ಮೈಸೂರು: ಇಲ್ಲಿನ ರಂಗಾಯಣವು ಸಿದ್ಧಪಡಿಸಿದ ‘ಚೆಕ್‌ಮೇಟ್’ ನಾಟಕದ 100ನೇ ಪ್ರದರ್ಶನ ನ.17ರಂದು ಸಂಜೆ 6.30ಕ್ಕೆ ನಡೆಯಲಿದೆ.
‘ನ.10, 17 ಹಾಗೂ 27ರಂದು ಪ್ರದರ್ಶನ ಆಯೋಜಿಸಲಾಗಿದೆ. 17ರಂದು ಶತಕದ ಸಂಭ್ರಮವನ್ನು ಕಾಣಲಿದೆ’ ಎಂದು ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಈ ನಾಟಕದ ಮೊದಲ ಪ್ರದರ್ಶನ 2007ರಲ್ಲಿ ನಡೆದಿತ್ತು. ಇದು ರಂಗಾಯಣ ರೆಪರ್ಟರಿ ತಂಡದ ಅತ್ಯಂತ ಯಶಸ್ವಿ ಹಾಗೂ ಜನಪ್ರಿಯ ನಾಟಕವೂ ಆಗಿದೆ. ಎಲ್ಲ ಪ್ರಾಕಾರಗಳನ್ನೂ ಪ್ರಯೋಗಿಸುವ ಸಾಹಸವನ್ನು ರಂಗಾಯಣವು ಮಾಡುತ್ತಲೇ ಇರಬೇಕು ಎಂಬ ರಂಗಭೀಷ್ಮ ಬಿ.ವಿ. ಕಾರಂತರ ಆಶಯದಂತೆ ಈ ಪತ್ತೇದಾರಿ ಪ್ರಾಕಾರದ ನಾಟಕವನ್ನು ಸಿದ್ಧಪಡಿಸಲಾಯಿತು’ ಎಂದು ಹೇಳಿದರು.
‘ಭೂಪಾಲ್ ರಂಗಮಂಡಲದಲ್ಲಿ ಬಿ.ವಿ.ಕಾರಂತರ ಜೊತೆ ಕಲಾವಿದರಾಗಿ ಕೆಲಸ ಮಾಡಿದ್ದ ಅನೂಪ್ ಜೋಶಿ (ಬಂಟಿ) ನಿರ್ದೇಶಿಸಿದ್ದಾರೆ. ಎಲ್ಲ ದೃಶ್ಯಗಳನ್ನೂ ನಟರ ಅಭಿನಯ ಮತ್ತು ವಾಚಿಕದಿಂದಲೇ ಕಟ್ಟಿಕೊಟ್ಟಿರುವುದು ವಿಶೇಷ. ಎಚ್.ಕೆ. ದ್ವಾರಕನಾಥ್ ವಿನ್ಯಾಸ ಮಾಡಿದ್ದಾರೆ. ಸಂಗೀತ ನೀಡಿದ್ದ ಶ್ರೀನಿವಾಸ ಭಟ್ (ಚೀನಿ) ಅವರನ್ನು ನಾವು ನೆನೆಯುತ್ತೇವೆ. ಆರಂಭದಲ್ಲಿ ಬೆಳಕಿನ ವಿನ್ಯಾಸವನ್ನು ಸಗಾಯ್‌ರಾಜು ಮಾಡಿದ್ದರು. ಪ್ರಸ್ತುತ ಮಹೇಶ್ ಕಲ್ಲತ್ತಿ ನಿರ್ವಹಿಸಲಿದ್ದಾರೆ. ರಂಗಾಯಣದ ಹಿರಿಯ ಕಲಾವಿದರಾದ ಪ್ರಶಾಂತ್ ಹಿರೇಮಠ, ಗೀತಾ ಎಂ.ಎಸ್. ಹಾಗೂ ಹುಲಗಪ್ಪ ಕಟ್ಟೀಮನಿ ಅಭಿನಯಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.
‘ಮೋಸ, ವಂಚನೆ, ಕೊಲೆ ಹಾಗೂ ಅದರ ಸಮರ್ಥ ಪೊಲೀಸ್ ತನಿಖೆಯ ಕಥಾನಕವೇ ಈ ನಾಟಕದ ವಿಷಯವಾಗಿದೆ’ ಎಂದು ಹೇಳಿದರು.
‘ನಾನು ರಂಗಾಯಣದಿಂದ ನಿವೃತ್ತಿಯಾಗಿ ಹೋದ ನಂತರ ಇಲ್ಲಿಗೆ ಮರಳಿ ಅಭಿನಿಯಿಸುತ್ತಿರುವುದು ಇದೇ ಮೊದಲನೆಯದಾಗಿದೆ. ಚೆಕ್‌ಮೇಟ್ ನಾಟಕದ ನೂರನೇ ಪ್ರದರ್ಶನದಲ್ಲೂ ಭಾಗಿಯಾಗುತ್ತಿರುವುದು ಭಾವನಾತ್ಮಕ ಹಾಗೂ ವಿಶೇಷ ಕ್ಷಣವಾಗಿದೆ. ಇದೊಂದು ಕೆಟ್ಟ ವಾಣಿಜ್ಯ ನಾಟಕ’ ಎಂದು ಕಲಾವಿದ ಹುಲಗಪ್ಪ ಕಟ್ಟೀಮನಿ ಹೇಳಿದರು.
ರಂಗಾಯಣದ ಉಪ ನಿರ್ದೇಶಕ ಎಂ.ಡಿ. ಸುದರ್ಶನ್, ಕಲಾವಿದರಾದ ಹುಲಗಪ್ಪ ಕಟ್ಟಿಮನಿ, ಪ್ರಶಾಂತ್ ಹಿರೇಮಠ, ಎಂ.ಎಸ್. ಗೀತಾ, ಕೆ.ಆರ್. ನಂದಿನಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.