ADVERTISEMENT

ವಿವಿಧ ಪ್ರಕಾಶಕರ 100 ಪುಸ್ತಕಗಳ ಬಿಡುಗಡೆ

ದಸರಾ ಪುಸ್ತಕ ಮೇಳಕ್ಕೆ ಸಚಿವೆ ಉಮಾಶ್ರೀ ಚಾಲನೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2014, 9:35 IST
Last Updated 26 ಸೆಪ್ಟೆಂಬರ್ 2014, 9:35 IST
ಮೈಸೂರಿನ ಕಾಡಾ ಮೈದಾನದಲ್ಲಿ ಆಯೋಜಿಸಿರುವ ದಸರಾ ಪುಸ್ತಕ ಮೇಳಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಬುಧವಾರ ಚಾಲನೆ ನೀಡಿ, ಮಳಿಗೆಯಲ್ಲಿ ಪುಸ್ತಕ ವೀಕ್ಷಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ  ಕೆ.ಎ. ದಯಾನಂದ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ, ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಇದ್ದಾರೆ
ಮೈಸೂರಿನ ಕಾಡಾ ಮೈದಾನದಲ್ಲಿ ಆಯೋಜಿಸಿರುವ ದಸರಾ ಪುಸ್ತಕ ಮೇಳಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಬುಧವಾರ ಚಾಲನೆ ನೀಡಿ, ಮಳಿಗೆಯಲ್ಲಿ ಪುಸ್ತಕ ವೀಕ್ಷಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ಎ. ದಯಾನಂದ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ, ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಇದ್ದಾರೆ   

ಮೈಸೂರು: ದಸರಾ ಇತಿಹಾಸದಲ್ಲೇ ಮೊತ್ತಮೊದಲ ಬಾರಿಗೆ ಇಲ್ಲಿನ ‘ಕಾಡಾ’ ಮೈದಾನದಲ್ಲಿ ಆಯೋಜಿಸಿರುವ 11 ದಿನಗಳ ‘ದಸರಾ ಪುಸ್ತಕ ಮೇಳ’ಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಗುರುವಾರ ಚಾಲನೆ ನೀಡಿದರು. ಬಳಿಕ ಡಾ.ಯು.ಆರ್‌. ಅನಂತಮೂರ್ತಿ ವೇದಿಕೆಯಲ್ಲಿ ವಿವಿಧ ಪ್ರಕಾಶಕರ 100 ಪುಸ್ತಕಗಳನ್ನು ಅವರು ಬಿಡುಗಡೆ ಮಾಡಿ, ‘ದಸರಾದಲ್ಲಿ ಪುಸ್ತಕ ಮೇಳವಿಲ್ಲ ಎಂಬ ಕೊರಗಿತ್ತು. ಆದರೆ, ಈ ಬಾರಿ ಕನ್ನಡ ಪುಸ್ತಕ ಪ್ರಾಧಿಕಾರ ಅದನ್ನು ನೀಗಿಸಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ನಮ್ಮ ನೆಲ, ಜಲ, ಸಂಪತ್ತು, ಸಂಸ್ಕೃತಿ, ಸಂಸ್ಕಾರಗಳು ಕಾಲಕ್ಕೆ ತಕ್ಕಂತೆ ಏರುಪೇರಾಗುತ್ತಿದ್ದು, ಅವುಗಳನ್ನು ಸಾಹಿತಿಗಳು ದಾಖಲಿಸುವ ಕೆಲಸ ಮಾಡುತ್ತಿದ್ದಾರೆ. ಸಾಹಿತ್ಯದಿಂದ ಹೊರಬರುವ ವಿಚಾರಗಳನ್ನು ತಿಳಿದು ಕೊಳ್ಳುವ ಮನೋಭಾವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಈ ಮೂಲಕ ಸಾಹಿತ್ಯ ಲೋಕ ಬೆಳೆಯಲು ಪ್ರೋತ್ಸಾಹ ನೀಡಬೇಕು’ ಎಂದರು.

‘ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಈ ಹಿಂದೆ ವಾರ್ಷಿಕವಾಗಿ ₨ 40 ಲಕ್ಷ ಅನುದಾನ ಸರ್ಕಾರ ನೀಡುತ್ತಿತ್ತು. ಅದನ್ನು ಈ ಬಾರಿ ₨ 1 ಕೋಟಿಗೆ ಹೆಚ್ಚಿಸಿ, ಕನ್ನಡ ಸಾಹಿತ್ಯದ ಅಭಿವೃದ್ಧಿಗೆ ಪ್ರೋತ್ಸಾಹಿಸಿದೆ. ಹೀಗಾಗಿ, ಪ್ರಾಧಿಕಾರದಿಂದ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ’ ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್, ನಿರ್ದೇಶಕ ಕೆ.ಎ. ದಯಾನಂದ, ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ, ಆಡಳಿತಾಧಿಕಾರಿ ಅಶೋಕ ಎನ್‌. ಚಲವಾದಿ, ಪುಸ್ತಕ ಪ್ರಕಾಶನದ ಬಿ.ಎನ್‌. ಶ್ರೀರಾಮ್‌ ಇದ್ದರು.

ಶೇ 15 ರಿಯಾಯಿತಿ: ಗುರುವಾರ ಚಾಲನೆ ಪಡೆದಿರುವ ಪುಸ್ತಕ ಮೇಳವು ಅ. 5ರವರೆಗೆ ನಡೆಯಲಿದೆ. ಮೇಳಕ್ಕೆ ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿದ್ದು, ಇಲ್ಲಿ ಖರೀದಿಸುವ ಪ್ರತಿ ಪುಸ್ತಕಕ್ಕೆ ಕನಿಷ್ಠ ಶೇ 15 ರಿಯಾಯಿತಿ ದರ ಇದೆ. ಬೆಳಿಗ್ಗೆ 10ರಿಂದ ರಾತ್ರಿ 8ರತನಕ ಮಳಿಗೆಗಳು ತೆರೆದಿರುತ್ತವೆ.

65 ಮಳಿಗೆಗಳು: ಸ್ವಪ್ನ ಬುಕ್‌ ಹೌಸ್‌, ಡಿ.ವಿ.ಕೆ. ಮೂರ್ತಿ, ಭಾರತಿ, ನವ ಕರ್ನಾಟಕ, ಅಂಕಿತ ಪ್ರಕಾಶನ, ಮೈಸೂರು ವಿವಿಯ ಪ್ರಸಾರಾಂಗ, ಸಂಸ್ಕೃತಿ, ಮಾನಸ, ಅಭಿರುಚಿ, ಪುಸ್ತಕ, ಅಭಿನವ, ವಸಂತ, ಉದಯರವಿ, ಸೃಷ್ಟಿ, ರೂಪ, ತನುಮನ, ಸಾಹಿತ್ಯ, ವಿಜಯವಾಹಿನಿ, ಚೇತನ ಬುಕ್‌ ಹೌಸ್‌, ನ್ಯಾಷನಲ್‌ ಬುಕ್‌ ಟ್ರಸ್ಟ್‌, ಶಾಂತಿ, ಸಂವಹನ ಸೇರಿದಂತೆ ಒಟ್ಟು 65 ಪ್ರಕಾಶನಗಳ ಮಳಿಗೆಗಳನ್ನು ಮೇಳದಲ್ಲಿ ತೆರೆಯಲಾಗಿದೆ. ಅಲ್ಲದೆ, ಕನ್ನಡ ಪುಸ್ತಕ ಪ್ರಾಧಿಕಾರ, ಸರ್ಕಾರದ ಎಲ್ಲ ಅಕಾಡೆಮಿಗಳ ಮಳಿಗೆಗಳೂ ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.