ADVERTISEMENT

ಕಾವ್ಯದ ಮರುವ್ಯಾಖ್ಯಾನ ನಿರಂತರ...

ಕವಯತ್ರಿ ಪ್ರತಿಭಾ ನಂದಕುಮಾರ್‌ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2016, 8:40 IST
Last Updated 27 ಅಕ್ಟೋಬರ್ 2016, 8:40 IST

ಮೈಸೂರು: ಕಾವ್ಯವು ಕಾಲದಿಂದ ಕಾಲಕ್ಕೆ ಮರುವ್ಯಾಖ್ಯಾನಕ್ಕೆ ಒಳಗಾಗುತ್ತದೆ, ಅಭಿವ್ಯಕ್ತಿಯ ರೀತಿಯಲ್ಲಿ ಹೊಸತನ ಕಂಡುಕೊಳ್ಳುತ್ತಿದ್ದೇವೆ ಎಂದು ಕವಯತ್ರಿ ಪ್ರತಿಭಾ ನಂದಕುಮಾರ್‌ ಪ್ರತಿಪಾದಿಸಿದರು.

ಬೆಳಗಾವಿಯ ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್‌ ಸಹಯೋಗದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಆಯೋಜಿಸಿರುವ ಕನ್ನಡ ಕಾವ್ಯ ಕಮ್ಮಟದಲ್ಲಿ ‘ನಾನು ಮತ್ತು ನನ್ನ ಕಾವ್ಯ’ ಕುರಿತು ಉಪನ್ಯಾಸ ನೀಡಿದರು.

ಇಂದು ಕಾವ್ಯವನ್ನು ಸೀಮಿತ ವಲಯದಲ್ಲಿ ಕಾಣುತ್ತಿದ್ದೇವೆ. ಪಂಪ, ರನ್ನ, ಕುವೆಂಪು, ದ.ರಾ.ಬೇಂದ್ರೆ ಕಾಲದ ಕಾವ್ಯ ಪರಿಕಲ್ಪನೆ ಬೇರೆ ಇತ್ತು. ನನ್ನ ಕಾವ್ಯದ ಪರಿಕಲ್ಪನೆ ಬೇರೆಯೇ ಇದೆ. 21ನೇ ಶತಮಾನಕ್ಕೆ ಅನುಗುಣವಾಗಿ ಕಾವ್ಯದ ಹೊಸ ವ್ಯಾಖ್ಯಾನವನ್ನು ರೂಪಿಸುತ್ತಿದ್ದೇವೆ ಎಂದು ವಿವರಿಸಿದರು.

ಕವಿಗಳು ಜಗತ್ತಿಗೆ ಕಾವ್ಯದ ಮೂಲಕ ಸ್ಪಂದಿಸುತ್ತಾರೆ. ಕವಿಯೊಡನೆ ಸಂವಾದ ಮಾಡುವಾಗ ಅವರು ಏನು ಬರೆದಿದ್ದಾರೆ ಎಂಬುದರ ಪರಿಕಲ್ಪನೆ ಇರಬೇಕು. ಕಾವ್ಯಕ್ಕೆ ನಾವು ಸ್ಪಂದಿಸಬೇಕು. ಪತ್ರಿಕೆ, ನಿಯತಕಾಲಿಕೆ, ಪುಸ್ತಕಗಳಲ್ಲಷ್ಟೇ ಅಲ್ಲ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಬ್ಲಾಗ್‌ ಸಾಮಾಜಿಕ ಜಾಲತಾಣಗಳಲ್ಲಿಯೂ ಕವನಗಳನ್ನು ಪ್ರಕಟವಾಗುತ್ತಿವೆ. ಸಂವಹನ ಕ್ಷೇತ್ರದಲ್ಲಿನ ಕ್ರಾಂತಿಯು ಈ ಬದಲಾವಣೆಗಳಿಗೆ ನಾಂದಿಯಾಗಿದೆ. ಕಾವ್ಯಪರಂಪರೆಯು ಬದಲಾಗಿದೆ ಎಂದು ವಿಶ್ಲೇಷಿಸಿದರು.

ಇಂದು ಸಿನಿಮಾ, ಹಾಡು, ನೃತ್ಯಗಳು 25 ವರ್ಷದ ಹಿಂದಿನಂತಿಲ್ಲ. ಚಿತ್ರಗೀತೆ ಗಳಲ್ಲಿ ಹೊಸತನವನ್ನು ಕಾಣುತ್ತಿದ್ದೇವೆ. ಬದುಕಿನ ಜೊತೆಗಿನ ಅನುಸಂಧಾನದ ರೀತಿಯಲ್ಲಿ ಕಾವ್ಯ ರಚಿಸಬೇಕು. ತರಗತಿಯಲ್ಲಿ ಹೇಳಿಕೊಟ್ಟಿರುವ ಕಾವ್ಯ ಚೌಕಟ್ಟಿನ ಆಚೆಗೆ ಯೋಚಿಸುವುದನ್ನು ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಜಾಗತೀಕರಣದಿಂದ ಜಗತ್ತು ಬದಲಾಗಿದೆ.  ಸೆಲ್‌ಫೋನ್, ಟಿವಿ, ಅಂತರ್ಜಾಲಗಳು ಜಗತ್ತನ್ನು ಪುಟ್ಟದಾಗಿಸಿವೆ. ಕಾವ್ಯವು ಸಾರ್ವಕಾಲಿಕ ಆಗಿರುವುದರಿಂದ ಎಲ್ಲದಕ್ಕೂ ಸ್ಪಂದಿಸಬಹುದು. ಆದರೆ, ಅದು ನನ್ನ ಕಾವ್ಯಾಭಿವ್ಯಕ್ತಿ ಆಗುವುದಿಲ್ಲ. ಸಾಹಿತ್ಯ ಓದಿಕೊಂಡವರೇ ಕವನ ಬರೆಯಬೇಕು ಎಂದೇನಿಲ್ಲ.

ಎಂಜಿನಿಯರುಗಳು, ಟೆಕ್ಕಿಗಳು, ವೈದ್ಯರು ಮೊದಲಾದವರು ಅತ್ಯುತ್ತಮ ಕಾವ್ಯ ರಚಿಸುತ್ತಿದ್ದಾರೆ. ಕನ್ನಡದ ಓದುಗರು ಅಪ್‌ಡೇಟ್‌ ಆಗಬೇಕು ಎಂದು ಸಲಹೆ ನೀಡಿದರು. ಶಿಬಿರದ ಪ್ರಧಾನ ಸಂಚಾಲಕ ಪ್ರೊ.ಅರವಿಂದ ಮಾಲಗತ್ತಿ, ಎನ್‌.ಕೆ. ಲೋಲಾಕ್ಷಿ, ಪ್ರೊ.ಸಿ.ನಾಗಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.