ಮೈಸೂರು: ‘ಇಲ್ಲಿನ ಕುವೆಂಪುನಗರದ ಅಪೋಲೊ ಬಿಜಿಎಸ್ ಆಸ್ಪತ್ರೆಯಲ್ಲಿ 100 ಲಿವರ್ (ಯಕೃತ್ತು) ಕಸಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಮಹತ್ವದ ಸಾಧನೆ ಮಾಡಲಾಗಿದೆ’ ಎಂದು ಆಸ್ಪತ್ರೆಯ ಉಪಾಧ್ಯಕ್ಷ ಹಾಗೂ ಘಟಕದ ಮುಖ್ಯಸ್ಥ ಎನ್.ಜಿ. ಭರತೀಶ ರೆಡ್ಡಿ ತಿಳಿಸಿದರು.
ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಭಾಗದ ಏಕೈಕ ಬಹು ಅಂಗಾಂಗ ಕಸಿ ಕೇಂದ್ರ ನಮ್ಮದಾಗಿದೆ’ ಎಂದರು.
‘ಆಸ್ಪತ್ರೆಗೆ 2003ರಲ್ಲಿ ಮೂತ್ರಪಿಂಡ ಕಸಿ ಪರವಾನಗಿ, 2017ರಲ್ಲಿ ಲಿವರ್ ಕಸಿಗೆ ಪರವಾನಗಿ ದೊರೆತಿದೆ. 2020ರಲ್ಲಿ ಬಹು ಅಂಗಾಂಗ ಜೋಡಣೆಗೆ ಪರವಾನಗಿ ಸಿಕ್ಕಿದೆ. ಯಶಸ್ವಿ ಶಸ್ತ್ರಚಿಕಿತ್ಸೆಗೆ ಆಸ್ಪತ್ರೆಯ ತಜ್ಞ ಶಸ್ತ್ರಚಿಕಿತ್ಸಕರು, ಕಸಿ ತಜ್ಞರು, ಅರಿವಳಿಕೆ ತಜ್ಞರು, ತೀವ್ರ ಚಿಕಿತ್ಸಾ ತಜ್ಞರು ಮತ್ತು ವೈದ್ಯರನ್ನು ಒಳಗೊಂಡಿರುವ ಶಸ್ತ್ರಚಿಕಿತ್ಸರ ತಂಡ ಕಾರಣ’ ಎಂದು ಹೇಳಿದರು.
‘ಕಸಿ ಶಸ್ತ್ರಚಿಕಿತ್ಸೆಯ ನಂತರದ ಆರೈಕೆಗೆ ಐಸಿಯು ಮತ್ತು ಶಸ್ತ್ರಚಿಕಿತ್ಸಾಲಯವನ್ನು ಹೊಂದಿದ್ದೇವೆ. ಈ ಪರಿಣಾಮ ನಮ್ಮ ಆಸ್ಪತ್ರೆಯು ಅಂಗ ಕಸಿಗೆ ಮೊದಲ ಆಯ್ಕೆಯಾಗಿ ಪರಿಗಣಿತವಾಗಿದೆ. ಲಿವರ್ ಕಸಿಗೆ ಒಳಗಾದವರು ಆರೋಗ್ಯದಿಂದಿದ್ದಾರೆ. ಒಬ್ಬ ಬಾಲಕನಿಗೂ ಲಿವರ್ ಕಸಿ ಮಾಡಲಾಗಿದೆ. ಪುತ್ರಿಯೇ ತಂದೆಗೆ ಲಿವರ್ ನೀಡಿ ಮರುಜನ್ಮ ನೀಡಿದ್ದಾರೆ’ ಎಂದು ಹೇಳಿದರು.
‘ಅಂಗಾಂಗ ದಾನದ ಬಗ್ಗೆ ಸಮಾಜದಲ್ಲಿ ಜಾಗೃತಿ ಹೆಚ್ಚಾಗಬೇಕಾಗಿದೆ. ಅಂಗಾಂಗ ದಾನದಿಂದ ಇತರರ ಬಾಳಿಗೆ ಬೆಳಕಾಗಬಹುದು’ ಎಂದರು.
ಮುಖ್ಯ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ.ರಾಜಕುಮಾರ್ ಪಿ.ವಾಧ್ವಾ ಮಾತನಾಡಿ, ‘ಅಂಗಾಂಗ ಕಸಿ ಸುಲಭದ ಕೆಲಸವಲ್ಲ. ಅದಕ್ಕೆ ಸಾಕಷ್ಟು ತಯಾರಿ, ಸೌಲಭ್ಯ ಬೇಕಾಗುತ್ತದೆ. ಜೀವನಶೈಲಿ ಬದಲಾವಣೆಯಿಂದ ಲಿವರ್ ಸಂಬಂಧಿ ರೋಗಗಳು ಜಾಸ್ತಿಯಾಗುತ್ತಿವೆ’ ಎಂದು ತಿಳಿಸಿದರು.
ಪೀಡಿಯಾಟ್ರಿಕ್ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ.ಆಥಿರಾ ರವೀಂದ್ರನಾಥ್, ‘ಮಕ್ಕಳಲ್ಲೂ ಲಿವರ್ ಸಮಸ್ಯೆ ಕಂಡುಬರುತ್ತಿದೆ. ಆರಂಭಿಕ ಹಂತದಲ್ಲೇ ಗುರುತಿಸಿ ಚಿಕಿತ್ಸೆ ಪಡೆದುಕೊಂಡರೆ ಗುಣಮುಖರನ್ನಾಗಿ ಮಾಡಬಹುದು’ ಎಂದು ಹೇಳಿದರು.
ಲಿವರ್ ಕಸಿಗೆ ಒಳಗಾದವರು ಅನಿಸಿಕೆ ಹಂಚಿಕೊಂಡರು. ಸೀನಿಯರ್ ಕನ್ಸಲ್ಟೆಂಟ್‌ಗಳಾದ ಡಾ.ಸಂಜಯ್ ಗೋವಿಲ್, ಡಾ.ಸಂದೀಪ್ ಸತ್ಸಂಗಿ, ಅಸೋಸಿಯೇಟ್ ಕನ್ಸಲ್ಟೆಂಟ್ ಡಾ.ಸಾಗರ್ ನಾರಾಯಣ್, ಡಾ.ಜಯಂತ್ ರೆಡ್ಡಿ, ಸಂಯೋಜಕಿ ಡಾ.ಸುಧಾ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.