ADVERTISEMENT

ವೈವಿಧ್ಯಮಯ ವಿಷಯಗಳ ಕಣಜವಾದ ಕವಿಗೋಷ್ಠಿ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2017, 8:45 IST
Last Updated 28 ಸೆಪ್ಟೆಂಬರ್ 2017, 8:45 IST
ಮೈಸೂರಿನಲ್ಲಿ ಜಗನ್ಮೋಹನ ಅರಮನೆಯಲ್ಲಿ ಬುಧವಾರ ನಡೆದ ದಸರಾ ವಿಖ್ಯಾತ ಕವಿಗೋಷ್ಠಿಯಲ್ಲಿ ಕವಿಗೋಷ್ಠಿ ಉಪಸಮಿತಿಯ ಉಪ ವಿಶೇಷಾಧಿಕಾರಿ ಬಿ.ಕೆ.ಎಸ್.ವರ್ಧನ್, ಸಾಹಿತಿ ಜಯಂತ ಕಾಯ್ಕಿಣಿ ಜತೆ ಮಾತನಾಡಿದ ಕ್ಷಣ. ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಮಲ್ಲಿಕಾ ಘಂಟಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ, ಸಮಿತಿಯ ಉಪಾಧ್ಯಕ್ಷೆ ರತ್ನಾ ಅರಸ್, ಕಾರ್ಯಾಧ್ಯಕ್ಷೆ ಲೋಲಾಕ್ಷಿ ಇದ್ದಾರೆ.
ಮೈಸೂರಿನಲ್ಲಿ ಜಗನ್ಮೋಹನ ಅರಮನೆಯಲ್ಲಿ ಬುಧವಾರ ನಡೆದ ದಸರಾ ವಿಖ್ಯಾತ ಕವಿಗೋಷ್ಠಿಯಲ್ಲಿ ಕವಿಗೋಷ್ಠಿ ಉಪಸಮಿತಿಯ ಉಪ ವಿಶೇಷಾಧಿಕಾರಿ ಬಿ.ಕೆ.ಎಸ್.ವರ್ಧನ್, ಸಾಹಿತಿ ಜಯಂತ ಕಾಯ್ಕಿಣಿ ಜತೆ ಮಾತನಾಡಿದ ಕ್ಷಣ. ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಮಲ್ಲಿಕಾ ಘಂಟಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ, ಸಮಿತಿಯ ಉಪಾಧ್ಯಕ್ಷೆ ರತ್ನಾ ಅರಸ್, ಕಾರ್ಯಾಧ್ಯಕ್ಷೆ ಲೋಲಾಕ್ಷಿ ಇದ್ದಾರೆ.   

ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಜಗನ್ಮೋಹನ ಅರಮನೆಯಲ್ಲಿ ಬುಧವಾರ ನಡೆದ ವಿಖ್ಯಾತ ಕವಿಗೋಷ್ಠಿಯಲ್ಲಿ ವೈವಿಧ್ಯಮಯ ವಿಷಯಗಳು ಕವಿಗಳ ಕವನಗಳಿಗೆ ವಸ್ತುವಾದವು.

ಪ್ರಸಕ್ತ ವಿದ್ಯಮಾನಗಳಿಗೆ ತೀಷ್ಣವಾಗಿ ಪ್ರತಿಕ್ರಿಯಿಸುವ ಮೂಲಕ ಆಳುವ ವ್ಯವಸ್ಥೆಗೆ ಚಾಟಿ ಬೀಸುವಂತಹ ಕವನಗಳು ಕೇಳಿ ಬಂದವು. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ, ರೈತರ ಆತ್ಮಹತ್ಯೆಗಳು, ಪ್ರಕೃತಿ, ಸ್ತ್ರೀ ಶೋಷಣೆ, ವಿಫಲ ಪ್ರೇಮ ವಿಷಯಗಳೇ ಪ್ರಧಾನವಾಗಿ ಗೋಚರಿಸಿದವು. ಇದರ ಜತೆಗೆ, ಜಾಳುಜಾಳಾದ, ತೀರಾ ವಾಚ್ಯ ಎನಿಸುವ ಕವನಗಳೂ ಮಂಡಿತವಾದವು.

ರೋಷನ್ ಚೋಪ್ರಾ ಅವರು ವಾಚಿಸಿದ ‘ರಸಿಕ ರಕ್ಕಸನ ರಾಜಕುಮಾರಿ‘ ಕವನಕ್ಕೆ ಪ್ರೇಕ್ಷಕರಿಂದ ಭಾರಿ ಕರತಾಡನ ವ್ಯಕ್ತವಾಯಿತು. ಸ್ತ್ರೀ ಶೋಷಣೆಯನ್ನು ಪ್ರತಿ ಸಾಲುಗಳಲ್ಲೂ ಹಿಡಿದಿಡುವ ಪ್ರಯತ್ನ ಅವರದ್ದಾಗಿತ್ತು. ಗೃಹಿಣಿಯೊಬ್ಬಳು ಅನುಭವಿಸುವ ಅಪಮಾನ, ಹಿಂಸೆ, ಶೋಷಣೆಗಳು ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಡುವಲ್ಲಿ ಕವನ ಸಫಲವಾಯಿತು.

ADVERTISEMENT

‘ಅಂಗೈಯಲ್ಲಿ ಸುಟ್ಟ ಗಾಯಗಳ ಬಚ್ಚಿಟ್ಟು’, ‘ಅವನು ತಂದ ಹಣದಲ್ಲಿ ಪಾತ್ರೆಗಳು ಮಾತನಾಡುತ್ತಿತ್ತು’ ಎನ್ನುವಂತಹ ಧ್ವನ್ಯಾತ್ಮಕವಾದ ಸಾಲುಗಳೂ ಅವರ ಕವನದಲ್ಲಿತ್ತು. ಕವನದ ಕೊನೆಗೆ ‘ನನಗೀಗ ಅರಿವಾಗಿದೆ ನಾನು ಹೆಂಡತಿ ಅಲ್ಲ, ಗಂಡು ಮೃಗಕ್ಕೆ ಹರಿಣಿ, ಸಮಾಜಕ್ಕೆ ಗೃಹಿಣಿ’ ಎನ್ನುವ ಸಾಲುಗಳು ಕೇಳುಗರಿಂದ ಮೆಚ್ಚುಗೆಗೆ ಪಾತ್ರವಾದವು.

ಗೌರಿ ಹತ್ಯೆಗೆ ಪ್ರತಿಕ್ರಿಯೆ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಹಲವು ಮಂದಿ ತಮ್ಮ ಕವನಗಳ ಮೂಲಕ ಕಟು ಶಬ್ದಗಳಲ್ಲಿ ಖಂಡಿಸಿದರು. ಕವಿತಾ ರೈ ಅವರು ವಾಚಿಸಿದ ‘ಬಾ ಗೌರಿ ಚಂಡಿಕೆ’ ಕವನವು ಹತ್ಯಾ ಪ್ರಕರಣವನ್ನು ನೇರವಾಗಿ ಪ್ರಸ್ತಾಪಿಸಿ ಕೊಲೆಗಡುಕರನ್ನು ತರಾಟೆಗೆ ತೆಗೆದುಕೊಂಡಿತು. ‘ಹಿಂಸಕನೆಂದರೆ ಸರ್ಕಾರ, ಸರ್ವಾಧಿಕಾರಕ್ಕೆ ಧಿಕ್ಕಾರ ಧಿಕ್ಕಾರ’ ಎನ್ನುವ ಸಾಲುಗಳು ವ್ಯವಸ್ಥೆಗೆ ವಿರುದ್ಧವಾಗಿ ಮೂಡಿ ಬಂದರೆ, ‘ಯಾರು ಹಿಂದೂ, ಹೇಗೆ ಹಿಂದೂ ಎಂದು ನೀನು ಕೇಳಿದೆ’ ಎಂದು ಗೌರಿ ಕುರಿತು ಹೇಳಿದ ಸಾಲುಗಳು ಚಿಂತನೆಗೆ ಹಚ್ಚಿದವು. ‘ಗುಂಡಿಟ್ಟು ನಿನ್ನ ನೆಲಕ್ಕೆ ಕೆಡವಿದರು’ ಎಂಬ ಎಂಬ ಸಾಲುಗಳು ಕವನದಲ್ಲಿದ್ದರೂ ಕೊನೆಗೆ ‘ಕೊಂದವರ ಮಗಳಾಗಿ ಹುಟ್ಟಿ ಬಾ’, ‘ಲೇಖನದ ರಕ್ಷಣೆಯ ಮಗಳಾಗಿ ಹುಟ್ಟಿ ಬಾ’ ಎನ್ನುವ ಸಾಲುಗಳು ಕವನಕ್ಕೆ ಹೊಸ ತಿರುವು ನೀಡಿದವು.

ಕಾ.ರಾಮೇಶ್ವರಪ್ಪ ವಾಚಿಸಿದ ‘ಹತ್ಯೆಗಳು ಮತ್ತು ಸತ್ತೆಗಳೂ...’ ಕವನವೂ ಇದೇ ಸ್ವರೂಪದಲ್ಲಿತ್ತು. ‘ಬಂದೂಕಿನ ಗುಂಡುಗಳು, ಆಸ್ಫೋಟಕ ಅಣುಬಾಂಬುಗಳು, ಬೆದರಿಕೆ ಭಯೋತ್ಪಾದನೆಗಳು ದಮನಿಸಲು ಸಾಧ್ಯವೇ ವಿಚಾರಗಳ’ ಎನ್ನುವ ಸಾಲುಗಳು ಕುತೂಹಲ ಕೆರಳಿಸಿದವು. ಕೊನೆಗೆ ‘ಕಟ್ಟಲು ಸಾಧ್ಯವೇ ಹತ್ಯೆಗಳಿಂದ ಸತ್ತೆಗಳ!?’ ಎನ್ನುವ ಸಾಲು ಇಡೀ ಕವನಕ್ಕೆ ವಿಶೇಷವಾದ ಧ್ವನಿಯೊಂದನ್ನು ನೀಡಿತು.

ಬಂಜಗೆರೆ ಜಯಪ್ರಕಾಶ್ ಕವನ ಸಹ ಈ ನಿಟ್ಟಿನಲ್ಲಿ ಸಾಕಷ್ಟು ಗಮನ ಸೆಳೆಯಿತು. ‘ಘಾತುಕರೇ ದೊಣ್ಣೆನಾಯಕರು’, ‘ತೊಳೆಯಬೇಕಾದ್ದು ದೇವಾಲಯ ಮಾತ್ರವಲ್ಲ ಶೌಚಾಲಯ ಕೂಡ’, ‘ನೆತ್ತರೆ ಮಳೆಯಾಗ ಬಯಸುವವರು’ ಎನ್ನುವ ಸಾಲುಗಳು ವಿಶಿಷ್ಟವಾಗಿ ಕೇಳಿ ಬಂದವು.

ಸಮಕಾಲೀನಕ್ಕೆ ಪ್ರತಿಕ್ರಿಯೆ: ಸಿಂಧೂ ಚಂದ್ರ ಹೆಗಡೆ ಅವರ ‘ಶ್ರಾವಣದ ರಾತ್ರಿ’ ಪದ್ಯ ಸಮಕಾಲೀನ ಸ್ಥಿತ್ಯಂತರಗಳಿಗೆ ಕನ್ನಡಿ ಹಿಡಿಯಿತು. ‘ಅಡಿಕೆಯ ಬದಲು ಪ್ಯಾಕೆಟ್ ಇಟ್ಟಿರಾ’, ‘ಯೂಟ್ಯೂಬ್‌ನಲ್ಲಿ ಕಲಿತರಂತೆ ದೇವರಿಗೆ ಸೀರೆಯುಡಿಸುವುದನ್ನು’ ಎನ್ನುವ ಸಾಲುಗಳು ಬದಲಾಗುತ್ತಿರುವ ಹಬ್ಬಗಳ ಆಚರಣೆಗಳನ್ನು ಧ್ವನಿಸಿದವು. ‘ಬಿಚ್ಚಿಟ್ಟ ಜೀನ್ಸ್ ನ ಜಿಪ್ ಚುಚ್ಚಿ ಎಚ್ಚರವಾಯ್ತು’ ಸಾಲುಗಳು ಚಿಂತನೆಗೆ ಹಚ್ಚಿದವು.

ಡಾ.ವೈ.ಡಿ.ರಾಜಣ್ಣ ಅವರ ‘ಮಹಾಮನೆ ಕವನ’ ಸಮಕಾಲೀನ ರಾಜಕೀಯದ ಸ್ಥಿತಿಗತಿಗಳನ್ನು ಧ್ವನಿಸಿತು. ‘ಭಾಗ್ಯದ ಹೆಸರಿನಲ್ಲಿ ಬಂಧಿಯಾದ ಮಂದಿ’ ಎನ್ನುವ ಸಾಲು ಕವನಕ್ಕೆ ಮೆರುಗು ತಂದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.