ADVERTISEMENT

ಗ್ರಂಥಾಲಯಕ್ಕಿಂತ ಜಿಮ್‌ ಹೆಚ್ಚಳ: ಕಾಯ್ಕಿಣಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2015, 9:59 IST
Last Updated 10 ಫೆಬ್ರುವರಿ 2015, 9:59 IST
ಮೈಸೂರಿನ ಕಲಾಮಂದಿರದಲ್ಲಿ ನಡೆಯುತ್ತಿರುವ ‘ಜೈಲಿನಿಂದ–ಜೈಲಿಗೆ ರಂಗಯಾತ್ರೆ’ಯಲ್ಲಿ ಕೈದಿಗಳು ಸೋಮವಾರ ಪ್ರದರ್ಶಿಸಿದ ‘ಜತೆಗಿರುವನು ಚಂದಿರ’ ನಾಟಕದ ದೃಶ್ಯ
ಮೈಸೂರಿನ ಕಲಾಮಂದಿರದಲ್ಲಿ ನಡೆಯುತ್ತಿರುವ ‘ಜೈಲಿನಿಂದ–ಜೈಲಿಗೆ ರಂಗಯಾತ್ರೆ’ಯಲ್ಲಿ ಕೈದಿಗಳು ಸೋಮವಾರ ಪ್ರದರ್ಶಿಸಿದ ‘ಜತೆಗಿರುವನು ಚಂದಿರ’ ನಾಟಕದ ದೃಶ್ಯ   

ಮೈಸೂರು: ದೈಹಿಕ ಪ್ರಜ್ಞೆ ಹೆಚ್ಚುತ್ತಿರುವ ಪರಿಣಾಮ ಸಮಾಜದಲ್ಲಿ ಗ್ರಂಥಾಲಯಕ್ಕಿಂತ ಜಿಮ್‌ಗಳ ಸಂಖ್ಯೆಯೇ ಅಧಿಕವಾಗುತ್ತಿವೆ ಎಂದು ಸಾಹಿತಿ ಜಯಂತ ಕಾಯ್ಕಿಣಿ ಬೇಸರ ವ್ಯಕ್ತಪಡಿಸಿದರು.

ಸಂಕಲ್ಪ ಮೈಸೂರು, ಕರ್ನಾಟಕ ಕಾರಾಗೃಹಗಳ ಇಲಾಖೆಯ ಸಹಯೋಗದೊಂದಿಗೆ ಇಲ್ಲಿನ ಕಲಾಮಂದಿರದಲ್ಲಿ ನಾಲ್ಕು ದಿನಗಳ ಕಾಲ ಏರ್ಪಡಿಸಿರುವ ‘ಜೈಲಿನಿಂದ–ಜೈಲಿಗೆ ರಂಗಯಾತ್ರೆ’ ಹಾಗೂ ‘ಕಾರಾಗೃಹ ರಂಗಭೂಮಿ ನಡೆದುಬಂದ ದಾರಿ ಮತ್ತು ಚಿತ್ರಕಲಾ ಪ್ರದರ್ಶನ’ಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ದೈಹಿಕ ಪ್ರಜ್ಞೆ ಎಲ್ಲೆಡೆ ಹೆಚ್ಚಾಗುತ್ತಿದೆ. ಸಿಕ್ಸ್‌ಪ್ಯಾಕ್‌ ದೇಹದಾರ್ಢ್ಯ ಬೆಳೆಸಿಕೊಳ್ಳಬೇಕು ಎಂಬ ಮನೋಭಾವನೆ ಬೆಳೆಯುತ್ತಿದೆ. ಹೀಗಾಗಿ, ಗ್ರಾಮೀಣ ಪ್ರದೇಶದಲ್ಲಿಯೂ ಗ್ರಂಥಾಲಯ ಗಳಿಗಿಂತ ಜಿಮ್‌ಗಳೇ ಬೆಳೆಯುತ್ತಿವೆ.

ಮಾನಸಿಕ ಸ್ವಾಸ್ಥ್ಯದ ಬಗೆಗೆ ಸಮಾಜದಲ್ಲಿ ನಿರ್ಲಕ್ಷ್ಯ ಮೂಡುತ್ತಿದೆ. ಗ್ರಂಥಾಲಯ ಮತ್ತು ಜಿಮ್‌ ಸಮಪ್ರಮಾಣದಲ್ಲಿ ಇದ್ದಾಗ ಮಾತ್ರ ಸಮಾಜದಲ್ಲಿಯೂ ಸ್ವಾಸ್ಥ್ಯ ಇರುತ್ತದೆ. ಇದನ್ನು ಯುವ ಸಮೂಹ ಅರಿಯಬೇಕಿದೆ ಎಂದರು.

ಕಲಾಪ್ರಕಾರಗಳ ಸಹಕಾರದಿಂದ ಕರುಳಬಳ್ಳಿಯ ಸಂಬಂಧ ವಿಸ್ತಿರಿಸಲು ಸಾಧ್ಯವಿದೆ. ರಂಗಭೂಮಿಯ ಅನುಭವಕ್ಕೆ ಪವಾಡ ಸೃಷ್ಟಿಸುವ ಶಕ್ತಿ ಇದೆ. ಆದರೆ, ಇಂದು ಮನಸ್ಸಿನ ಸಾಧ್ಯತೆಗಳನ್ನು ನಾಶಗೊಳಿಸುವ ಪ್ರಯತ್ನಗಳು ನಡೆಯುತ್ತಿರುವುದು ವಿಪರ್ಯಾಸ. ವ್ಯಕ್ತಿ ಕೇಂದ್ರಿತ ಕನಸುಗಳು ಸಮಾಜವನ್ನು ಒಡೆಯುತ್ತಿವೆ. ಹೀಗಾಗಿ, ಉಳಿದವರ ಲೇಸು, ಹಿತ ಬಯಸುವ ಕನಸುಗಳನ್ನು ಕಾಣಬೇಕು ಎಂದು ಸಲಹೆ ನೀಡಿದರು.

ಸಾಹಿತಿ ಡಾ.ಕೃಷ್ಣಮೂರ್ತಿ ಹನೂರು ಮಾತನಾಡಿ, ನೊಂದವರ ನೋವನ್ನು ಅರ್ಥ ಮಾಡಿಕೊಳ್ಳುವ ಸಂದರ್ಭ ಇದು. ಹೀಗಾಗಿ, ಕೈದಿಗಳನ್ನು ಪೂರ್ವಗ್ರಹದಿಂದ ಕಾಣುವ ಮನಸ್ಥಿತಿಯನ್ನು ಬದಲಾಯಿಸಿ ಕೊಳ್ಳಬೇಕು. ಬದುಕಿನ ಸಂಘರ್ಷವನ್ನು ಅಭಿನಯಿಸುವ ರೀತಿ ಕೈದಿಗಳ ಮನಪರಿವರ್ತನೆಗೆ ಕಾರಣವಾಗಿದೆ. ‘ಸಂಕಲ್ಪ’ದ ಈ ಪ್ರಯತ್ನವನ್ನು ಪುಸ್ತಕ ರೂಪದಲ್ಲಿ ಹೊರತರಲು ನಿರ್ಧರಿಸಲಾಗಿದೆ. ಕನ್ನಡ, ಇಂಗ್ಲಿಷ್‌­ನಲ್ಲಿ ಇದು ಹೊರಬರಲಿದೆ ಎಂದರು.

ಪೊಲೀಸ್‌ ಕಮಿಷನರ್‌ ಡಾ.ಎಂ.ಎ. ಸಲೀಂ ಮಾತನಾಡಿ, ಅಪರಾಧಗಳನ್ನು ನಿರ್ಮೂಲನೆ ಮಾಡಲು ಯತ್ನಿಸುವ ಪೊಲೀಸರು ಅಪರಾಧಿಗಳ ಕುರಿತು ಯೋಚಿಸಿದ್ದು ಕಡಿಮೆ. ಕಾರಾಗೃಹ ದಲ್ಲಿ ಶಿಕ್ಷೆ ಅನುಭವಿಸುವ ಕೈದಿಯ ಮನಪರಿವರ್ತನೆಯಾಗದ ಹೊರತು ಅಪರಾಧಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ.

ಇದು ಇತ್ತೀಚಿಗೆ ಪೊಲೀಸ್‌ ಇಲಾಖೆಗೂ ಮನದಟ್ಟಾಗಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಾಗ ಮಾತ್ರ ಪೊಲೀಸರ ಕಾರ್ಯಗಳು ಕಡಿಮೆಯಾಗುತ್ತವೆ. ಸಮಾಜವೂ ಸುಧಾರಿಸುತ್ತದೆ ಎಂದು ಹೇಳಿದರು.

ಕೇಂದ್ರ ಕಾರಾಗೃಹದ ಅಧೀಕ್ಷಕಿ ಕೆ.ಸಿ. ದಿವ್ಯಶ್ರೀ, ‘ಸಂಕಲ್ಪ’ದ ಮುಖ್ಯಸ್ಥ ಹುಲುಗಪ್ಪ ಕಟ್ಟೀಮನಿ ಹಾಜರಿದ್ದರು. ಬಳಿಕ ಜಯಂತ ಕಾಯ್ಕಿಣಿ ಅವರ ‘ಜತೆಗಿರುವನು ಚಂದಿರ’ ನಾಟಕ ಪ್ರದರ್ಶನಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT