ADVERTISEMENT

19 ಸ್ಥಾನದಲ್ಲಷ್ಟೇ ಗೆಲುವು ನೋವು ತಂದಿದೆ: ಎಚ್‌.ಡಿ.ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2024, 14:24 IST
Last Updated 4 ಜೂನ್ 2024, 14:24 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ   

ಮಂಡ್ಯ: ‘ಎನ್‌ಡಿಎ ಅಭ್ಯರ್ಥಿಗಳು 19 ಕ್ಷೇತ್ರಗಳಲ್ಲಷ್ಟೇ ಗೆದ್ದಿರುವುದು ನೋವು ತಂದಿದೆ. 25 ಕ್ಷೇತ್ರಗಳಲ್ಲಿ ಗೆಲ್ಲುತ್ತಾರೆಂಬ ನಿರೀಕ್ಷೆ ಇತ್ತು’ ಎಂದು ಎಚ್‌.ಡಿ.ಕುಮಾರಸ್ವಾಮಿ ಮಂಗಳವಾರ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಬುಧವಾರ ಎನ್‌ಡಿಎ ನಾಯಕರ ಸಭೆ ಇದ್ದು, ದೆಹಲಿಗೆ ತೆರಳುತ್ತಿದ್ದೇನೆ. ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ರಚನೆಗೆ ತೊಂದರೆ ಇಲ್ಲ. ಜಿಲ್ಲೆಯ ಜನ ನನ್ನನ್ನು ಪಕ್ಷಾತೀತವಾಗಿ ಬೆಂಬಲಿಸಿದ್ದಾರೆ, ಬೇರೆ ಪಕ್ಷಗಳ ಮುಖಂಡರೂ ಗೆಲುವಿಗೆ ಸಹಕರಿಸಿದ್ದಾರೆ. ಅವರ ನಿರೀಕ್ಷೆಗಳು ಸುಳ್ಳಾಗಲಿಲ್ಲ’ ಎಂದರು.

‘ನಾನು ಕೇಂದ್ರದಲ್ಲಿ ಮಂತ್ರಿಯಾಗುವುದು ಮುಖ್ಯವಲ್ಲ. ಜಿಲ್ಲೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದೇ ಮೊದಲ ಆದ್ಯತೆ. ಬ್ರಿಟಿಷರ ಕಾಲದಿಂದಲೂ ಸಮಸ್ಯೆಯಾಗಿಯೇ ಉಳಿದಿರುವ ಕಾವೇರಿ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಶ್ರಮಿಸುವೆ’ ಎಂದರು.

ADVERTISEMENT

‘ದೊಡ್ಡ ಅಂತರದ ಗೆಲುವಿನ ನಿರೀಕ್ಷೆ ಇದ್ದುದರಿಂದ, ಮಂಡ್ಯದಲ್ಲೇ ಠಿಕಾಣಿ ಹೂಡದೆ, ರಾಜ್ಯದ ಎಲ್ಲಾ ಕ್ಷೇತ್ರಗಳನ್ನೂ ಸುತ್ತಿ ಎನ್‌ಡಿಎ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದೆ. ರಾಮನಗರ, ಚನ್ನಪಟ್ಟಣ ರೀತಿಯಲ್ಲಿ ಮಂಡ್ಯ ಜಿಲ್ಲೆಯ ಜನ ದೊಡ್ಡ ಜವಾಬ್ದಾರಿ ನೀಡಿದ್ದಾರೆ’ ಎಂದರು.

‘ಸೂರ್ಯ ಚಂದ್ರ ಹುಟ್ಟುವುದು ಎಷ್ಟು ನಿಜವೋ ಕುಮಾರಸ್ವಾಮಿ ಸೋಲುವುದು ಅಷ್ಟೇ ಸತ್ಯ ಎಂದು ಮುಖ್ಯಮಂತ್ರಿ ಹೇಳಿದ್ದರು. ಈಗ ಸೂರ್ಯ, ಚಂದ್ರ ಹುಟ್ಟಲು ಸರ್ಕಾರ ಆದೇಶ ನೀಡುವುದೇ ನೋಡಬೇಕು. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ.ಮಂಜುನಾಥ್‌ ಹರಕೆಯ ಕುರಿ ಎಂದಿದ್ದರು. ಈಗ ಯಾರು ಕುರಿಯಾಗಿದ್ದಾರೆ ಎಂಬುದನ್ನು ಫಲಿತಾಂಶ ಹೇಳಿದೆ’ ಎಂದರು.

‘ಜೆಡಿಎಸ್‌ ಸಹಕಾರದಿಂದಲೇ ಡಿ.ಕೆ.ಸುರೇಶ್‌ ಹಿಂದಿನ 2 ಚುನಾವಣೆಯಲ್ಲಿ ಗೆದ್ದಿದ್ದರು. ಆದರೆ ಈ ಬಾರಿ ಕಾಂಗ್ರೆಸ್‌ ಮುಖಂಡರು ಜೆಡಿಎಸ್‌ ಸರ್ವನಾಶ ಮಾಡಲು ಹೊರಟಿದ್ದರು. ಅದಕ್ಕೆ ಜನ ತಕ್ಕ ಉತ್ತರ ಕೊಟ್ಟಿದ್ದಾರೆ’ ಎಂದರು.

ಹಾಸನ ಸೋಲಿನ ವಿಚಾರಕ್ಕೆ, ‘ಮುಂದಿನ ಬಾರಿ ಅಲ್ಲಿ ಗೆಲ್ಲುತ್ತೇವೆ ಬಿಡಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.