ಮಂಡ್ಯ: ಅಂತರಾಷ್ಟ್ರೀಯ ಮಟ್ಟದ ಚೆಸ್ ಆಟಗಾರ್ತಿ, ರಾಷ್ಟ್ರೀಯ ತಂಡದ ಕೋಚ್ ಮಾಧುರಿ ಜೈನ್ ಅವರು ಸಕ್ಕರೆ ಜಿಲ್ಲೆಯ ಮಕ್ಕಳಲ್ಲಿ ‘ಚೆಸ್ ಪ್ರೇಮ’ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ‘ಶಾಲೆಯಲ್ಲಿ ಚೆಸ್’ ಕಾರ್ಯಕ್ರಮದಡಿ ಚೆಸ್ ಶಿಕ್ಷಕರನ್ನು ಸೃಷ್ಟಿಸುತ್ತಿರುವ ಅವರು ಹಲವು ಮಹಿಳೆಯರು ಶಾಲೆಗಳಲ್ಲಿ ಉದ್ಯೋಗ ಪಡೆಯುವಂತೆ ಮಾಡಿದ್ದಾರೆ.
ಚೆಸ್ ಕ್ರೀಡೆಗೆ ಮಹತ್ವ ನೀಡಿರುವ ಶಾಲೆಗಳು ಚೆಸ್ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತಿವೆ. ತರಬೇತಿ ಪಡೆದ ಚೆಸ್ ಶಿಕ್ಷಕರಿಗೆ ಹೆಚ್ಚು ಅವಕಾಶಗಳಿವೆ, ಆದರೆ ಚೆಸ್ ಶಿಕ್ಷಕರ ಕೊರತೆ ಕಾಡುತ್ತಿದೆ. ಇದನ್ನು ಮನಗಂಡು ಮಂಜುನಾಥ್ ಜೈನ್ ಹಾಗೂ ಮಾಧುರಿ ಜೈನ್ ದಂಪತಿ ತಮ್ಮ ‘ಮಂಡ್ಯ ಚೆಸ್ ಅಕಾಡೆಮಿ’ ಮೂಲಕ ಮಹಿಳೆಯರಿಗೆ ಚೆಸ್ ತರಬೇತಿ ನೀಡುತ್ತಿದೆ, ಆ ಮೂಲಕ ಅವರು ಶಾಲೆಗಳಲ್ಲಿ ಚೆಸ್ ಶಿಕ್ಷಕಕಾಗಿ ಬದುಕು ಕಟ್ಟಿಕೊಳ್ಳಲು ಸಹಾಯಕವಾಗುತ್ತಿದೆ.
ಭಾರತೀಯ ಚೆಸ್ ಪಡೆರೇಷನ್ ವತಿಯಿಂದಲೇ ಈ ಕಾರ್ಯಕ್ರಮ ನಡೆಯುತ್ತಿದ್ದು ಚೆಸ್ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ನೀಡಲಾಗುತ್ತಿದೆ. ಇದರಿಂದ ಅವರಿಗೆ ಹೊಸ ಅವಕಾಶಗಳು ತೆರೆದುಕೊಳ್ಳುತ್ತಿವೆ. ಮಾಧುರಿ ಅವರ ಬಳಿ ತರಬೇತಿ ಪಡೆದ 25 ಮಹಿಳೆಯರು ವಿವಿಧ ಶಾಲೆಗಳಲ್ಲಿ ಚೆಸ್ ಶಿಕ್ಷಕಿಯರಾಗಿದ್ದಾರೆ. ಶಾಲೆಗಳಲ್ಲಿ ಮಾತ್ರವಲ್ಲದೇ ವಿವಿಧ ದೇಶಗಳ ಮಕ್ಕಳಿಗೆ ಆಲ್‌ಲೈನ್‌ನಲ್ಲಿ ತರಬೇತಿ ನೀಡುವ ಮಟ್ಟಕ್ಕೆ ಬೆಳೆದಿದ್ದಾರೆ.
ಅಂತರರಾಷ್ಟ್ರೀಯ ಕೋಚ್: ಕಳೆದೊಂದು ದಶಕದಿಂದ ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ತರಬೇತಿ ನೀಡಿರುವ ಮಂಜುನಾಥ್ ಜೈನ್– ಮಾಧುರಿ ಜೈನ್ ದಂಪತಿ ಮಂಡ್ಯ ಜಿಲ್ಲೆಯಲ್ಲಿ ಚೆಸ್ ಪ್ರೇಮ ಸೃಷ್ಟಿಸಿದ್ದಾರೆ. ‘ಮಂಡ್ಯ ಚೆಸ್ ಅಕಾಡೆಮಿ’ ಮೂಲಕ ಅವರು ಮಕ್ಕಳ ಕಲಿಕೆ, ಕುನಸು, ಕನವರಿಗೆ, ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಅಂತರಾಷ್ಟ್ರೀಯ ಚೆಸ್ ಪೆಡರೇಷನ್ ‘ಫಿಡೆ’ಯ ಪ್ರಮಾಣೀಕೃತ ಕರ್ನಾಟಕದ ಮೂವರು ಮಹಿಳಾ ಕೋಚ್‌ಗಳಲ್ಲಿ ಮಾಧುರಿ ಕೂಡ ಒಬ್ಬರು. ಮಂಡ್ಯದಲ್ಲಿ 12 ವರ್ಷದೊಳಗಿನವರ ರಾಷ್ಟ್ರೀಯ ಚೆಸ್ ಟೂರ್ನಿ, ತುಮಕೂರಿನಲ್ಲಿ 7 ವರ್ಷದೊಳಗಿನವರ ರಾಷ್ಟ್ರೀಯ ಚೆಸ್ ಟೂರ್ನಿ ಆಯೋಜಿಸಿದ ಕೀರ್ತಿ ಪಡೆದಿದ್ದಾರೆ. ಜೊತೆಗೆ 500ಕ್ಕೂ ಹೆಚ್ಚು ಜಿಲ್ಲಾ ಮಟ್ಟದ ಚೆಸ್ ಟೂರ್ನಿ ಆಯೋಜಿಸಿದ್ದಾರೆ.
2019ರಲ್ಲಿ ರಷ್ಯಾದ ವ್ಲಾಡಿವೋಸ್ಟಾಕ್‌ನಲ್ಲಿ ನಡೆದ ಅಂತರರಾಷ್ಟ್ರೀಯ 10ನೇ ಏಷ್ಯಾ ಯೂತ್ ಕ್ರೀಡಾಕೂಟದಲ್ಲಿ ಭಾರತೀಯ ತಂಡಕ್ಕೆ ಕೋಚ್ ಆಗಿದ್ದ ಮಾಧುರಿ ಅವರು ಜಿಲ್ಲೆಗೆ ಕೀರ್ತಿ ತಂದಿದ್ದರು. ಚೆಸ್ ಕ್ರೀಡೆಯನ್ನೇ ಉಸಿರಾಡುವ ಮಾಧುರಿ ಜೈನ್ ಅವರು ಮಕ್ಕಳ ಪ್ರೀತಿಯ ಕೋಚ್ ಆಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.