ADVERTISEMENT

ಜಯಚಾಮರಾಜೇಂದ್ರ ಒಡೆಯರ್‌ಗೆ ಸಾಲಬಾಧೆ– ವ್ಯಥೆ

ಯದುವಂಶ ಸಾಲುದೀಪ

ಈಚನೂರು ಕುಮಾರ್
Published 21 ಡಿಸೆಂಬರ್ 2013, 9:15 IST
Last Updated 21 ಡಿಸೆಂಬರ್ 2013, 9:15 IST

ಜಯಚಾಮರಾಜೇಂದ್ರ ಒಡೆಯರ್‌ ಅವರು ಬೆಂಗಳೂರು ಅರಮನೆಯಲ್ಲಿ ನಿಧನ ಹೊಂದಿದರು. ಆ ದಿನ 23ನೇ ಸೆಪ್ಟೆಂಬರ್‌ 1974. ವಯಸ್ಸು 55 ವರ್ಷ ಆಗಿತ್ತು. 1941ರಲ್ಲಿ ಪಟ್ಟಕ್ಕೆ ಬಂದಿದ್ದರು. ಮನುವನದಲ್ಲಿ ಅಂದೇ ಅಂತ್ಯಕ್ರಿಯೆ ನಡೆಯಿತು. ವಯಸ್ಸಿನಷ್ಟು ಸಲ ಕುಶಾಲತೋಪು ಹಾರಿಸುವುದು ವಾಡಿಕೆ. ಹಾಗಾಗಿ 56 ಬಾರಿ ಕುಶಲತೋಪು ಹಾರಿಸಲಾಯಿತು. ಚಿತೆಗೆ ಶ್ರೀಗಂಧದ ಕೊರಡನ್ನು ಪೇರಿಸಲಾಗಿತ್ತು. ಶ್ರೀಕಂಠದತ್ತ ನರಸಿಂಹರಾಜರೇ ಅಗ್ನಿಸ್ಪರ್ಶ ಮಾಡಿದ್ದರು. ಅಂತ್ಯಕ್ರಿಯೆಯ ಛಾಯಾಚಿತ್ರಗಳನ್ನು ಮುರಳಿ ಫ್ಲ್ಯಾಶ್‌ ಸ್ಟುಡಿಯೋದವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದರು.

ಜಯಚಾಮರಾಜೇಂದ್ರ ಒಡೆಯರ್‌ ಅಪಾರ ಋಣಬಾಧೆಯಿಂದ ನರಳಿದ್ದರು. ಸಾಲಗಾರರ ಉಪಟಳ ಜಾಸ್ತಿಯಾಗಿತ್ತು. ಸುಮಾರು ₨ 70ಲಕ್ಷ ಸಾಲ ಇತ್ತು. ಇದಕ್ಕೂ ಮೂರು ತಿಂಗಳ ಮುಂಚೆ ಹಿರಿಯ ಮಗಳು ನಿಧನರಾಗಿದ್ದರು.

25ನೇ ಅಕ್ಟೋಬರ್‌ 1974ರಂದು ಮಗ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ಗೆ ಖಾಸಗಿಯಾಗಿ ಪಟ್ಟಾಭಿಷೇಕ ನೆರವೇರಿಸಲಾಯಿತು. ರಾಜಗುರು ಪರಕಾಲಮಠದ ಸ್ವಾಮೀಜಿ ಅವರ ಪಾದಪೂಜೆಯೂ ಈ ಸಂದರ್ಭದಲ್ಲಿ ನೆರವೇರಿತು.
ಇದೇ ವರ್ಷ ನಾಡಹಬ್ಬ ದಸರೆಯನ್ನು ವಾಟಾಳ್‌ ನಾಗರಾಜ್‌ ಪ್ರಾರಂಭಿಸಿ ಆನೆಯ ಮೇಲೆ ಚಾಮುಂಡೇಶ್ವರಿ ದೇವಿಯನ್ನು ಕುಳ್ಳಿರಿಸಿದರು. ರಥದ ಮೇಲೆ ಜಯಚಾಮರಾಜೇಂದ್ರ ಒಡೆಯರ್‌ ಅವರ ಭಾವಚಿತ್ರ ಇರಿಸಿ ಮೆರವಣಿಗೆ ನಡೆಸಿದರು. ಈ ದಸರೆಯನ್ನು ವಾಟಾಳ್‌ ನಾಗರಾಜ್‌ ಉದ್ಘಾಟಿಸಿದ್ದರು.

ಆಂದು ಅರಮನೆಯ ಕಲ್ಯಾಣಮಂಟಪದಲ್ಲಿ ಸಾಂಪ್ರದಾಯಿಕವಾಗಿ ಖಾಸಗಿ ದರ್ಬಾರ್‌ ಪ್ರಾರಂಭಿಸಿದವರು ಶ್ರೀಕಂಠದತ್ತರು. ಉಭಯ ಮಹಾರಾಣಿಯರು ಇದ್ದರು. ಗಂಡಭೇರುಂಡ ಲಾಂಛನವನ್ನು ಸ್ಥಾಪಿಸಿ ಪೂಜಿಸಿದರು. ನಂತರ ಸರ್ಕಾರ ಅರಮನೆಯನ್ನು ಟ್ರಸ್ಟ್‌ ಆಗಿ ರಚಿಸಿತು. 12 ಮಂದಿ ಟ್ರಸ್ಟಿಗಳು. ಈ ಪೈಕಿ ರಾಜಕುಟುಂಬದ 7 ಮಂದಿ ಇದ್ದರು. ಶ್ರೀಕಂಠದತ್ತರು, ತ್ರಿಪುರ ಸುಂದರಮ್ಮಣ್ಣಿ, ಮೀನಾಕ್ಷಿ, ಕಾಮಾಕ್ಷಿ, ಇಂದ್ರಾಕ್ಷಿ, ವಿಶಾಲಾಕ್ಷಿಯರೂ ಇದ್ದರು. ಇವರೊಂದಿಗೆ ಕೆ.ಬಿ. ರಾಮಚಂದ್ರರಾಜ ಅರಸ್‌ ಅವರೂ ಸೇರಿದ್ದರು.
ಸರ್ಕಾರ ಟ್ರಸ್ಟಿಗಳಾಗಿ ಅಪತ್ತಿನ ವಿಭಾಗಾಧಿಕಾರಿ, ಕಾರ್ಯದರ್ಶಿ ಎನ್.ಡಿ. ವೆಂಕಟೇಶ್‌, ಎಸ್‌. ವರದನ್‌, ಎಂ. ಶಂಕರನಾರಾಯಣ, ಎಸ್‌. ಬಾಲಕೃಷ್ಣನ್‌ ಅವರಿದ್ದರು.

ನಂತರ ದಸರೆ ಆಚರಿಸಲು ಉದ್ಯಮಿಗಳಿಂದ ಒಂದು ಸಂಘವನ್ನು ಸ್ಥಾಪಿಸಲಾಯಿತು. ಮುಖ್ಯಸ್ಥರಾಗಿ ಐಡಿಯಲ್‌ ಜಾವಾ ಕಾರ್ಖಾನೆಯ ಮಾಲೀಕರಾಗಿದ್ದ ಎಫ್‌.ಕೆ. ಇರಾನಿ ಅಧ್ಯಕ್ಷರಾಗಿದ್ದರು. ಅಕ್ಟೋಬರ್‌ 3ರಿಂದ ದಸರಾ ವಸ್ತುಪ್ರದರ್ಶನ ಆರಂಭಿಸಲಾಯಿತು. ಈ ಸಂಘದಲ್ಲಿದ್ದ ಮಹನೀಯರೆಂದರೆ ಎಂ. ವಿನೋದರಾವ್, ಸುಬ್ಬರಾವ್, ಡಿಟಿಎಸ್‌ ರಾವ್, ತಲಾ  ₨ 10 ಸಾವಿರ ನೀಡಿ ಸಂಘಕ್ಕೆ ಅಜೀವ ಸದಸ್ಯರೂ ಆಗಿದ್ದರು.

ಅಜೀಜ್‌ ಸೇಟ್‌, ಟಿ. ತಿಮಪ್ಪ, ಡಿ. ಜಯದೇವರಾಜೇ ಅರಸ್‌, ಬಿ.ಸಿ. ಲಿಂಗಯ್ಯ ಹಾಗೂ ಎಚ್‌. ಸುಬ್ಬರಾಯ ಖಜಾಂಚಿಯಾಗಿದ್ದರು. ಕೆ.ಎಲ್‌. ರಾಜು ಮತ್ತು ರಾಮಚಂದ್ರಾಚಾರ್‌ ಜಂಟಿ ಕಾರ್ಯದರ್ಶಿಗಳಾಗಿದ್ದರು. 18ನೇ ಸೆಪ್ಟೆಂಬರ್‌ 1975ರಿಂದ 45 ದಿನಗಳ ಕಾಲ ದಸರಾ ವಸ್ತುಪ್ರದರ್ಶನ ನಡೆಯಿತು. ಐದು ವರ್ಷದಿಂದ ನಿಂತುಹೋಗಿದ್ದ ದಸರೆ ನಡೆಯಬೇಕೆಂದು ಎಫ್‌.ಕೆ. ಇರಾನಿ ಮುತುವರ್ಜಿ ವಹಿಸಿದ್ದರು.

9ನೇ ಅಕ್ಟೋಬರ್ 1975ರಿಂದ 14ನೇ ಅಕ್ಟೋಬರ್‌ 1975ರವರೆಗೆ ದಸರೆ ಆಚರಣೆ. 14ನೇ ಅಕ್ಟೋಬರ್‌ 1975ರಂದು ಜಂಬೂಸವಾರಿ ಜರುಗಿತು. ಡಿವಿಜನಲ್‌ ಕಮಿಷನರ್‌ (ವಿಭಾಗಾಧಿಕಾರಿ) ಸ್ಯಾಮ್ಯುಯೆಲ್‌ ಅಪ್ಪಾಜಿ ನೇತೃತ್ವ ವಹಿಸಿದ್ದರು.

ವಸ್ತುಪ್ರದರ್ಶನವನ್ನು ಜೀವಣ್ಣ ರಾಯನಕಟ್ಟೆ ಮೈದಾನದಲ್ಲಿ ವ್ಯವಸ್ಥೆಯಾಗಿತ್ತು. ಅಲ್ಲಿಯೇ ಟಾರ್ಚ್‌ಲೈಟ್‌ ಪರೇಡ್‌ ಕೂಡ ನಡೆಯಿತು.
ಮತ್ತೆ ಮೂರು ವರ್ಷಗಳ ನಂತರ ಜನತಾ ದಸರಾ ಎಂದು ಆರಂಭಿಸಲಾಗಿದೆ. ರಾಜ್ಯಪಾಲರಾಗಿದ್ದ ಮೋಹನ್‌ಲಾಲ್‌ ಸುಖಾಡಿಯಾ ಆಹ್ವಾನಿತರು. ಎಸ್‌.ಎಂ. ಕೃಷ್ಣ ಅವರು ಅಧ್ಯಕ್ಷತೆ ವಹಿಸಿರುವುದು ವಿಶೇಷ.

ಜಂಬೂಸವಾರಿಯನ್ನು ಸರ್ಕಾರ ಮತ್ತು ಸಾರ್ವಜನಿಕರು ಇಬ್ಬರು ಸೇರಿ ನಡೆಸಿದ್ದಾರೆ. ಗಜರಾಜ ರಾಜೇಂದ್ರನ ಮೇಲೆ ಚಾಮುಂಡೇಶ್ವರಿ ವಿಗ್ರಹ ಇರಿಸಿ ಮೆರವಣಿಗೆ ಮಾಡಲಾಗಿದೆ. ಚಿನ್ನದ ಅಂಬಾರಿಯನ್ನು ಆ ವರ್ಷ ಮೆರವಣಿಗೆಯಲ್ಲಿ ತರಲಾಗಿದೆ.

ಜೀಪಿನ ಮೇಲೆ ಭಾರತಮಾತೆಯನ್ನು ಇರಿಸಲಾಗಿತ್ತು. ನಂದಿ ಧ್ವಜವನ್ನು ದೇವರಾಜ ಅರಸು ಅವರು ಪೂಜೆ ಮಾಡಿದ್ದರು. ಸಿಂಹಾಸನವನ್ನು ದರ್ಶನಕ್ಕೆ ಇಡಲಾಗಿತ್ತು. ಪುರಸಭೆ ಕಮಿಷನರ್‌ ಸ್ವತಂತ್ರರಾವ್, ಜಿಲ್ಲಾಧಿಕಾರಿ ಆರ್ಯಮಿತ್ರ ಇದ್ದರು. ಮೈಸೂರು ಸಹೋದರಿಯರಾದ ವಿದ್ಯಾ, ವೀಣಾ ಅವರ ಸಂಗೀತ ಕಾರ್ಯಕ್ರಮವೂ ನಡೆಯಿತು.

ಇದೇ ಸಂದರ್ಭದಲ್ಲಿ ವಾಟಾಳ್‌ ನಾಗರಾಜ್‌ ಅವರು ವಾಣಿವಿಲಾಸ ಮಾರ್ಕೆಟ್‌ ಬಳಿ ನಾಡಹಬ್ಬ ಸಮಿತಿ ರಚಿಸಿಕೊಂಡು ಕಾರ್ಯಕ್ರಮ ಮಾಡಿದರು. ಪಿ.ಬಿ. ಶ್ರೀನಿವಾಸ್‌ ಅವರನ್ನು ಸನ್ಮಾನಿಸಿ ಚಿತ್ರಗೀತೆ ರಸಮಂಜರಿ ಇಟ್ಟುಕೊಳ್ಳಲಾಯಿತು.

1ನೇ ಮಾರ್ಚ್‌ 1974ರಲ್ಲಿ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್‌ ಮಾರಾಟ ಮಾಡಿದ್ದ ಆಸ್ತಿಯ ವಿವರವೊಂದು ಹೀಗಿದೆ. ರಾಯನಕೆರೆ ಡೇರಿಫಾರಂ– 470 ಎಕರೆ, ಬೋಗಾದಿ ಕಾವಲ್‌ 99 ಎಕರೆ, ಮಧುವನ– 75 ಎಕರೆ, ಲುಸಿರೆನ್‌ ಗಾರ್ಡನ್‌– 103 ಎಕರೆ, ಕುರುಬಾರಹಳ್ಳಿ– 6 ಎಕರೆಯನ್ನು 141 ಮಂದಿಗೆ ಮಾರಾಟ ಮಾಡಿದ್ದಾರೆ.

ಶ್ರೀಕಂಠದತ್ತರ ವಿವಾಹ ಅರಮನೆ ಕಲ್ಯಾಣ ಮಂಟಪದಲ್ಲಿಯೇ ಜರುಗಿದೆ. ಅವರತ್ತು 2ನೇ ಫೆಬ್ರವರಿ 1976. ಮಹಾರಾಣಿಯರಾದ ತ್ರಿಪುರ ಸುಂದರಮ್ಮಣ್ಣಿ ಮತ್ತು ಸತ್ಯಪ್ರೇಮಕುಮಾರಿ ಉಪಸ್ಥಿತರಿದ್ದರು. ಪರಕಾಲ ಮತ್ತು ಶೃಂಗೇರಿ ಶ್ರೀಗಳು ಹಾಜರಿದ್ದು ಆಶೀರ್ವದಿಸಿದ್ದಾರೆ. ಇದು ರಾಜತ್ವ ಮುಗಿದ ಕಾಲ ಘಟ್ಟದಲ್ಲಾದ ಹಲವು ಪಲ್ಲಟಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.