ADVERTISEMENT

ನ್ಯಾನೋ ತಂತ್ರಜ್ಞಾನ ಪಿ.ಜಿ ಕೋರ್ಸ್ ಆರಂಭ

ಮೈಸೂರು ವಿಶ್ವವಿದ್ಯಾಲಯ: ಶಿಕ್ಷಣ ಮಂಡಳಿ ಸಭೆ ಅಸ್ತು

​ಪ್ರಜಾವಾಣಿ ವಾರ್ತೆ
Published 19 ಜುಲೈ 2014, 6:11 IST
Last Updated 19 ಜುಲೈ 2014, 6:11 IST

ಮೈಸೂರು: ಮೈಸೂರು ವಿಶ್ವವಿದ್ಯಾಲಯದಲ್ಲಿ ರಸಾಯಿನಿಕ ಜೀವಶಾಸ್ತ್ರ ಮತ್ತು ನ್ಯಾನೋ ತಂತ್ರಜ್ಞಾನ ಸ್ನಾತಕೋತ್ತರ ಪದವಿ ಕೋರ್ಸ್‌ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಕುಲಪತಿ ಪ್ರೊ.ಕೆ.ಎಸ್‌. ರಂಗಪ್ಪ ತಿಳಿಸಿದರು.

ನಗರದ ಕ್ರಾಫರ್ಡ್‌ ಭವನದಲ್ಲಿ ಶುಕ್ರವಾರ ನಡೆದ  ಶಿಕ್ಷಣ ಮಂಡಳಿ ಸಭೆಯಲ್ಲಿ ಸಿಂಡಿಕೇಟ್‌ ಸಭೆಯ ತೀರ್ಮಾನಗಳನ್ನು ಅನುಮೋದನೆಗೆ ಮಂಡಿಸಿ ಅವರು ಮಾತನಾಡಿದರು.        
       
‘ಬಯೋ­ಕಾನ್‌’ ಮತ್ತು ‘ಒರಿಜಿನ್‌’ ಸಂಸ್ಥೆಗಳ ಸಹಯೋಗದಲ್ಲಿ ರಸಾಯಿನಿಕ ಜೀವಶಾಸ್ತ್ರ ವಿಷಯದಲ್ಲಿ ಎಂ.ಎಸ್ಸಿ ಕೋರ್ಸ್‌ ಆರಂಭಿಸಲಾಗುತ್ತಿದೆ. ರಸಾಯಿನಿಕ ಜೀವಶಾಸ್ತ್ರ ಮತ್ತು ‘ನ್ಯಾನೋ’ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದವರಿಗೆ ವ್ಯಾಪಕ ಬೇಡಿಕೆ ಇದೆ. ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಈ ವಿಭಾಗಗಳನ್ನು ತೆರೆಯ­ಲಾಗುವುದು ಎಂದು ಅವರು ತಿಳಿಸಿದರು.

ಬಿ.ಎ ವಿದ್ಯಾರ್ಥಿಗಳಿಗೆ 2 ಹೊಸ ಐಚ್ಛಿಕ ವಿಷಯ ಪರಿಚಯ ಪದವಿ ಕೋರ್ಸ್‌ನ ಬಿ.ಎ ತರಗತಿಗೆ ಎನ್‌ಎಸ್‌ಎಸ್‌ (ರಾಷ್ಟ್ರೀಯ ಸೇವಾ ಯೋಜನೆ), ಎನ್‌ಸಿಸಿ (ನ್ಯಾಷನಲ್‌ ಕೆಡೆಟ್‌ ಕಾರ್ಪ್ಸ್‌), ಕ್ರೀಡೆ ವಿಷಯಗಳನ್ನು ಪಠ್ಯವಾಗಿ ಪರಿಚಯಿಸುವ ನಿಟ್ಟಿನಲ್ಲಿ ಯೋಗ– ನ್ಯಾಚುರೋಪತಿ, ಸ್ಪೋರ್ಟ್ಸ್‌–ದೈಹಿಕ ಶಿಕ್ಷಣ ಐಚ್ಛಿಕ ವಿಷಯಗಳನ್ನು ಪರಿಚಯಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ. ಕೃಷ್ಣ ಮಾತನಾಡಿ, ಈ ಐಚ್ಛಿಕ ವಿಷಯಗಳನ್ನು ಬಿ.ಎ ಪದವಿ ಸಂಯೋಜನೆಗಳಲ್ಲಿ ಆರಂಭಿಸಲಾಗುತ್ತಿದೆ.

ಯೋಗ ತಜ್ಞ ಎಂ.ಎನ್‌. ಜಯಕುಮಾರ್, ದೈಹಿಕ ಶಿಕ್ಷಣ ವಿಭಾಗದ ಡಾ. ತಿರುಮಲೈ ಗೋಪಾಲನ್‌ ಮೊದಲಾದ ಪರಿಣತರ ಸಮಿತಿಯು ಈ ವಿಷಯಗಳ ಪಠ್ಯಕ್ರಮವನ್ನು ಸಿದ್ಧಪಡಿಸಲಿದೆ.

ಬೋಧನಾ ಮಾಧ್ಯಮ ಕನ್ನಡ ಆಗಿರುತ್ತದೆ ಎಂದು ವಿವರ ನೀಡಿದರು. ಐಟಿಐ ಪಾಸಾದವರಿಗೆ ಬಿ.ಎ, ಬಿ.ಸಿ.ಎ, ಬಿ.ಕಾಂ ಪ್ರವೇಶಾವಕಾಶ ಐಟಿಐ (10+2) ಉತ್ತೀರ್ಣರಾದವರು ಬಿ.ಎ, ಬಿ.ಸಿ.ಎ, ಬಿ.ಕಾಂ ಪದವಿ ಕೋರ್ಸ್‌ಗಳಿಗೆ ನೇರವಾಗಿ ಪ್ರವೇಶ ಪಡೆಯಲು ಅವಕಾಶ ನೀಡುವುದಕ್ಕೆ ಸಭೆ ಒಪ್ಪಿಗೆ ನೀಡಿತು.

ಪಿಯುನಲ್ಲಿ ವಿಜ್ಞಾನ ವ್ಯಾಸಂಗ ಮಾಡಿದವರು ಪದವಿಯಲ್ಲಿ ಬಿ.ಎ, ಬಿ.ಕಾಂ, ಬಿ.ಬಿ.ಎಂ ಕೋರ್ಸ್‌ಗೆ ದಾಖಲಾಗಲು ಅವಕಾಶ ಇದೆ. ಎಸ್ಸೆಸ್ಸೆಲ್ಸಿ ನಂತರ ಎರಡು ವರ್ಷ ಐಟಿಐ ಪೂರೈಸಿದವರಿಗೂ ಪದವಿ ಕೋರ್ಸ್‌ಗಳಿಗೆ ನೇರ ಅವಕಾಶ ಕಲ್ಪಿಸುವುದರಲ್ಲಿ ತಪ್ಪಿಲ್ಲ ಎಂದು ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.

‘ಕನೆಕ್ಟ್‌ ಟು ಇಂಡಿಯಾ’
ವಿದೇಶಿ ವಿದ್ಯಾರ್ಥಿಗಳಿಗೆ ಭಾರತದ ಸಂಸ್ಕೃತಿ ಮತ್ತು ಪರಂಪರೆ, ಇತರ ಅಂಶಗಳನ್ನು ತಿಳಿಸುವುದು ‘ಕನೆಕ್ಟ್‌ ಟು ಇಂಡಿಯಾ’ ಕಾರ್ಯಕ್ರಮದ ಉದ್ದೇಶವಾಗಿದೆ. ಇದು ಆರು ವಾರದ ಕಾರ್ಯಕ್ರಮವಾಗಿದೆ. ಅಮೆರಿಕ, ಇಂಗ್ಲೆಂಡ್‌, ಆಸ್ಟ್ರೇಲಿಯಾ, ಜರ್ಮನಿ, ಫ್ರಾನ್ಸ್‌ ಮುಂತಾದ ದೇಶಗಳ ಪದವಿ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಪ್ರವಾಸಿ ತಾಣ ಭೇಟಿ, ಸಂಸ್ಕೃತಿ ಅಧ್ಯಯನ ಮೊದಲಾದವನ್ನು ನಡೆಸುವರು. ಇದು ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಯೋಜನೆಯಾಗಿದೆ. ವಿಶ್ವವಿದ್ಯಾಲಯ ರಚಿಸಿದ್ದ ಸಮಿತಿ ಈ ಕೋರ್ಸ್‌ನ ಪಠ್ಯಕ್ರಮವನ್ನು ರಚಿಸಿದೆ ಎಂದು ಪ್ರೊ.ರಂಗಪ್ಪ ತಿಳಿಸಿದರು.

ಕಾರ್ಯಕ್ರಮದ ಸಂಯೋಜನಾಧಿಕಾರಿ ಪ್ರೊ.ಎಸ್‌. ರವಿ ಮಾತನಾಡಿ, ಹೈದರಾಬಾದ್‌, ದೆಹಲಿ, ಕೋಲ್ಕತ್ತ, ಜವಾಹರಲಾಲ್‌ ನೆಹರು ಮತ್ತು ಮೈಸೂರು ವಿಶ್ವವಿದ್ಯಾಲಯಗಳು ಈ ಕಾರ್ಯಕ್ರಮವನ್ನು ಪರಿಚಯಿಸುತ್ತಿವೆ. ಕಾರ್ಯಕ್ರಮದ ರೂಪರೇಷೆಗಳ ವಿಚಾರ ವಿನಿಮಯದ ನಿಟ್ಟಿನಲ್ಲಿ ಪ್ರತ್ಯೇಕ ವೆಬ್‌ಸೈಟ್‌ ಅನ್ನು ಶೀಘ್ರದಲ್ಲಿ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.

ಅಂತರರಾಷ್ಟ್ರೀಯ ಭೌತ–ಜೀವಶಾಸ್ತ್ರ ಕೇಂದ್ರ
ಮೈಸೂರು ವಿಶ್ವವಿದ್ಯಾಲಯದಲ್ಲಿ ಸಿಂಗಪುರದ ನ್ಯಾಷನಲ್‌ ವಿಶ್ವವಿದ್ಯಾಲಯವು ಅಂತರರಾಷ್ಟ್ರೀಯ ಭೌತ–ಜೀವಶಾಸ್ತ್ರ ಕೇಂದ್ರ ಆರಂಭಿಸಲು ಮುಂದೆ ಬಂದಿದೆ. ಕೇಂದ್ರ ಸ್ಥಾಪನೆಗೆ ಸಂಬಂಧಿಸಿದಂತೆ ನ್ಯಾಷನಲ್‌ ವಿ.ವಿ.ಯ ಪ್ರೊ. ಶಿವಶಂಕರ್‌ ಅವರು ಮಂಡಿಸಿದ ಪ್ರಸ್ತಾವಕ್ಕೆ ಸಿಂಡಿಕೇಟ್‌ ಸಭೆ ಒಪ್ಪಿಗೆ ನೀಡಿದೆ.

₨ 100 ಕೋಟಿ ಅಂದಾಜು ವೆಚ್ಚದಲ್ಲಿ ಕೇಂದ್ರ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ವಿಷಯವನ್ನು ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಗಮನಕ್ಕೆ ತರಲಾಗಿದೆ. ಚಾಮುಂಡಿ ಬೆಟ್ಟದಲ್ಲಿನ ತಪ್ಪಲಿನಲ್ಲಿರುವ ವಿಶ್ವವಿದ್ಯಾಲಯಕ್ಕೆ ಸೇರಿದ 22 ಎಕರೆ ಜಾಗದಲ್ಲಿ ಈ ಕೇಂದ್ರವನ್ನು ಸ್ಥಾಪಿಸಲು ಚಿಂತನೆ ನಡೆದಿದೆ ಎಂದು ಪ್ರೊ.ರಂಗಪ್ಪ ತಿಳಿಸಿದರು.

ಮೈಸೂರು ವಿಶ್ವವಿದ್ಯಾಲಯದ ಶತಮಾನೋತ್ಸವ ಚಟುವಟಿಕೆಗಳಿಗೆ ರಾಜ್ಯ ಸರ್ಕಾರದಿಂದ ₨ 100 ಕೋಟಿ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಶತಮಾನೋತ್ಸವ ಆಚರಣೆ ಹಿನ್ನೆಲೆಯಲ್ಲಿ ವರ್ಷಪೂರ್ತಿ ಕಾರ್ಯಕ್ರಮ ಆಯೋಜಿಸುವ ನಿಟ್ಟಿನಲ್ಲಿ ಉನ್ನತಮಟ್ಟದ ಅಧಿಕಾರಿಗಳ ಸಭೆ ನಡೆದಿದೆ.  ಶತಮಾನೋತ್ಸವ ಭವನ ನಿರ್ಮಾಣಕ್ಕೆ ₨ 50 ಕೋಟಿ , ಕಾರ್ಯಕ್ರಮಗಳ ಆಯೋಜನೆಗೆ ತಕ್ಷಣಕ್ಕೆ ₨ 10 ಕೋಟಿ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ತಿಳಿಸಿದರು.

24ಕ್ಕೆ ಪ್ರಧಾನಿ ಭೇಟಿಗೆ ನಿಯೋಗ
ವಿಶ್ವವಿದ್ಯಾಲಯದ ಶತಮಾನೋತ್ಸವ ಕಾರ್ಯಕ್ರಮಗಳಿಗೆ ಅನುದಾನ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಈ ನಿಟ್ಟಿನಲ್ಲಿ ಹಾಸನ, ಮೈಸೂರು, ಮಂಡ್ಯ, ಚಾಮರಾಜನಗರ ಸಂಸದರು ಜುಲೈ 24ರಂದು ಪ್ರಧಾನಿ ಭೇಟಿಗೆ ಅವಕಾಶ ಕಲ್ಪಿಸಿದ್ದಾರೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.