ADVERTISEMENT

ಪೊಲೀಸ್‌ ಫೇಸ್‌ಬುಕ್‌ಗೆ ಕೆಂಪಯ್ಯ ಚಾಲನೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2013, 8:27 IST
Last Updated 22 ಅಕ್ಟೋಬರ್ 2013, 8:27 IST

ಮೈಸೂರು: ‘ಮೈಸೂರು ನಗರ ಪೊಲೀಸ್ ದೇಶದಲ್ಲಿಯೇ ಮಾದರಿ ಆಗಬೇಕು’ ಎಂದು ನಿವೃತ್ತ ಎಡಿಜಿಪಿ ಕೆಂಪಯ್ಯ ಕರೆ ನೀಡಿದರು.
ನಗರ ಪೊಲೀಸ್‌ ಕಮಿಷನರ್ ಕಚೇರಿಯಲ್ಲಿ ಸೋಮವಾರ ‘ಇಂಟರಾ್ಯಕ್ಟಿವ್‌ ವೆಬ್‌ಸೈಟ್‌’ ಮತ್ತು ‘ಪೊಲೀಸ್‌ ಫೇಸ್‌ಬುಕ್‌’ಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಪೊಲೀಸರ ಮೇಲೆ ನಂಬಿಕೆ ಇಟ್ಟು ಸಾರ್ವಜನಿಕರು ಪೊಲೀಸ್‌ ಠಾಣೆಗೆ ಬರುತ್ತಾರೆ. ಅವರ ನಂಬಿಕೆಯನ್ನು ಹುಸಿ ಮಾಡಬಾರದು.

ಪೊಲೀಸ್‌ ಠಾಣೆಗೆ ಬರುವವರನ್ನು ಸೌಜನ್ಯದಿಂದ ಮಾತನಾಡಿಸಿ, ಕಷ್ಟವನ್ನು ಕೇಳಿ ಪರಿಹರಿಸಲು ಮುಂದಾಗಬೇಕು. ಇದರಿಂದ ಸಿಬ್ಬಂದಿ ಏನನ್ನೂ ಕಳೆದುಕೊಳ್ಳುವುದಿಲ್ಲ. ಇಲ್ಲವಾದಲ್ಲಿ ಪೊಲೀಸರ ಮೇಲೆ ಜನರು ಇಟ್ಟಿರುವ ನಂಬಿಕೆಯನ್ನು ಹುಸಿಗೊಳಿಸಿದಂತಾಗುತ್ತದೆ’ ಎಂದು ಹೇಳಿದರು.

‘ಪೊಲೀಸರಿಗೆ ಕೆಲಸದ ಒತ್ತಡವಿದ್ದರೂ ಸಾರ್ವಜನಿಕರನ್ನು ನಿರ್ಲಕ್ಷ್ಯ ಮಾಡಬಾರದು. ಯಾವ ವಿಷಯಕ್ಕೆ ಸಂಬಂಧಿಸಿದಂತೆ ದೂರು ನೀಡಲು ಬಂದಿದ್ದಾರೆ ಎಂಬುದನ್ನು ಅರಿತು ನ್ಯಾಯ ಒದಗಿಸಲು ಮುಂದಾಗಬೇಕು. ಪೊಲೀಸ್‌ ಸಿಬ್ಬಂದಿಯ ನಡೆ, ನುಡಿ ಎಲ್ಲವನ್ನು ಮಾಧ್ಯಮ ಬಹಳ ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ. ಹಾಗಾಗಿ, ಪ್ರಾಮಾಣಿಕ, ಪಾರದರ್ಶಕವಾಗಿ ಕೆಲಸ ಮಾಡುವ ಮೂಲಕ ಇಲಾಖೆಗೆ ಒಳ್ಳೆಯ ಹೆಸರನ್ನು ತಂದುಕೊಡಬೇಕು.

ನಗರ ಪೊಲೀಸ್‌ ಇಲಾಖೆ ಸಾಕಷ್ಟು ಬದಲಾವಣೆ ಆಗಿದೆ. ಕಮಿಷನರ್ ಸಲೀಂ ಅವರು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದು, ಅವರಿಗೆ ಉತ್ತಮ ಸಹಕಾರ ನೀಡಬೇಕು’ ಎಂದು ಕರೆ ನೀಡಿದರು.

ನಗರ ಪೊಲೀಸ್‌ ಕಮಿಷನರ್‌ ಡಾ.ಎಂ.ಎ. ಸಲೀಂ ಮಾತನಾಡಿ, ‘ರಾಜಧಾನಿ ಬೆಂಗಳೂರು ಹೊರತುಪಡಿಸಿದರೆ, ಮೈಸೂರಿನಲ್ಲಿ ಫೇಸ್‌ಬುಕ್‌ ಸಾಮಾಜಿಕ ತಾಣದ ಮೂಲಕ ಸಾರ್ವಜನಿಕರು ಪೊಲೀಸ್‌ ಇಲಾಖೆಗೆ ಸಂಬಂಧಿಸಿದಂತೆ ಆನ್‌ಲೈನ್‌ ಮೂಲಕವೇ ದೂರುಗಳನ್ನು ನೀಡಬಹುದು. ಸಾರ್ವಜನಿಕರಿಗೆ ಸಂಬಂಧಿಸಿದ ಸಂದೇಶಗಳನ್ನು ವೆಬ್‌ಸೈಟ್‌ ಮೂಲಕ ನೇರವಾಗಿ ತಿಳಿಸುವ ವ್ಯವಸ್ಥೆ ಇದಾಗಿದೆ’ ಎಂದು ಹೇಳಿದರು.

ಡಿಸಿಪಿ (ಕಾನೂನು ಸುವ್ಯವಸ್ಥೆ) ಎ.ಎನ್‌. ರಾಜಣ್ಣ, ಡಿಸಿಪಿ (ಅಪರಾಧ–ಸಂಚಾರ) ಎಂ.ಎಂ. ಮಹದೇವಯ್ಯ, ಡಿಸಿಪಿ ಪ್ರಭಾಶಂಕರ್‌, ಮೌಂಟೆಡ್‌ ಪೊಲೀಸ್‌ ಕಮಾಂಡೆಂಟ್‌ ಆರ್‌. ಜನಾರ್ದನ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.