದ್ಪಾಟಿಸಿದರು   

ಪಾಂಡವಪುರ: ‘ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ 50 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲ್ಲುತ್ತೇನೆ. ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ’ ಎಂದು ಶಾಸಕ ಸಿ.ಎಸ್.ಪುಟ್ಟರಾಜು ಹೇಳಿದರು.

ತಾಲ್ಲೂಕಿನ ಚಿಕ್ಕಬ್ಯಾಡರಹಳ್ಳಿ ವೃತ್ತದಲ್ಲಿ ಶುಕ್ರವಾರ ಆಯೋಜಿಸಿದ್ದ ಚಿಕ್ಕಾಡೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಅಮೆರಿಕದಲ್ಲಿ ಕಂಪನಿ ಮಾರಾಟ ಮಾಡಿ ಜನ ಸೇವೆಗೆ ಬಂದಿದ್ದೇನೆ ಎಂದು ಮಹಾಶಯರೊಬ್ಬರು ಹೇಳುತ್ತಿದ್ದಾರೆ. ಆದರೆ, ನಾನು ಮನಸ್ಸು ಮಾಡಿದರೆ ಅವರಂಥ ಹತ್ತಾರು ಕಂಪನಿಗಳನ್ನು ಸ್ಥಾ‍ಪಿಸುತ್ತಿದ್ದೆ’ ಎಂದು ಪರೋಕ್ಷವಾಗಿ ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಕುಟುಕಿದರು.

ADVERTISEMENT

‘ವಿದೇಶದಲ್ಲಿ ಶಿಕ್ಷಣ ಪಡೆದ ನನ್ನ ಮಗನಿಗಾಗಿ ಅಲ್ಲೇ ಕಂಪನಿ ತೆರೆಯುವಂತೆ ಅನೇಕರು ಒತ್ತಡ ಹಾಕಿದರು. ಆದರೆ, ನನ್ನ ಮಗನ ಸೇವೆ ಈ ಕ್ಷೇತ್ರದ ಜನತೆಗೆ ಬೇಕು ಎಂಬ ಕಾರಣಕ್ಕೆ ಇಲ್ಲಿಗೆ ಕರೆದುಕೊಂಡು ಬಂದು ನಮ್ಮಪ್ಪ ನೀಡಿದ 25 ಎಕರೆ ಜಮೀನಿನಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದೇವೆ’ ಎಂದರು.

ಕ್ಷೇತ್ರದ ದುದ್ದ, ಬಳಘಟ್ಟ, ಬಳೇಅತ್ತಿಗುಪ್ಪೆ, ಶ್ಯಾದನಹಳ್ಳಿ ಬಳಿ ಏತ ನೀರಾವರಿ ಯೋಜನೆ ಅನುಷ್ಠಾನಗೊಂಡಿದೆ. ಕೆಆರ್‌ಎಸ್‌ನಿಂದ ನೀರು ಎತ್ತಿ ಈ ಭಾಗದ ಎಲ್ಲ ಕೆರೆಗಳನ್ನು ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಉಳಿಕೆ ಯೋಜನೆಗಳಿಗೂ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಅವರು ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ’ ಎಂದರು.

‘ನಾನು ಸಂಸದನಾಗಿದ್ದಾಗ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತುಕೊಳ್ಳಲಿಲ್ಲ. ಬೆಂಗಳೂರು–ಮೈಸೂರು ಹೆದ್ದಾರಿ ನಿರ್ಮಾಣದಿಂದಾಗಿ ಪಾಂಡವಪುರಕ್ಕೆ ತಿರುವು ಪಡೆಯಲು ಬೈಪಾಸ್ ರಸ್ತೆಗಾಗಿ ಹೋರಾಟ ನಡೆಸಿದ ಫಲವಾಗಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಮಂಜೂರಾತಿ ಪಡೆದುಕೊಂಡಿದ್ದೇನೆ. ಸಂಸದೆ ಸುಮಲತಾ ಅಂಬರೀಶ್ ಅವರು ಬಿಜೆಪಿ ಸೇರಿದ್ದಾರೆ. ಕೇಂದ್ರದಲ್ಲಿ ಅವರದ್ದೇ ಪಕ್ಷದ ನಾಯಕರ ಮೇಲೆ ಒತ್ತಡ ತಂದು ಹದಗೆಟ್ಟಿರುವ ದೊಡ್ಡಬ್ಯಾಡರಹಳ್ಳಿ ಮೇಲುಸೇತುವೆ, ಕೆಳ ರಸ್ತೆಯನ್ನು ದುರಸ್ತಿ ಮಾಡಿಸಲಿ. ಸಂಸದ ಪ್ರತಾಪ್ ಸಿಂಹ ಈ ಬಗ್ಗೆ ಭರವಸೆ ನೀಡಿದ್ದರು. ಆದರೆ, ಮಂಡ್ಯ ಜಿಲ್ಲೆಗ ಬರಲು ಪ್ರತಾಪ್ ಸಿಂಹ ಹೆದರುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ಕೋವಿಡ್ ವೇಳೆ ಮೃತಪಟ್ಟವರ ಅಂತ್ಯ ಸಂಸ್ಕಾರ ಮಾಡಲು ಅವರ ಮಕ್ಕಳೇ ಹಿಂದೆ ಮುಂದೆ ನೋಡು ತ್ತಿದ್ದರು. ಆದರೆ, ನಾನು ಆರೋಗ್ಯವನ್ನು ಲೆಕ್ಕಿಸದೆ ಮುಂದೆ ನಿಂತು ಶವ ಸಂಸ್ಕಾರ ನೆರವೇರಿಸಿದ್ದೇನೆ. ಆಮ್ಲಜನಕದ ಕೊರತೆ ಎದುರಾಗದಂತೆ ನೋಡಿಕೊಂಡಿದ್ದೇನೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಅಶೋಕ, ಎಸ್‌ಟಿಜಿ ಶಿಕ್ಷಣ ಸಂಸ್ಥೆಯ ಸಿಇಒ ಸಿ.ಪಿ.ಶಿವರಾಜು, ಪುರಸಭೆ ಅಧ್ಯಕ್ಷೆ ವಿ.ಕೆ.ಅರ್ಚನಾ ಚಂದ್ರು, ಉಪಾಧ್ಯಕ್ಷೆ ಶ್ವೇತಾ ಉಮೇಶ್, ದೊಡ್ಡಬ್ಯಾಡರಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಮಹದೇವಮ್ಮ, ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್, ಜೆಡಿಎಸ್ ಮುಖಂಡರಾದ ಎಸ್.ಎ.ಮಲ್ಲೇಶ್, ಚಿಕ್ಕಾಡೆ ಚೇತನ್, ಬೊಮ್ಮರಾಜು ಇದ್ದರು. ಸಮಾವೇಶದಲ್ಲಿ ಭಾಗವಹಿಸಿದ್ದ ಸಾವಿರಾರು ಜನರಿಗೆ ಬಾಡೂಟ ಏರ್ಪಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.