ADVERTISEMENT

ಅನುದಾನವಿದ್ದರೂ ಅನುಷ್ಠಾನವಾಗದ ಕಾಮಗಾರಿ‌: ಎಚ್.ಟಿ. ಮಂಜು

ಸಮರ್ಪಕವಾಗಿ  ಕಾರ್ಯ ನಿರ್ವಹಿಸದ ಪಿಡಿಒಗಳ ಮೇಲೆ ಕ್ರಮ ಕೈಗೊಳ್ಳಲು ಇಒಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2024, 4:47 IST
Last Updated 3 ಜುಲೈ 2024, 4:47 IST
ಕೆ.ಆರ್.ಪೇಟೆಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಶಾಸಕ  ಎಚ್.ಟಿ. ಮಂಜು ಮಾತನಾಡಿದರು.
ಕೆ.ಆರ್.ಪೇಟೆಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಶಾಸಕ  ಎಚ್.ಟಿ. ಮಂಜು ಮಾತನಾಡಿದರು.   

ಕೆ.ಆರ್.ಪೇಟೆ: ಗ್ರಾಮೀಣ ಪ್ರದೇಶದ ಜನರ ಅಭಿವೃದ್ಧಿಗೆ ಸರ್ಕಾದಿಂದ ಕೋಟ್ಯಂತರ ರೂಪಾಯಿ ಅನುದಾನ ಬಂದರೂ ಕಾರ್ಯಾನುಷ್ಠಾನವಾಗಿಲ್ಲ ಎಂದು ಶಾಸಕ ಎಚ್.ಟಿ. ಮಂಜು ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಾರ್ಯಕ್ರಮಗಳ ಪರಾಮರ್ಶೆ ನಡೆಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಸರ್ಕಾರಗಳು ಕೋಟ್ಯಂತರ ರೂಪಾಯಿ ಮೀಸಲಿಟ್ಟರೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರಗತಿ ಕಾಣುತ್ತಿಲ್ಲ. ಹಾಗಾದರೆ ನೀವೆಲ್ಲ ಏನು ಮಾಡುತ್ತಿದ್ದೀರಾ? ಹಣವಿದ್ದರೂ ಕಾಮಗಾರಿಗಳನ್ನು ಏಕೆ ಪ್ರಾರಂಭಿಸಿಲ್ಲ ಎಂದು ಪಿಡಿಒಗಳನ್ನು ತರಾಟೆಗೆ ತೆಗೆದುಕೊಂಡರಲ್ಲದೆ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ರುದ್ರಭೂಮಿಗೆ ಜಾಗ ಗುರುತಿಸಿಲ್ಲ. ಈ ಉಡಾಫೆ ವರ್ತನೆ ಸರಿಯಲ್ಲ ಎಂದು ಎಚ್ಚರಿಸಿದರು.

ADVERTISEMENT

‘ತಾಲ್ಲೂಕಿಗೆ ಮಂಜೂರಾಗಿರುವ ಮನೆಗಳನ್ನು ನಿಗದಿತ ಸಮಯದಲ್ಲಿ ಹಸ್ತಾಂತರಿಸುವ ಕಾರ್ಯ ಮಾಡುವಂತೆ ಸೂಚಿಸಿದ ಶಾಸಕರು ವಿಳಂಬವಾದಲ್ಲಿ ಶಿಸ್ತಿನ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘2-3 ವರ್ಷಗಳಿಂದ 2,475 ಮನೆಗಳನ್ನು ನೀಡಿದೆ. ಆದರೆ ಅವುಗಳ ಪೈಕಿ ನೀಡಿರುವ 1005 ಮನೆಗಳ ಕಾಮಗಾರಿಯನ್ನು ಆರಂಭಿಸಿಯೇ ಇಲ್ಲ. ಜಿಪಿಎಸ್ ಸೇರಿದಂತೆ ಎಲ್ಲಾ ಮನೆ ಕೆಲಸಕ್ಕೆ ಹಣ ಕೇಳುತ್ತೀರೆಂದು ದೂರು ಬಂದಿದೆ. ಈ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳಿ ಎರಡು ವರ್ಷಗಳಾದರೂ ಮನೆ ನಿರ್ಮಾಣ ಸಂಬಂಧ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸದ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಿ’ ಎಂದು ಇಒಗೆ ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಇಒ ಸತೀಶ್, ತಾಲ್ಲೂಕು ಯೋಜನಾಧಿಕಾರಿ ಶ್ರೀನಿವಾಸ್, ನರೇಗಾ ಆಡಳಿತ ಸಹಾಯಕ ನಿರ್ದೇಶಕ ಡಾ. ನರಸಿಂಹರಾಜು, ನರೇಗಾ ಎಡಿ ಉಮಾಶಂಕರ್ ಸೇರಿದಂತೆ 34 ಗ್ರಾಮ ಪಂಚಾಯಿತಿಗಳ ಪಿಡಿಒ ಮತ್ತು ನೌಕರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.