ADVERTISEMENT

`ಆಘಾತ'ದಿಂದ ಹೊರಬರದ ರೇಣುಕಸ್ವಾಮಿ ಕುಟುಂಬ

ಮೈಸೂರು: ಕಾಡಾನೆ ದಾಳಿಗೆ ಎರಡು ವರ್ಷ

​ಪ್ರಜಾವಾಣಿ ವಾರ್ತೆ
Published 8 ಜೂನ್ 2013, 10:02 IST
Last Updated 8 ಜೂನ್ 2013, 10:02 IST

ಮೈಸೂರು: `ಇನ್ನರ್ಧ ಗಂಟೆ ಕಳೆದರೆ ಮನೆಗೆ ಬಂದು ಬಿಡುತ್ತಾರೆ ಎನ್ನುವ ಭಾವನೆ ಇವತ್ತಿಗೂ ಕಾಡುತ್ತಿದೆ. ಎರಡು ವರ್ಷ ಕಳೆದರೂ ಅವರು ನಮ್ಮನ್ನು ಬಿಟ್ಟು ಹೋದ ನೋವು...'

ಬರೋಬ್ಬರಿ ಎರಡು ವರ್ಷಗಳ ಹಿಂದೆ  (2011ರ ಜೂನ್ 8) ಮೈಸೂರಿಗೆ ಹಾದಿ ತಪ್ಪಿ ಬಂದಿದ್ದ ಕಾಡಾನೆಯ ದಾಳಿಗೆ ಬಲಿಯಾದ ಬ್ಯಾಂಕ್ ಎಟಿಎಂ ಕಾವಲುಗಾರ ರೇಣುಕಸ್ವಾಮಿಯ ಪತ್ನಿ ಶಿವಬಸವಮ್ಮಣ್ಣಿ ಮಾತು ಪೂರ್ತಿಯಾಗುವ ಮುನ್ನವೇ ಕಣ್ಣೀರಾದರು. ಅಂದು ನಾರಾಯಣಶಾಸ್ತ್ರಿ ರಸ್ತೆಯ ಬ್ಯಾಂಕ್ ಆಫ್ ಮಹಾರಾಷ್ಟ್ರ ಎಟಿಎಂ (ಮೋರ್ ಮಾಲ್ ಎದುರಿಗೆ) ಕೇಂದ್ರದ ಕಾವಲುಗಾರನಾಗಿ ಕಾರ್ಯನಿರ್ವಹಿಸುತ್ತಿದ್ದ 55 ವರ್ಷದ ರೇಣುಕಸ್ವಾಮಿ ಅವರನ್ನು ರೊಚ್ಚಿಗೆದ್ದಿದ್ದ ಆನೆಯು ಹೊಸಕಿ ಹಾಕಿತ್ತು. ಅದರೊಂದಿಗೆ  ಕುಟುಂಬದ ನೆಮ್ಮದಿಯೂ ಮಣ್ಣುಪಾಲಾಗಿತ್ತು.

ಪತ್ನಿ ಮತ್ತು ಇಬ್ಬರು ಪುತ್ರರು ಇರುವ ಕುಟುಂಬಕ್ಕೆ ಆಧಾರವಾಗಿದ್ದವರು ರೇಣುಕಸ್ವಾಮಿ. ಏಕಾಏಕಿ ಅವರನ್ನು ಕಳೆದುಕೊಂಡ ಆಘಾತ ಎರಡು ಕೋಣೆಗಳ ಆ ಪುಟ್ಟ ಮನೆಯಲ್ಲಿ ಹಾಗೆಯೇ ಇದೆ. ಪತಿಯ ದ್ವಿತೀಯ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಚಿಕ್ಕ ಮಗ ರೇಣುಕಾಪ್ರಸಾದ ನೊಂದಿಗೆ ಮನೆಯನ್ನು ಶುಚಿಗೊಳಿಸುತ್ತಿದ್ದ ಅವರು ಆ ದಿನವನ್ನು ನೆನಪಿಸಿಕೊಂಡರು.

`ಅವತ್ತು ಬೆಳಿಗ್ಗೆ ಜನರ ಗಲಾಟೆಯ ಸದ್ದು ಕೇಳಿ ನಾನು ಮತ್ತು ನನ್ನ ಅತ್ತೆ ಬಾಗಿಲಿಗೆ ಬಂದು ನಿಂತಿದ್ದೆವು. ಜನರು ಕಲ್ಲು ಎಸೆಯುತ್ತಿದ್ದರು, ಜೋರಾಗಿ ಕೂಗಾಡುತ್ತಿದ್ದರು. ಇದರಿಂದ ಭೀತಿಗೊಂಡಿದ್ದ ಆನೆ ಮಾಲ್‌ನತ್ತ ನುಗ್ಗಿತ್ತು. ಆಗ ಕಾರ್ಯ ನಿರ್ವಹಿಸುತ್ತಿದ್ದ ನಮ್ಮ ಯಜಮಾನರು ಎಟಿಎಂ ಕೇಂದ್ರದ ಗಾಜಿಗೆ ಜನರ ಕಲ್ಲು ಬಂದು ಬಿದ್ದು ಹಾನಿಯಾಗುತ್ತದೆ ಎಂದುಕೊಂಡು ಶಟರ್ ಎಳೆದು ಬರುವ ಧಾವಂತದಲ್ಲಿದ್ದರು. ಆದರೆ, ಮತ್ತೇರಿದ್ದ ಆನೆ ಅದ್ಯಾವ ಮಾಯೆಯಲ್ಲಿ ಅವರ ಮೇಲೆ ಎರಗಿತೋ ಗೊತ್ತೇ ಆಗಲಿಲ್ಲ. ಅಲ್ಲಿಗೆ ಎಲ್ಲವೂ ಮುಗಿದೇ ಹೋಯಿತು' ಎಂದು ಶಿವಬಸವಮ್ಮಣ್ಣಿ ಗದ್ಗದಿತರಾದರು.

`ನಮ್ಮ ಯಜಮಾನರು ಕುಟುಂಬದ ಆಧಾರಸ್ತಂಭ ವಾಗಿದ್ದರು. ಅವರು ಕೆಲಸಕ್ಕೆ ಹೋಗುತ್ತಿದ್ದರು. ನಾನು ಮನೆಯ ಮುಂದೆಯೇ ವಡೆ, ಭಜ್ಜಿ ಅಂಗಡಿ ಇಟ್ಟಿದ್ದೆ. ಆದರೆ ಅವರ ಸಾವಿನ ನಂತರ ವಡೆ ವ್ಯಾಪಾರ ಬಂದ್ ಮಾಡಿದ್ದೇವೆ. ಸರ್ಕಾರ ಐದು ಲಕ್ಷ ರೂಪಾಯಿ ಪರಿಹಾರವನ್ನೂ ನೀಡಿದೆ. ದೊಡ್ಡ ಮಗನಿಗೆ ಗುತ್ತಿಗೆ ಆಧಾರದಲ್ಲಿ ನೌಕರಿಯನ್ನೂ ನೀಡಿದೆ' ಎಂದು  ಹೇಳುತ್ತಾರೆ.

ರೇಣುಕಸ್ವಾಮಿಯವರ ಮನೆ ಎಟಿಎಂನ ಪಕ್ಕದ ಓಣಿಯಲ್ಲಿಯೇ ಇದೆ.  ಸಿಐಬಿಎಸ್‌ಎಫ್ ಭದ್ರತಾ ಸಂಸ್ಥೆ ಯಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿ ಪಾಳಿಯ ಕೆಲಸದಲ್ಲಿದ್ದ ಅವರು ಇನ್ನರ್ಧ ಗಂಟೆ ಕಳೆದಿದ್ದರೆ ಮನೆಗೆ ಹೋಗಿ ಸ್ನಾನ, ಪೂಜೆ ಮುಗಿಸಿ, ತಿಂಡಿ ತಿಂದು ಮಲಗಿಬಿಡುತ್ತಿದ್ದರು. ಆದರೆ, ವಿಧಿ ಅವರಿಗೆ ಅವಕಾಶ ನೀಡಲಿಲ್ಲ.

ಒಂದೇ ಕಟ್ಟಡದಲ್ಲಿರುವ ಎರಡು ಮನೆಗಳಲ್ಲಿ ಒಂದರಲ್ಲಿ ಇಬ್ಬರು ಮಕ್ಕಳೊಂದಿಗೆ ಶಿವಬಸವಮ್ಮಣ್ಣಿ ಇದ್ದಾರೆ. ಇನ್ನೊಂದು ಮನೆಯಲ್ಲಿ ಅವರ ಅತ್ತೆ ವಾಸವಾಗಿದ್ದಾರೆ. `ಇನ್ನರ್ಧ ಗಂಟೆ ಕಳೆದರೆ ಮನೆಗೇ ಬರುತ್ತಿದ್ದರು' ಎಂಬ ಕೊರಗೂ ಅಲ್ಲಿ ಉಳಿದಿದೆ.

ಕಾಯಂ ಆಗದ ನೌಕರಿ
ಆನೆ ದಾಳಿ ಘಟನೆಗೆ ಕೂಡಲೇ ಸ್ಪಂದಿಸಿದ್ದ ಸರ್ಕಾರ ಐದು ಲಕ್ಷ ರೂಪಾಯಿ ಪರಿಹಾರ ನೀಡಿತ್ತು. ಬೇರೆ ಪ್ರಕರಣಗಳಲ್ಲಿ ಆಗುವಂತೆ ಇಲ್ಲಿ ವಿಳಂಬ ಆಗಿರಲಿಲ್ಲ. ದೊಡ್ಡ ಮಗ ದೇವರಾಜನಿಗೆ ಅರಣ್ಯ ಇಲಾಖೆಯ ಚಾಮುಂಡಿಬೆಟ್ಟದ ನರ್ಸರಿಯಲ್ಲಿ ಹಂಗಾಮಿ ನೌಕರಿಯನ್ನೂ ನೀಡಿತ್ತು. ಆದರೆ, ಎರಡು ವರ್ಷ ಕಳೆದರೂ ದಿನಗೂಲಿಯಾಗಿಯೇ ದೇವರಾಜ್ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಬರುವ ಅಲ್ಪ ಆದಾಯ, ಪರಿಹಾರದ ಐದು ಲಕ್ಷ ರೂಪಾಯಿಯನ್ನು ಬ್ಯಾಂಕ್ ಮಾಡಲಾಗಿರುವ ಠೇವಣಿಯಿಂದ ಬರುತ್ತಿರುವ ಮೂರುವರೆ ಸಾವಿರ ರೂಪಾಯಿ ಬಡ್ಡಿ ಹಣ ಮತ್ತು ಚಿಕ್ಕ ಮಗ ಪುಷ್ಪಾಲಂಕಾರ ಅಂಗಡಿಯಲ್ಲಿ ಮಾಡುತ್ತಿರುವ ಕೆಲಸದಿಂದ ಬರುವ ಆದಾಯವೇ ಕುಟುಂಬಕ್ಕೆ ಆಧಾರ.

`ಮಕ್ಕಳು ಹೆಚ್ಚು ಓದಿ ಒಳ್ಳೆಯ ಹುದ್ದೆಗೆ ಹೋಗಬೇಕು ಎಂಬ ಆಸೆ ನಮ್ಮಿಬ್ಬರಿಗೂ ಇತ್ತು. ಆದರೆ, ಇವರಿಬ್ಬರೂ ಎಸ್ಸೆಸ್ಸೆಲ್ಸಿಗಿಂತ ಮುಂದೆ ಓದಲಿಲ್ಲ. ಅದರಲ್ಲಿ ನಮ್ಮ ಯಜಮಾನರ ಸಾವು ಕೂಡ ನಮಗೆ ತಂದ ಆಘಾತ ಸಣ್ಣದಲ್ಲ. ಹೇಗೋ ಜೀವನ ನಡೀತಾ ಇದೆ. ಮಕ್ಕಳಿಗೆ ಒಂದು ದಾರಿಯಾದರೆ ಸಾಕು' ಎಂದು ಶಿವಬಸವಮ್ಮಣ್ಣಿ ನಿಟ್ಟುಸಿರು ಬಿಡುತ್ತಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.