ADVERTISEMENT

ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡರನ್ನ ಹಾಡಿ ಹೊಗಳಿದ ಮುಖ್ಯಮಂತ್ರಿ ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 12:06 IST
Last Updated 9 ನವೆಂಬರ್ 2019, 12:06 IST
ಯಡಿಯೂರಪ್ಪ
ಯಡಿಯೂರಪ್ಪ   

ಮಂಡ್ಯ: ಜಿಲ್ಲಾಡಳಿತದ ವತಿಯಿಂದ ಶನಿವಾರ ಕೆ.ಆರ್‌.ಪೇಟೆಯಲ್ಲಿ ನಡೆದ ಬೃಹತ್‌ ಆರೋಗ್ಯ ಮೇಳದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ಅವರನ್ನು ಹಾಡಿ ಹೊಗಳಿದರು.

‘ನಾರಾಯಣಗೌಡ ಸಜ್ಜನ, ಅಪರೂಪದ ರಾಜಕಾರಣಿ. ನಾನು ಬಹಳ ಜನ ಶಾಸಕರು, ಮುಖಂಡರನ್ನು ನೋಡಿದ್ದೇನೆ, ಆದರೆ ರಾಜಕಾರಣದಲ್ಲಿ ಇಂತಹ ಪ್ರಾಮಾಣಿಕ ವ್ಯಕ್ತಿತ್ವವುಳ್ಳವರು ಸಿಗುವುದು ಕಷ್ಟ. ಇಂತಹ ವ್ಯಕ್ತಿಯನ್ನು ನೀವು ಶಾಸಕರಾಗಿ ಆಯ್ಕೆ ಮಾಡಿದ್ದಿರಿ. ಆದರೆ ಬೇರೆಬೇರೆ ಕಾರಣಗಳಿಂದ ವ್ಯತ್ಯಾಸ ಉಂಟಾಗಿದೆ. ಮುಂದಿನ ದಿನಗಳಲ್ಲಿ ಇವರಿಗೆ ನಿಮ್ಮೆಲ್ಲರ ಆಶೀರ್ವಾದ ಬೇಕು. ಮುಂದೆ 25 ಸಾವಿರ ಜನರನ್ನು ಸೇರಿಸಿ, ನಾರಾಯಣಗೌಡರ ಜೊತೆ ಮತ್ತೆ ಬರುತ್ತೇನೆ’ ಎಂದರು.

ತಂದೆ ಹೆಸರಲ್ಲಿ ವೈದ್ಯಕೀಯ ಕಾಲೇಜು: ಕೆ.ಸಿ.ನಾರಾಯಣಗೌಡ ಮಾತನಾಡಿ ‘ಈ ಮಣ್ಣಿನಲ್ಲಿ ಹುಟ್ಟಿದ ಬಿ.ಎಸ್‌.ಯಡಿಯೂರಪ್ಪ ಅವರು ಶಿವಮೊಗ್ಗದಲ್ಲಿ ಬೆಳೆದು ರಾಜ್ಯದ ಮುಖ್ಯಮಂತ್ರಿಯಾಗಿದ್ಧಾರೆ. ಹುಟ್ಟಿದ ತಾಲ್ಲೂಕಿನ ಅಭಿವೃದ್ಧಿಗೆ ಸಾವಿರ ಕೋಟಿ ನೀಡುವ ಭರವಸೆ ನೀಡಿದ್ದಾರೆ’ ಎಂದರು.

ADVERTISEMENT

ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಅವರು ‘ತಮ್ಮ ತಂದೆಯವರ ಹೆಸರಿನಲ್ಲಿ ಕೆ.ಆರ್‌.ಪೇಟೆ ಪಟ್ಟಣಕ್ಕೆ ವೈದ್ಯಕೀಯ ಕಾಲೇಜು ಮಂಜೂರು ಮಾಡಿಕೊಡಬೇಕು’ ಎಂದರು.

ಬಿಜೆಪಿ ನಾಯಕರ ದರ್ಬಾರ್‌: ಸರ್ಕಾರಿ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರ ದರ್ಬಾರ್‌ ಜೋರಾಗಿತ್ತು. ಅನರ್ಹ ಶಾಸಕ ಸೇರಿ ಜಿಲ್ಲಾ ಮಟ್ಟದ ಬಿಜೆಪಿ ಮುಖಂಡರು ವೇದಿಕೆ ಹಂಚಿಕೊಂಡಿದ್ದರು. ಉಪ ಮುಖ್ಯಮಂತ್ರಿ ಸಿ.ಎನ್‌.ಅಶ್ವತ್ಥ ನಾರಾಯಣ್‌, ಕಂದಾಯ ಸಚಿವ ಆರ್‌.ಅಶೋಕ್‌, ಸಂಸದೆ ಎ.ಸುಮಲತಾ ಹಾಜರಿದ್ದರು.

ಸಹೋದರತ್ವ ಬೆಸೆದ ತೀರ್ಪು: ಸಿಎಂ

‘ಅಯೋಧ್ಯೆ ತೀರ್ಪು ಹಿಂದೂ, ಮುಸ್ಲಿಮರ ನಡುವೆ ಸಹೋದರತ್ವವನ್ನು ಬೆಸೆಯುವಲ್ಲಿ ಸಹಕಾರಿಯಾಗಿದೆ. ರಾಜ್ಯದಲ್ಲಿ ಯಾರೂ ಕಾನೂನು–ಸುವ್ಯವಸ್ಥೆಗೆ ಧಕ್ಕೆ ತರಲು ಯತ್ನಿಸಬಾರದು. ಶಾಂತಿ ಕಾಪಾಡಿಕೊಳ್ಳಬೇಕು’ ಎಂದು ಬಿ.ಎಸ್‌.ಯಡಿಯೂರಪ್ಪ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.