ಮೈಸೂರು: ‘ಮೈಸೂರು ದಸರಾ ಮಹೋತ್ಸವದ ಲಲಿತಕಲೆ ಮತ್ತು ಕರಕುಶಲ ಉಪಸಮಿತಿಗೆ ಬಿಡುಗಡೆ ಮಾಡಬೇಕಾಗಿರುವ ₨4.39,066 ಹಣವನ್ನು ಸರ್ಕಾರ ತಕ್ಷಣವೇ ಬಿಡುಗಡೆ ಮಾಡಬೇಕು’ ಎಂದು ಸಮಿತಿ ಅಧ್ಯಕ್ಷ ಬಾದಲ್ ನಂಜುಂಡಸ್ವಾಮಿ ಆಗ್ರಹಿಸಿದರು.
‘ಸರ್ಕಾರವನ್ನು ಮೊದಲಿಗೆ ₨ 16 ಲಕ್ಷ ನೀಡುವಂತೆ ಕೇಳಿದ್ದೆವು. ಆದರೆ, ಸರ್ಕಾರ ₨ 8 ಲಕ್ಷ ಮಾತ್ರ ಬಿಡುಗಡೆ ಮಾಡಿ ಉಳಿದದ್ದನ್ನು ಶೀಘ್ರವೇ ನೀಡುತ್ತೇವೆ ಎಂದು ಭರವಸೆ ನೀಡಿತ್ತು. ಆದರೆ, ಮತ್ತೆ ಯಾವುದೇ ಹಣ ಬಿಡುಗಡೆ ಮಾಡಿಲ್ಲ’ ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
‘ಮೊದಲು ನೀಡಿದ್ದ ₨ 8 ಲಕ್ಷ ಈಗಾಗಲೇ ಖರ್ಚಾಗಿದೆ. ಮನೆಮನೆ ಗ್ಯಾಲರಿಯಲ್ಲಿ ಭಾಗವಹಿಸಿದ ಕಲಾವಿದರಿಗೆ ಪ್ರೋತ್ಸಾಹಧನ, ಮಕ್ಕಳಿಗಾಗಿ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ, ಚಿತ್ರಕಲಾ ಶಿಬಿರ, ಶಿಲ್ಪಕಲಾ ಶಿಬಿರ, ಪ್ರತಿಷ್ಠಾಪನಾ ಕಲಾ ಶಿಬಿರದಲ್ಲಿ ಭಾಗವಹಿಸಿದ ಕಲಾವಿದರಿಗೆ, ಸನ್ಮಾನಿತರಾದ ಹಿರಿಯ ಕಲಾವಿದರಿಗೆ, ವಿವಿಧ ಸ್ಪರ್ಧೆಗಳ ತೀರ್ಪುಗಾರರಿಗೆ ಇನ್ನೂ ಸಂಭಾವನೆ ನೀಡಬೇಕಾಗಿದೆ. ಇದಲ್ಲದೇ ಚಿತ್ರಸಂತೆಗೆ ರೂ ಒಂದು ಲಕ್ಷ ನೀಡಬೇಕಾಗಿದೆ. ಹಾಗಾಗಿ, ಸರ್ಕಾರ ತಕ್ಷಣವೇ ಬಾಕಿ ಉಳಿದಿರುವ ಹಣವನ್ನು ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.
‘ಚಿತ್ರಸಂತೆ’ ಕುರಿತು ಚರ್ಚೆ!
‘ಚಿತ್ರಸಂತೆ ಒಂದು ಲಕ್ಷ ಏಕೆ ಕೊಡಬೇಕು’ ಎಂದು ಕೇಳಿದ ಪತ್ರಕರ್ತರ ಪ್ರಶ್ನೆಗಳಿಗೆ ಬಾದಲ್ ಉತ್ತರಿಸಲು ತಡಕಾಡಿದರು.
‘ಈ ಸಂಬಂಧ ಲೆಕ್ಕ ಗೊತ್ತಿಲ್ಲ. ಲೆಕ್ಕಪತ್ರ ಕೊಡಿ ಎಂದು ಸಂಬಂಧಪಟ್ಟವರನ್ನು ಕೇಳುತ್ತೇವೆ’ ಎಂದು ಪ್ರತಿಕ್ರಿಯಿಸಿದರು.
‘ಚಿತ್ರಸಂತೆಯಲ್ಲಿ ಕಲಾವಿದರಿಗೆ ಶೋಷಣೆಯಾದ ಕುರಿತು ಯಾವುದೇ ದೂರು ಬಂದಿಲ್ಲ’ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಸದಸ್ಯರಿಂದ ಅಸಹಕಾರ: ‘ಸಮಿತಿಯಲ್ಲಿದ್ದ ಸದಸ್ಯರ ಪೈಕಿ ಒಬ್ಬಿಬ್ಬರನ್ನು ಹೊರತುಪಡಿಸಿದರೆ ಉಳಿದವರಿಂದ ಯಾವುದೇ ಬೆಂಬಲ ವ್ಯಕ್ತವಾಗಲಿಲ್ಲ’ ಎಂದು ಸಮಿತಿ ಸದಸ್ಯರಾದ ಆರ್. ಮಧೂ ಅಸಹಾಯಕತೆ ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು. ‘ಸಮಿತಿಯಲ್ಲಿದ್ದ 35 ಸದಸ್ಯರ ಪೈಕಿ ಬಹುತೇಕರು ನಿರೀಕ್ಷಿತ ಬೆಂಬಲ ನೀಡಲಿಲ್ಲ. ಕೊನೆಗೆ ಕಲಾವಿದರೆ ಸಮಿತಿ ಕಾರ್ಯಗಳಿಗೆ ಕೈಜೋಡಿಸಿದರು’ ಎಂದು ಅವರು ತಿಳಿಸಿದರು. ಕಲಾವಿದರಾದ ಮಂಜು, ರಮೇಶ್ ಹಾಗೂ ಎನ್. ಶಿವಪ್ರಸಾದ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.