ಮೈಸೂರು: ಜಮ್ಮು ಬಳಿಯ ಕಠುವಾ ಹಾಗೂ ಉತ್ತರಪ್ರದೇಶದ ಉನ್ನಾವಾದಲ್ಲಿ ಬಾಲಕಿ ಮತ್ತು ಯುವತಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣಗಳನ್ನು ನ್ಯಾಯಾಂಗ ಸುಪರ್ದಿಯಲ್ಲಿ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಹಾಗೂ ವಿದ್ಯಾರ್ಥಿ ಹೋರಾಟ ಸಮಿತಿ ಕಾರ್ಯಕರ್ತರು ಸೋಮವಾರ ಪ್ರತ್ಯೇಕ ಪ್ರತಿಭಟನೆ ನಡೆಸಿದರು.
ಗಾಂಧಿ ಚೌಕದಲ್ಲಿ ಜಮಾಯಿಸಿದ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಸದಸ್ಯರು ಘಟನೆಯನ್ನು ಒಕ್ಕೊರಲಿನಿಂದ ಖಂಡಿಸಿದರು. ಮುಗ್ಧ ಮಕ್ಕಳ ರಕ್ಷಣೆಗೆ ನಾಗರಿಕ ಸಮಾಜ ಮುಂದಾಗಬೇಕು ಎಂದು ಆಗ್ರಹಿಸಿದರು.
ಜಮ್ಮುವಿನ ಕಠುವಾದ ಸುತ್ತ ಬಕ್ರೆವಾಲಾ ಅಲೆಮಾರಿ ಮುಸ್ಲಿಂ ಸಮುದಾಯ ಹೆಚ್ಚಾಗಿ ವಾಸವಾಗಿದೆ. ಇವರನ್ನು ಈ ಸ್ಥಳದಿಂದ ಓಡಿಸುವ ಉದ್ದೇಶದಿಂದ ಎಂಟು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದು ನಾಗರಿಕ ಸಮಾಜ ತಲೆತಗ್ಗಿಸುವಂತಹ ವಿಚಾರ. ಬಾಲಕಿಯನ್ನು ಕೊಂದು ಹಾಕಿದ ರೀತಿಯು ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕೊಲೆ ಪ್ರಕರಣವನ್ನು ಮುಚ್ಚಿಹಾಕಲು ಪೊಲೀಸರು ಆಮಿಷಗಳಿಗೆ ಬಲಿಯಾಗಿದ್ದು ವಿಪರ್ಯಾಸ. ವಕೀಲರು, ರಾಜಕೀಯ ಪಕ್ಷಗಳು ಹಾಗೂ ಅಧಿಕಾರಶಾಹಿ ವ್ಯವಸ್ಥೆ ಅತ್ಯಾಚಾರ ಆರೋಪಿಗಳ ರಕ್ಷಣೆಗೆ ಮುಂದಾಗಿದ್ದು ಕಳವಳಕಾರಿ ಸಂಗತಿ. ಸಮಾಜವೊಂದು ಅಃಧಪತನದತ್ತ ಸಾಗುತ್ತಿರುವುದಕ್ಕೆ ಇದೊಂದು ನಿದರ್ಶನ. ಆರೋಪಪಟ್ಟಿ ಸಲ್ಲಿಸಲು ವಕೀಲರು ಒಡ್ಡಿದ ತಡೆ ಹಾಗೂ ಕೋಮು ಬಣ್ಣ ಹಚ್ಚಲು ನಡೆಸಿದ ಪ್ರಯತ್ನ ಖಂಡನೀಯ ಎಂದು ಕಿಡಿಕಾರಿದರು.
ಉತ್ತರಪ್ರದೇಶದ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಯುವತಿಯೊಬ್ಬರ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣ ವರ್ಷದ ನಂತರ ಬೆಳಕಿಗೆ ಬಂದಿದೆ. ದೂರು ದಾಖಲಾಗದಂತೆ ಆಡಳಿತ ವ್ಯವಸ್ಥೆಯೇ ತಡೆಯಲು ಮುಂದಾಗಿದ್ದು ಖಂಡನೀಯ. ಸಂತ್ರಸ್ತೆಯ ತಂದೆಯನ್ನು ಪೊಲೀಸರೇ ಹೊಡೆದು ಕೊಂದಿದ್ದಾರೆ ಎಂಬುದು ವೈದ್ಯಕೀಯ ವರದಿಯಿಂದ ನಿರೂಪಿತವಾಗಿದೆ ಎಂದು ಆರೋಪಿಸಿದರು.
ವಕೀಲರಾದ ಸುಮನಾ, ಡಾ.ರತಿರಾವ್, ಡಾ.ಲಕ್ಷ್ಮಿನಾರಾಯಣ, ಕೆ.ಎಸ್.ಶಿವರಾಮು ಇದ್ದರು.
ಮಾನವ ಸರಪಳಿ
ಮೈಸೂರು ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳ ಹೋರಾಟ ಸಮಿತಿಯ ನೇತೃತ್ವದಲ್ಲಿ ಮಾನಸಗಂಗೋತ್ರಿಯ ಗಡಿಯಾರ ಗೋಪುರ ಬಳಿ ವಿದ್ಯಾರ್ಥಿಗಳು ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು.
ಆಲ್ ಇಂಡಿಯಾ ಡೆಮಾಕ್ರಟಿಕ್ ಯೂಥ್ ಆರ್ಗನೈಸೇಷನ್ (ಎಐಡಿವೈಓ) ರಾಜ್ಯ ಘಟಕದ ಅಧ್ಯಕ್ಷರಾದ ಎಂ.ಉಮಾದೇವಿ ಮಾತನಾಡಿ, ‘ದೇಶದಲ್ಲಿ ಇಂತಹ ಘಟನೆಗಳು ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ. ಇದು ರೋಗಗ್ರಸ್ತ ಸಮಾಜದ ಲಕ್ಷಣ ಕೂಡ ಹೌದು. ಕೆಲ ಪಟ್ಟಭದ್ರ ಹಿತಾಸಕ್ತಿಗಳು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿವೆ’ ಎಂದು ವಿಷಾದ ವ್ಯಕ್ತಪಡಿಸಿದರು.
‘ಬಿಜೆಪಿ ಹಾಗೂ ಆರ್‌ಎಸ್‌ಎಸ್ ಸದಸ್ಯರೇ ಈ ಪ್ರಕರಣಗಳ ಆರೋಪಿಗಳಾಗಿದ್ದಾರೆ. ಇವರನ್ನು ರಕ್ಷಿಸಲು ಹಲವು ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಜನವಿರೋಧಿ ಕ್ರಮಗಳನ್ನು ರಾತ್ರೋರಾತ್ರಿ ಜಾರಿಗೊಳಿಸಲು ತೋರುವ ಅತುರವನ್ನು ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳಲು ಏಕೆ ತೋರುವುದಿಲ್ಲ’ ಎಂದು ಪ್ರಶ್ನಿಸಿದರು.
ಶಿರಾ ಸೋಮಶೇಖರ, ಚಂದ್ರಕಲಾ ಎಐಡಿಎಸ್‍ಓ ಮುಖಂಡರಾದ ಅಸಿಯಾ ಬೇಗಂ, ಎಐಡಿವೈಒ ಮುಖಂಡರಾದ ಎಚ್.ಎನ್.ರಂಜಿತಾ, ಎಸ್ಎಫ್ಐನ ವಸಂತ ಕಲಾಲ್ ಇದ್ದರು.
ಮೈಸೂರು: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ನೀಡಿದ ಹೇಳಿಕೆಯನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಗಾಂಧಿಚೌಕದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಕಾಂಗ್ರೆಸ್ ಪಕ್ಷದಿಂದ ಅವರನ್ನು ಉಚ್ಚಾಟನೆ ಮಾಡಬೇಕು ಎಂದು ಆಗ್ರಹಿಸಿದರು.
ಆದಿತ್ಯನಾಥ್ ಅವರು ಸಾಂವಿಧಾನಿಕ ಹುದ್ದೆಯಲ್ಲಿದ್ದಾರೆ. ಗೋರಖಪುರದ ಮಠಾಧೀಶರೂ ಆಗಿರುವ ಅವರ ಕುರಿತು ಹಗುರವಾಗಿ ಮಾತನಾಡಿದ್ದು ಖಂಡನೀಯ. ಇದು ನಾಥಪಂಥದ ಅನುಯಾಯಿಗಳಿಗೆ ಮಾಡಿರುವ ಅವಮಾನ ಕೂಡ ಹೌದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡರಾದ ಬಿ.ವಿ.ಮಂಜುನಾಥ್, ಸಂದೇಶ ಸ್ವಾಮಿ, ಜಗದೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.