ಮಂಡ್ಯ: ಅಧಿಕ ಬಡ್ಡಿ ಆಸೆ ತೋರಿಸಿ ಚಿನ್ನ, ಹಣ ಪಡೆದು ವಂಚನೆ ಮಾಡಿದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಅರ್ಧ ಬೆಲೆಗೆ ನಿವೇಶನ, ಫ್ಲ್ಯಾಟ್ ಕೊಡಿಸುವ ಆಸೆ ತೋರಿಸಿ ಮಹಿಳೆಯೊಬ್ಬರಿಂದ 1.4 ಕೆ.ಜಿ ಚಿನ್ನ ಪಡೆದು ವಂಚಿಸಿರುವ ದೂರು ದಾಖಲಾಗಿದ್ದು ಪೊಲೀಸರು ಪ್ರಮುಖ ಆರೋಪಿ ಪೂಜಾ ನಿಖಿಲ್‌ಳನ್ನು ಬಂಧಿಸಿ,ಇತರ 8 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ನೂರು ಅಡಿ ರಸ್ತೆಯಲ್ಲಿರುವ ಬಿಗ್ ಶಾಪಿಂಗ್ ಮಾರಾಟ ಮಳಿಗೆ ಮಾಲೀಕರಾದ ಶೀಲಾ ಮಧುಕುಮಾರ್ 1.4 ಕೆ.ಜಿ ಚಿನ್ನಕ್ಕೆ ಮೋಸ ಹೋಗಿರುವುದಾಗಿ ಪಶ್ಚಿಮ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪೂಜಾ ನಿಖಿಲ್, ಸೋಮಶೇಖರ್ ಮುಂತಾದರು ಫೆಡ್ ಬ್ಯಾಂಕ್ ಸಿಬ್ಬಂದಿ ಜೊತೆಗೂಡಿ ಕುಟುಂಬದ ಸದಸ್ಯರೆಲ್ಲರ ಚಿನ್ನ ಪಡೆದು ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದೂರು ಆಧರಿಸಿ ಶುಕ್ರವಾರ ಪೂಜಾ ನಿಖಿಲ್‌ಳನ್ನು ಬಂಧಿಸಿದ್ದು ಸೋಮಶೇಖರ್ ಸೇರಿ ಫೆಡ್ ಬ್ಯಾಂಕ್ ಸಿಬ್ಬಂದಿಯಾದ ಶಂಕರ್, ಶಾಲಿನಿ ಹಾಗೂ ಇನ್ನೊಬ್ಬ ವ್ಯಕ್ತಿ ಶಿವರಾಜ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಜೊತೆಗೆ ಫೆಡ್ ಬ್ಯಾಂಕ್ ವ್ಯವಸ್ಥಾಪಕ, ವಿವಿ ರಸ್ತೆ, ನೂರು ಅಡಿ ರಸ್ತೆಯಲ್ಲಿರುವ ಮಣಪ್ಪುರಂ ಫೈನಾನ್ಸ್ ವ್ಯವಸ್ಥಾಪಕರು, ಸಿಬ್ಬಂದಿ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ.
2ನೇ ಆರೋಪಿಯಾಗಿರುವ ಸೋಮಶೇಖರ್‌ನನ್ನು ಈಗಾಗಲೇ ಪೂರ್ವ ಠಾಣೆ ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಸೋನಿಯಾ ಎಂಬ ಮಂಗಳಮುಖಿಯಿಂದ 1 ಕೆ.ಜಿ ಚಿನ್ನ ಪಡೆದು ವಂಚಿಸಿರುವ ಪ್ರಕರಣದಲ್ಲಿ ಸೋಮಶೇಖರ್‌ನನ್ನು ಬಂಧಿಸಲಾಗಿತ್ತು. ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ, ಉಪಾಧ್ಯಕ್ಷೆ ವಿಜಯಮ್ಮ ಮುಂತಾದವರು ಹಣ ಕಳೆದುಕೊಂಡಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ದೂರು ನೀಡಿದ್ದರು.
ಈ ಪ್ರಕರಣದಲ್ಲಿ 2ನೇ ಆರೋಪಿಯಾಗಿದ್ದ ಪೂಜಾಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು. ಶೀಲಾ ನೀಡಿರುವ ದೂರಿನಲ್ಲಿ ಪೂಜಾಳೇ ಪ್ರಮುಖ ಆರೋಪಿಯಾಗಿರುವ ಹಿನ್ನೆಲೆಯಲ್ಲಿ ಪಶ್ಚಿಮ ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿಗಳು ಬಹುತೇಕ ವ್ಯಾಪಾರಿಗಳನ್ನೇ ಗುರಿ ಮಾಡಿಕೊಂಡು ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ವಿವಿಧ ಆಮಿಷ ತೋರಿಸಿ ಚಿನ್ನ ಪಡೆದು, ಫೈನಾನ್ಸ್‌ಗಳಲ್ಲಿ ಅಧಿಕ ಮೊತ್ತಕ್ಕೆ ಅಡಮಾನ ಮಾಡಿ ಆರೋಪಿಗಳು ಮೋಜು–ಮಸ್ತಿ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನಿವೇಶನ ಕೊಡುವ ಭರವಸೆ: ಆರೋಪಿಗಳು ಇಷ್ಟು ದಿನ ಅಧಿಕ ಬಡ್ಡಿ ತೋರಿಸಿ ವಂಚನೆ ಮಾಡಿರುವ ವಿಚಾರ ಮುನ್ನೆಲೆಗೆ ಬಂದಿತ್ತು. ಆದರೆ ಶೀಲಾ ನೀಡಿರುವ ದೂರಿನ ಅನ್ವಯ ಫೈನಾನ್ಸ್‌ನಲ್ಲಿ ಚಿನ್ನ ಅಡಮಾನ ಮಾಡಿದರೆ ಬೆಂಗಳೂರು, ಮೈಸೂರಿನಲ್ಲಿ ಅರ್ಧ ಬೆಲೆಗೆ ನಿವೇಶನ, ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ಗಳಲ್ಲಿ ಫ್ಲ್ಯಾಟ್ ಕೊಡುವುದಾಗಿ ನಂಬಿಸಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.
ಶೀಲಾ ಅವರಿಗೆ ಸೇರಿದ ಚಿನ್ನವನ್ನು ಅಪರಿಚಿತ ವ್ಯಕ್ತಿಯ ಹೆಸರಿನಲ್ಲಿ ಅಡಮಾನ ಮಾಡಲಾಗಿದೆ. ‘ಮನೆಯಲ್ಲಿ ಚಿನ್ನ ಇಟ್ಟುಕೊಂಡರೆ ಏನೂ ಪ್ರಯೋಜನ ಇಲ್ಲ, ಫೈನಾನ್ಸ್‌ನಲ್ಲಿ ಇಟ್ಟರೆ ಕಡಿಮೆ ಬೆಲೆ ನಿವೇಶನ ಸಿಗುತ್ತದೆ’ ಎಂದು ಪೂಜಾ, ಸೋಮಶೇಖರ್ ನಂಬಿಸಿದ್ದರು ಎಂದು ಶೀಲಾ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
‘ಹಣ, ಚಿನ್ನ ಕೊಟ್ಟವರು ದೂರು ಸಲ್ಲಿಕೆ ಮಾಡುತ್ತಿದ್ದಾರೆ. ಅದರನ್ವಯ ಇಬ್ಬರನ್ನು ಬಂಧಿಸಲಾಗಿದೆ. ವಿಚಾರಣೆ ನಡೆಯುತ್ತಿದೆ. ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಂ ತಿಳಿಸಿದರು.
ಸಿಬಿಐ ತನಿಖೆ ನಡೆಸಿ: ಸರ್ಕಾರಕ್ಕೆ ಪತ್ರ
ಕೆ.ಜಿಗಟ್ಟಲೆ ಚಿನ್ನ, ಹಣ, ನಿವೇಶನದ ಹೆಸರಿನಲ್ಲಿ ₹ 20 ಕೋಟಿಗೂ ಹೆಚ್ಚು ವಂಚನೆ ನಡೆದಿದ್ದು ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿ ವಕೀಲ ಟಿ.ಎಸ್.ಸತ್ಯಾನಂದ ಗೃಹ ಇಲಾಖೆಗೆ ಪತ್ರ ಬರೆದಿದ್ದಾರೆ.
ಆರ್‌ಬಿಐ ಮಾರ್ಗಸೂಚಿಗಳು ಹಾಗೂ ಸುಪ್ರೀಂ ಕೋರ್ಟ್ ಆದೇಶದಂತೆ ₹ 1 ಕೋಟಿಗೂ ಹೆಚ್ಚಿನ ಹಣದ ಅವ್ಯವಹಾರ ನಡೆದಿದ್ದರೆ ಅದನ್ನು ಸಿಬಿಐ ಮಾತ್ರ ತನಿಖೆ ನಡೆಸಬೇಕು. ಹಲವರು ಈ ಪ್ರಕರಣದಲ್ಲಿ ವಂಚನೆಗೀಡಾಗಿರುವ ಕಾರಣ ಆದಾಯ ತೆರಿಗೆ ಹಾಗೂ ಇಡಿ ಸಂಸ್ಥೆಗಳು ಗಮನ ಹರಿಸಬೇಕು ಎಂದ ಒತ್ತಾಯಿಸಿದ್ದಾರೆ.
ನಮ್ಮ ಕುಟುಂಬ ಸಂಕಷ್ಟ ಸ್ಥಿತಿಯಲ್ಲಿದೆ
‘ನನ್ನ ಪತ್ನಿ ಶೀಲಾ ನನಗೆ ತಿಳಿಯದಂತೆ ಮನೆಯ, ಸಂಬಂಧಿಗಳ ಎಲ್ಲಾ ಚಿನ್ನವನ್ನು ವಂಚಕರಿಗೆ ಕೊಟ್ಟಿದ್ದಾರೆ. ಈ ಘಟನೆಯಿಂದ ನಮ್ಮ ಕುಟುಂಬ ಸಂಕಷ್ಟ ಸ್ಥಿತಿ ಎದುರಿಸುತ್ತಿದೆ. ಇಂತಹ ಪರಿಸ್ಥಿತಿ ಯಾವ ಕುಟುಂಬಕ್ಕೂ ಬರಬಾರದು’ ಎಂದು ದೂರುದಾರರಾದ ಶೀಲಾ ಪತಿ ಮಧುಕುಮಾರ್ ನೋವು ತೋಡಿಕೊಂಡರು.
‘ಪೊಲೀಸರು ಯಾವುದೇ ಒತ್ತಡಗಳಿಗೆ ಒಳಗಾಗದೇ ತನಿಖೆ ನಡೆಸಬೇಕು. ಮಹಿಳೆಯರು ಮಾಡಿರುವ ತಪ್ಪಿಗೆ ಹಲವರು ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ತಲುಪಿದ್ದಾರೆ. ಅಂತಹ ಕುಟುಂಬಗಳನ್ನು ಕಾಪಾಡಬೇಕಾದ ಜವಾಬ್ದಾರಿ ಪೊಲೀಸರ ಮೇಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.