ಮೈಸೂರು: ಕನ್ನಡ ಸಾರಸ್ವತಲೋಕಕ್ಕೆ ಡಾ.ಸಿಪಿಕೆ ಅವರ ಕೊಡುಗೆ ಅಪಾರ. ಬಿಡುವಿಲ್ಲದೆ ಎಲ್ಲ ಕವಿಗಳ, ಲೇಖಕರ ಕಾರ್ಯವನ್ನು ತಮ್ಮ ವಿಮರ್ಶೆ, ಅನುವಾದಗಳು, ಚುಟುಕುಗಳು, ಕವಿತೆಗಳ ಮೂಲಕ ಮುಂದುವರಿಸಿದರು ಎಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರೊ.ಎನ್.ಎಸ್ ತಾರಾನಾಥ್ ಅವರು ಹೇಳಿದರು.
ಜೆಎಸ್ಎಸ್ ಆಸ್ಪತ್ರೆಯ ಆವರಣದಲ್ಲಿರುವ ಡಾ.ಶಿವರಾತ್ರಿ ರಾಜೇಂದ್ರ ಭವನದಲ್ಲಿ ಸಂವಹನ ಪ್ರಕಾಶನ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಡಾ.ಸಿಪಿಕೆ ಅವರಿಗೆ ಅಭಿನಂದನೆ ಮತ್ತು ‘ಸಿಪಿಕೆ– ೭೫’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಗ್ರಂಥ ಸಂಪಾದನೆ, ಜಾನಪದ, ಸಂಶೋಧನೆಗಳಲ್ಲಿ ೫೪ ವರ್ಷಗಳ ನಿರಂತರ ಅಕ್ಷರ ಕಾಯಕವನ್ನು ಮಾಡಿದ ಅವರು ಮುಕ್ತಕಗಳಿಗೆ ಹೊಸ ಸ್ವರೂಪವನ್ನು ನೀಡಿದರು. ವಿಮರ್ಶೆಯಲ್ಲಿ ತೌಲನಿಕ, ಪ್ರಾಯೋಗಿಕ, ತಾತ್ವಿಕ ಹೀಗೆ ಎಲ್ಲ ಸ್ತರಗಳಲ್ಲೂ ಅವರ ಸೇವೆ ಮಹತ್ವವಾದುದು. ಇವರ ಕೃತಿಗಳ ಹೆಸರೇ ಆಕರ್ಷಣೀಯವಾದವು ಎಂದು ಶ್ಲಾಘಿಸಿದರು.
ಕವಿತೆಗಳಲ್ಲಿ ವಿಶೇಷ ಚಾಪು, ಮೊನಚನ್ನು ತಂದ ಅವರು, ಸುನೀತ ಪದ್ಯಗಳನ್ನೂ ಬರೆದರು. ಇವರ ‘ಸರಾಗ’ ಕವಿತೆಗಳ ಸಂಕಲನ ಗೀತಮಯ ಮತ್ತು ವಾಚನೀಯವಾಗಿದೆ. ಎಲ್ಲ ಪ್ರಕಾರಗಳನ್ನು ತಮ್ಮದೇ ಶೈಲಿಯಲ್ಲಿ ವಿಶ್ಲೇಷಿಸಿ ಸಾಧ್ಯತೆಗಳನ್ನು ಹಿಗ್ಗಿಸಿದವರೆಂದರೆ ಸಿಪಿಕೆ ಎಂದು ಅಭಿಪ್ರಾಯಪಟ್ಟರು.
‘ಸಿಪಿಕೆ– ೭೫’ ಪುಸ್ತಕ ಬಿಡುಗಡೆ ಮಾಡಿದ ಪತ್ರಕರ್ತ ರಾಜಶೇಖರ ಕೋಟಿ ಮಾತನಾಡಿ, ೧೯೯೦ರಲ್ಲಿ ಅವರಿಗೆ ೫೦ ವರ್ಷ ತುಂಬಿದಾಗ ಕುವೆಂಪು ಅವರಿಂದ ಮಳಲಿ ವಸಂತಕುಮಾರ್ ವರೆಗೆ ಎಲ್ಲರೂ ಅವರ ಕುರಿತು ಬರೆದ ಲೇಖನಗಳು ಈ ಸಂದರ್ಭದಲ್ಲಿ ಮತ್ತೆ ಬಂದಿರುವುದು ಸಂತಸದ ವಿಚಾರ. ಅವರು ಇನ್ನು ಹೆಚ್ಚು ಬರೆಯಬೇಕು ಎಂದು ಆಶಿಸಿದರು.
ಡಾ.ಸಿಪಿಕೆ ದಂಪತಿಯನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸಾಹಿತಿ ಡಾ.ದೇಜಗೌ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಪ್ರೊ.ಮಾಲತಿ ಪಟ್ಟಣಶೆಟ್ಟಿ, ಪ್ರೊ.ಮಲೆಯೂರು ಗುರುಸ್ವಾಮಿ, ಸಂವಹನ ಪ್ರಕಾಶನದ ಲೋಕಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ. ಚಂದ್ರಶೇಖರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.