ಮೈಸೂರು: ರಂಗಾಯಣ ಹಾಗೂ ಆಕಾಶವಾಣಿ ಮೈಸೂರು ಕೇಂದ್ರದ ವತಿಯಿಂದ ತಿಂಗಳ ಕೊನೆಯ ಮಂಗಳವಾರ ರಂಗಾಯಣದ ಶ್ರೀರಂಗದಲ್ಲಿ ಸಂಜೆ 6.30ಕ್ಕೆ ‘ರಂಗ ಬಾನುಲಿ’ ಕಾರ್ಯಕ್ರಮ ನಡೆಯಲಿದೆ.
1 ವರ್ಷ ನಡೆಯಲಿರುವ ಈ ಕಾರ್ಯಕ್ರಮದಲ್ಲಿ 1 ಗಂಟೆ ಕಾಲ ರಂಗ ಕಾರ್ಯಕ್ರಮ ನಡೆಯಲಿದೆ. ಮೊದಲ ಅರ್ಧ ಗಂಟೆ ನಾಟಕದ ಧ್ವನಿಮುದ್ರಣವನ್ನು ಕೇಳಿಸಿ, ಮಿಕ್ಕ ಅರ್ಧ ಗಂಟೆ ನಾಟಕವನ್ನು ಕುರಿತು ಸಂವಾದ ನಡೆಸುವುದು ಈ ಕಾರ್ಯಕ್ರಮದ ಸ್ವರೂಪ. ಧ್ವನಿ ನಾಟಕದ ಬಗ್ಗೆ ಆಸಕ್ತಿ ಮೂಡಿಸುವ ಹಾಗೂ ಉತ್ತೇಜನ ನೀಡುವ ಉದ್ದೇಶದಿಂದ ಈ ಪ್ರಯೋಗ ನಡೆದಿದೆ ಎಂದು ರಂಗಾಯಣದ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೊದಲ ಕಾರ್ಯಕ್ರಮವು ಆ. 28ರಂದು ಸಂಜೆ 6.30ಕ್ಕೆ ನಡೆಯಲಿದ್ದು, ರಂಗಕರ್ಮಿ ರಾಮೇಶ್ವರಿ ವರ್ಮ ಉದ್ಘಾಟಿಸುವರು. ರಂಗಾಯಣ ನಿರ್ದೇಶಕಿ ಭಾಗೀರತಿ ಬಾಯಿ ಕದಂ, ಆಕಾಶವಾಣಿ ಕಾರ್ಯಕ್ರಮ ಸಹಾಯಕ ನಿರ್ದೇಶಕ ಎಚ್.ಶ್ರೀನಿವಾಸ್, ಹಿರಿಯ ಕಾರ್ಯಕ್ರಮ ಉದ್ಘೋಷಕ ಪ್ರಭುಸ್ವಾಮಿ ಮಳಿಮಠ್ ಭಾಗವಹಿಸುವರು. ಮೊದಲ ನಾಟಕವಾಗಿ ಒ ಹೆನ್ರಿ ರಚನೆಯ ‘20 ವರ್ಷಗಳ ನಂತರ’ ನಾಟಕವನ್ನು ಕೇಳಿಸಲಾಗುವುದು ಎಂದರು.
ಕೊನೆಯ ಶನಿವಾರ ಪ್ರಸಾರ: ಈ ಕಾರ್ಯಕ್ರಮದ ಧ್ವನಿ ಮುದ್ರಣ ಮಾಡಿಕೊಳ್ಳಲಿರುವ ಆಕಾಶವಾಣಿಯು ಪ್ರತಿ ತಿಂಗಳ ಕೊನೆಯ ಶನಿವಾರ ಸಂಜೆ 4ರಿಂದ 5ರವರೆಗೆ ಕಾರ್ಯಕ್ರಮ ಪ್ರಸಾರ ಮಾಡುವುದು. ಕಾರ್ಯಕ್ರಮವು ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ಪ್ರಸಾರವಾಗುವುದು ಎಂದು ಆಕಾಶವಾಣಿ ಹಿರಿಯ ಕಾರ್ಯಕ್ರಮ ಉದ್ಘೋಷಕ ಪ್ರಭುಸ್ವಾಮಿ ಮಳಿಮಠ್ ತಿಳಿಸಿದರು.
ಕಾರ್ಯಕ್ರಮದ ಮೊದಲ ಐದು ನಿಮಿಷ ಧ್ವನಿ, ಭಾಷೆ, ಉಚ್ಛಾರಣೆ ಮುಂತಾದ ವಿಚಾರಗಳ ಬಗ್ಗೆ ಉಪನ್ಯಾಸ ಇರುವುದು. ಇದಕ್ಕಾಗಿ ಪತ್ರಿಕೋದ್ಯಮ ಹಾಗೂ ಲಲಿತಕಲಾ ವಿದ್ಯಾರ್ಥಿಗಳನ್ನು ಆಹ್ವಾನಿಸಿ ಪ್ರಶ್ನೋತ್ತರಕ್ಕೆ ಅವಕಾಶ ನೀಡಲಾಗುವುದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.