ADVERTISEMENT

ಪರಶುರಾಮ ಅವತಾರ ಕುರಿತ ರಾಷ್ಟ್ರೀಯ ವಿಚಾರಸಂಕಿರಣ ನಾಳೆ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2016, 10:44 IST
Last Updated 29 ಫೆಬ್ರುವರಿ 2016, 10:44 IST

ಮೈಸೂರು: ಇಲ್ಲಿನ ವಿಜಯನಗರದ ಸುದರ್ಶನ ನಾರಸಿಂಹ ಕ್ಷೇತ್ರದ ಪೀಠಾಧಿಪತಿ ಡಾ.ಭಾಷ್ಯಂ ಸ್ವಾಮೀಜಿ ಹಾಗೂ ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ‘ಧರ್ಮ ಸಾಹಿತ್ಯ ಮತ್ತು ಕಲೆಯಲ್ಲಿ ಪರಶುರಾಮಾವತಾರ’ ಕುರಿತು ಮಾರ್ಚ್ 1ರಿಂದ ಎರಡು ದಿನಗಳ ಕಾಲ ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿನ ಪ್ರಾಚ್ಯವಸ್ತು ಇಲಾಖೆಯ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ವಿಚಾರ ಸಂಕಿರಣದಲ್ಲಿ ಶೃಂಗೇರಿ, ಚೆನ್ನೈ, ಹೈದರಾಬಾದ್, ತಿರುವನಂತ ಪುರ, ಬೆಂಗಳೂರು, ಹಂಪಿ, ತಿರುಪತಿ, ವಿಶಾಖಪಟ್ಟಣ, ಉಜಿರೆ, ಗುರುವಾಯೂರ್ ಮೊದಲಾ ದೆಡೆಯಿಂದ ವಿದ್ವಾಂಸರು ಉಪನ್ಯಾಸ ನೀಡಲಿದ್ದಾರೆ ಎಂದು ಕಾರ್ಯಕ್ರಮದ ಸಂಯೋಜಕ ಕೃಷ್ಣಪ್ರಸಾದ್ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮಾರ್ಚ್ 1ರಂದು ಬೆಳಿಗ್ಗೆ 9.30ಕ್ಕೆ ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ಡಾ.ಸಿ.ಜಿ. ಬೆಟಸೂರಮಠ ಅವರು ವಿಚಾರಸಂಕಿರಣವನ್ನು ಉದ್ಘಾಟಿ ಸಲಿದ್ದು, ಪ್ರವಚನಕಾರ ದುಷ್ಯಂತ್ ಶ್ರೀಧರ್ ಪ್ರಾಸ್ತಾವಿಕ ನುಡಿಗಳ ನ್ನಾಡಲಿದ್ದಾರೆ. ಕೇರಳದ ಪ್ರಾಚ್ಯವಸ್ತು ಸಂಗ್ರಹಾಲಯಗಳ ನಿವೃತ್ತ ನಿರ್ದೇಶಕ ಡಾ.ಟಿ.ಎಸ್. ಸತ್ಯಮೂರ್ತಿ ಅವರು ಎರಡು ದಿನದ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸುವರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಭಾರತೀಯ ವಿದ್ಯಾಭವನದ ಅಧ್ಯಕ್ಷ ಡಾ.ಎ.ವಿ. ನರಸಿಂಹಮೂರ್ತಿ ವಹಿಸುವರು. ಡಾ.ಭಾಷ್ಯಂ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸುವರು ಎಂದು ಅವರು ವಿವರಿಸಿದರು.

ಮಾರ್ಚ್ 2ರಂದು ಮಧ್ಯಾಹ್ನ 12ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಭಾರತೀಯ ವಿದ್ಯಾಭವನದ ಅಧ್ಯಕ್ಷ ಡಾ.ಎ.ವಿ. ನರಸಿಂಹಮೂರ್ತಿ ಸಮಾರೋಪ ಭಾಷಣ ಮಾಡುವರು. ವಿಚಾರ ಸಂಕಿರಣದ ಸರ್ವಾಧ್ಯಕ್ಷ ಡಾ.ಟಿ.ಎಸ್. ಸತ್ಯಮೂರ್ತಿ ಎರಡು ದಿನಗಳ ಉಪನ್ಯಾಸಗಳ ವಿಶ್ಲೇಷಣೆ ಮಾಡುವರು. ಎಎಸ್‌ಐನ ಶಿಲಾಶಾಸನ ವಿಭಾಗದ ನಿರ್ದೇಶಕ ಡಾ.ಡಿ.ಎಂ. ನಾಗರಾಜ್, ಶೃಂಗೇರಿಯ ಪ್ರಾಚ್ಯವಸ್ತು ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಸುಂದರ, ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ನಿರ್ದೇಶಕ ಗವಿಸಿದ್ಧಯ್ಯ ಭಾಗವಹಿಸುವರು.

ಏನೇನು ಉಪನ್ಯಾಸಗಳು?
*ಕರ್ನಾಟಕದ ಪರಂಪರೆ ಹಾಗೂ ಸಾಹಿತ್ಯದಲ್ಲಿ ಮಹರ್ಷಿ ಪರಶುರಾಮ
*ಪರಶುರಾಮ– ಭಾರತದ ಹಲವು ಸಂಸ್ಕೃತಿಯ ಸಂಘಟಕ
*ಪರಂಪರೆ ಹಾಗೂ ಶಾಸನಶಾಸ್ತ್ರದ ದೃಷ್ಟಿಯಲ್ಲಿ ಪರಶುರಾಮ
*ಕೇರಳದ ಕಲೆ ಮತ್ತು ಸಾಹಿತ್ಯದಲ್ಲಿ ಪರಶುರಾಮ
*ಮಹಾಭಾರತದಲ್ಲಿ ಪರಶುರಾಮ
*ಕರ್ನಾಟಕದ ಸ್ಥಳೀಯ ಪುರಾಣದಲ್ಲಿ ಪರಶುರಾಮ
*ಸಂಸ್ಕೃತ ಸಾಹಿತ್ಯದಲ್ಲಿ ಪರಶುರಾಮ
*ಸಾಧಕನಾಗಿ ಪರಶುರಾಮ
*ಪರಶುರಾಮನ ಸ್ಥಳಪುರಾಣ ಹಾಗೂ ವೈಜ್ಞಾನಿಕತೆ
*ಹೊಯ್ಸಳ ಹಾಗೂ ಹೊಯ್ಸಳೇತರ ಕಾಲಘಟ್ಟದಲ್ಲಿ ಪರಶುರಾಮನನ್ನು ಕುರಿತ ಶಿಲ್ಪಕಲೆ ಹಾಗೂ ವಾಸ್ತುಶಿಲ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.