ADVERTISEMENT

‘ಹಿಂದಿ ಹೇರಿಕೆ: ಗೋಕಾಕ್ ಮಾದರಿ ಹೋರಾಟ’

​ಪ್ರಜಾವಾಣಿ ವಾರ್ತೆ
Published 28 ಜೂನ್ 2017, 9:02 IST
Last Updated 28 ಜೂನ್ 2017, 9:02 IST

ಮೈಸೂರು: ಕನ್ನಡ ಭಾಷೆಗೆ ಧಕ್ಕೆ ಉಂಟಾದರೆ ಗೋಕಾಕ್ ಚಳವಳಿ ಮಾದರಿಯಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಸಾಹಿತಿ ಕುಂ.ವೀರಭದ್ರಪ್ಪ ಇಲ್ಲಿ ಮಂಗಳವಾರ ಎಚ್ಚರಿಸಿದರು. ಸಂವಹನ ಪ್ರಕಾಶನ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಪ್ರೊ.ಮಲೆಯೂರು ಗುರುಸ್ವಾಮಿ ಅವರ ‘ಕಪಿಲೆ ಹರಿದಳು ಕಡಲಿಗೆ’ ಹಾಗೂ ‘ಚರಿತ್ರೆಯ ಪುಟಕ್ಕೆ ಒಂದು ಟಿಪ್ಪಣಿ’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರವು ದಕ್ಷಿಣ ಭಾರತೀಯರ ಮೇಲೆ ಹಿಂದಿಯನ್ನು ಹೇರಲು ಹೊರಟಿರುವುದು ಅಕ್ಷಮ್ಯ. ಹಿಂದಿ ದಬ್ಬಾಳಿಕೆಯನ್ನು ಸಹಿಸಲು ಅಸಾಧ್ಯ. ಎಲ್ಲ ಭಾಷೆಗಳನ್ನು ಪೋಷಿಸುವ ಶಕ್ತಿ ಕನ್ನಡಕ್ಕಿದೆ. ಆದರೆ, ಹಿಂದಿಯನ್ನು ಕಲಿಯಲೇಬೇಕು ಎಂದು ದಬ್ಬಾಳಿಕೆ ಮಾಡಿದರೆ ಕನ್ನಡಕ್ಕೆ ಧಕ್ಕೆಯಾಗುತ್ತದೆ. ಅಂತಹ ಪರಿಸ್ಥಿತಿ ಬಂದಲ್ಲಿ ಗೋಕಾಕ್‌ ಚಳವಳಿ ಮಾದರಿಯಲ್ಲಿ ಮತ್ತೊಂದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ’ ಎಂದರು.

‘ಭಾರತ ಎಂದರೆ ಪ್ರಧಾನಿ ನರೇಂದ್ರ ಮೋದಿಯೂ ಅಲ್ಲ, ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅಲ್ಲ, ಸಂಸದ ಪ್ರತಾಪ ಸಿಂಹ ಸಹ ಅಲ್ಲ. ಇಲ್ಲಿ ಜನಸಾಮಾನ್ಯರೇ ಪ್ರಭುಗಳು. ಬಹುತ್ವಕ್ಕೆ ಹೆಸರಾಗಿರುವ ಭಾರತದಲ್ಲಿ 500 ಭಾಷೆಗಳಿವೆ. ಅವೆಲ್ಲವೂ ಶ್ರೇಷ್ಠವೇ. ದಕ್ಷಿಣ ಭಾರತೀಯರ ಮೇಲೆ ಹಿಂದಿಯನ್ನು ಹೇರಲು ಹೊರಟರೆ ಕೇಂದ್ರ ಸರ್ಕಾರವು ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ’ ಎಂದರು.

ADVERTISEMENT

‘ಆ ಮಾಂಸವನ್ನು ತಿನ್ನಬೇಡಿ, ಆ ವಸ್ತ್ರ ಧರಿಸಬೇಡಿ ಎಂದು ಯಾರೂ ಯಾರಿಗೂ ಹೇಳಬಾರದು. ಸ್ವತಂತ್ರ ಭಾರತದಲ್ಲಿ ಊಟ–ವಸ್ತ್ರ ಜನರಿಚ್ಛೆ. ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ’ ಎಂದರು.

ಮೌಲ್ಯಗಳು ಉಳಿಯಲಿ: ಕೌಟುಂಬಿಕ ಮೌಲ್ಯಗಳನ್ನು ಪೋಷಿಸುವ ಪ್ರವೃತ್ತಿ ಸಮಾಜದಲ್ಲಿ ಹೆಚ್ಚಬೇಕು. ಈಚಿನ ದಿನಗಳಲ್ಲಿ ಮೌಲ್ಯಗಳು ಕುಸಿಯುತ್ತಿವೆ. ಹಿಂದೆ ಹೀಗಿರಲಿಲ್ಲ. ನನ್ನ ತಂದೆಗೆ ಇಬ್ಬರು ಪತ್ನಿಯರು. ಎಲ್ಲರೂ ಅನ್ಯೋನ್ಯವಾಗಿಯೇ ಇದ್ದರು. ‘ನಾನು ಮುಡಿದ ಮಲ್ಲಿಗೆ ಹೂವು ಆಕೆಯೂ ಮುಡಿಯಲಿ’ ಎಂದು ನನ್ನ ತಾಯಿ ಭಾವಿಸಿದ್ದರು. ಅಂತೆಯೇ ಬದುಕಿದ್ದರು. ಇದು ಕೌಟುಂಬಿಕ ಮೌಲ್ಯಕ್ಕೆ ಇದ್ದ ಸಾಕ್ಷಿ. ನನ್ನ ತಂದೆಯೂ ಎಲ್ಲರನ್ನೂ ಸಮಾನರನ್ನಾಗಿಯೇ ಕಾಣುತ್ತಿದ್ದರು ಎಂದು ಉದಾಹರಿಸಿದರು.

ಕರ್ನಾಟಕ ಸಂಸ್ಕೃತ ವಿ.ವಿ ಕುಲಪತಿ ಡಾ.ಪದ್ಮಾಶೇಖರ್‌ ಅಧ್ಯಕ್ಷತೆ ವಹಿಸಿದ್ದರು. ಕೃತಿಗಳ ಕುರಿತು ಮಹೇಶ್‌ ಹರವೆ ಮಾತನಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಅತಿಥಿಯಾಗಿದ್ದರು. ಸಂವಹನ ಪ್ರಕಾಶನದ ಮಾಲೀಕ ಡಿ.ಎನ್‌.ಲೋಕಪ್ಪ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.