ADVERTISEMENT

ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಮೊದಲ ಸ್ಥಾನ: ನಿರ್ಮಲಾನಂದನಾಥ ಸ್ವಾಮೀಜಿ

ಆದಿಚುಂಚನಗಿರಿಯ ‘ಮಾತೃ ಸಂಗಮ’ದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 17 ಜನವರಿ 2024, 22:45 IST
Last Updated 17 ಜನವರಿ 2024, 22:45 IST
ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಮಠದಲ್ಲಿ ಬುಧವಾರ ನಡೆದ ‘ಮಾತೃ ಸಂಗಮ‌’ದಲ್ಲಿ ಭಾಗವಹಿಸಿದ ಮಹಿಳೆಯರು
ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಮಠದಲ್ಲಿ ಬುಧವಾರ ನಡೆದ ‘ಮಾತೃ ಸಂಗಮ‌’ದಲ್ಲಿ ಭಾಗವಹಿಸಿದ ಮಹಿಳೆಯರು   

ನಾಗಮಂಗಲ: ‘ಪ್ರೀತಿ, ಮಮತೆ ವಾತ್ಸಲ್ಯದ ಪ್ರತಿರೂಪವೇ ತಾಯಿ. ಭರತನಿಂದ ಭಾರತವಾದರೂ, ಭಾರತಮಾತೆ ಎಂದು ಕರೆಸಿಕೊಳ್ಳುವ ಭೂಮಿ, ಜಲ, ದೇಶವನ್ನು ತಾಯಿಗೆ ಹೋಲಿಸುವ ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಗೆ ಮೊದಲ ಸ್ಥಾನ ನೀಡಲಾಗಿದೆ’ ಎಂದು ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಆದಿಚುಂಚನಗಿರಿ ಮಠದ ಬಿಜಿಎಸ್ ಸಭಾಂಗಣದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿಯವರ 79ನೇ ಜಯಂತ್ಯುತ್ಸವ ಮತ್ತು 11ನೇ ವರ್ಷದ ಸಂಸ್ಮರಣಾ ಮಹೋತ್ಸವದ ಅಂಗವಾಗಿ ಬುಧವಾರ ಆಯೋಜಿಸಿದ್ದ ‘ಮಾತೃ ಸಂಗಮ’ದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

‘ಆಧುನಿಕ ಜಗತ್ತಿನಲ್ಲಿ ಮಾನವೀಯ ಮೌಲ್ಯ ಮತ್ತು ಮೂಲ ತತ್ವಗಳನ್ನು ದೂರ ಮಾಡದೇ ಒಳಗಣ್ಣನ್ನು ತೆರೆದು, ಬದುಕಬೇಕಿದೆ. ಮಾತೆಯರು ದೇಶದ ಸಂಸ್ಕೃತಿ, ಸಂಸ್ಕಾರಗಳನ್ನು ಬಿಂಬಿಸುವ ಆಚಾರ ವಿಚಾರಗಳನ್ನು ಮೈಗೂಡಿಸಿಕೊಂಡು ನಮ್ಮ ಭವಿಷ್ಯದ ಪೀಳಿಗೆಯಾದ ಮಕ್ಕಳಿಗೂ ಬದುಕಿನ ಆದರ್ಶಗಳ ಕುರಿತು ಮಾರ್ಗದರ್ಶನ ನೀಡಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ‘ರೈತ ದೇಶದ ನಿಜವಾದ ಬೆನ್ನೆಲುಬು ಆದರೂ, ಅವನ ಮೂಲ ದೇವರು ಭೂಮಿತಾಯಿ. ಭವಿಷ್ಯದಲ್ಲಿ ದೇಶ ಅಭಿವೃದ್ಧಿಯಲ್ಲಿ ಮಹಿಳೆಯ ಕೊಡುಗೆ ಹೆಚ್ಚಾಗಲಿದ್ದು, ತಾಯಂದಿರು ಭಾರತದ ಅಭಿವೃದ್ಧಿಗೆ ಸಹಕರಿಸಬೇಕು’ ಎಂದರು.

ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಮಾತನಾಡಿ, ‘ಮಹಿಳಾ ಸಮೂಹವು ಮಮತೆಯ ಮತ್ತು ವಾತ್ಸಲ್ಯದ ಪರಂಪರೆಗೆ ಪ್ರತಿರೂಪವಾಗಿದೆ. ಸಂತಭಕ್ತರ ಕೈಲಾಸ ಆದಿಚುಂಚನಗಿರಿ ಮಠವು ಬಾಲಗಂಗಾಧರನಾಥ ಸ್ವಾಮೀಜಿ ಅವರಿಂದ ಆಧ್ಯಾತ್ಮಿಕ ಮೌಲ್ಯದೊಂದಿಗೆ ಶೈಕ್ಷಣಿಕ ಸೇವೆಯನ್ನು ಮಾಡುತ್ತಿದೆ. ಸಾಧಕರನ್ನು ಗೌರವಿಸುವುದು ಒಂದೆಡೆಯಾದರೆ, ಸಾಧಿಸುವಂತೆ ಪ್ರೇರೇಪಿಸಿ ಗೌರವಿಸುವುದು ಇಲ್ಲಿನ ವಿಶೇಷತೆಯಾಗಿದೆ’ ಎಂದರು.

ಬಿಜೆಪಿ ಮುಖಂಡ ಸಿ.ಟಿ.ರವಿ ಮಾತನಾಡಿ, ‘ಒಂದು ದೇಶದ ಅಭಿವೃದ್ಧಿ, ಮನೆ ಬೆಳಗಲು, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪ್ರಮುಖ ಕಾರಣ ತಾಯಿ. ತನ್ನ ಮಕ್ಕಳ ಬಾಲ್ಯವನ್ನು ಸಂಭ್ರಮಿಸುವ, ಪ್ರತಿ ಹಂತದಲ್ಲೂ ಅವರಿಗೆ ಆತ್ಮವಿಶ್ವಾಸ ತುಂಬಿ ಜೀವನ ಮೌಲ್ಯ ಕಲಿಸುವ ಗುರುವಾಗುತ್ತಾಳೆ’ ಎಂದರು.

ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಮಾತನಾಡಿದರು.

ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ, ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ, ಶಿರಾ ಶಾಸಕ ಟಿ.ಬಿ.ಜಯಚಂದ್ರ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ.ಎ.ಟಿ. ಶಿವರಾಮು, ಚುಂಚಾದ್ರಿ ಮಹಿಳಾ ಸಂಘದ ಅಧ್ಯಕ್ಷೆ ಭಾರತಿ ಶಂಕರ್, ನಿವೃತ್ತ ಜಿಲ್ಲಾ ನ್ಯಾಯಮೂರ್ತಿ ಶಶಿಕಲಾ, ವಿವಿಧ ಮಹಿಳಾ ಸಂಘಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಮಠದಲ್ಲಿ ಬುಧವಾರ ನಡೆದ ಮಾತೃ ಸಂಗಮ‌ವನ್ನು ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಶಿರಾ ಶಾಸಕ ಟಿ.ಬಿ.ಜಯಂಚಂದ್ರ ವಿಧಾನ ಪರಿಷತ್‌ ಸದಸ್ಯೆ ತೇಜಸ್ವಿನಿ ಗೌಡ ಬಿಜೆಪಿ ಮುಖಂಡ ಸಿ.ಟಿ. ರವಿ ಭಾಗಿಯಾಗಿದ್ದರು–ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.