ADVERTISEMENT

ಮೈಸೂರು: ಕೊರೊನಾ ವೈರಸ್‌ ವೇಳೆಯಲ್ಲೂ 153 ಗರ್ಭಿಣಿಯರಿಗೆ ಯಶ‌ಸ್ವಿ ಹೆರಿಗೆ

ಜಿಲ್ಲಾ ಕೋವಿಡ್‌ ಹೆರಿಗೆ ಆಸ್ಪತ್ರೆಯಲ್ಲಿ ಎರಡೂವರೆ ತಿಂಗಳಲ್ಲಿ 225 ಸೋಂಕಿತರಿಗೆ ಚಿಕಿತ್ಸೆ

ಕೆ.ಓಂಕಾರ ಮೂರ್ತಿ
Published 2 ಸೆಪ್ಟೆಂಬರ್ 2020, 7:18 IST
Last Updated 2 ಸೆಪ್ಟೆಂಬರ್ 2020, 7:18 IST
ಕೋವಿಡ್‌ ಹೆರಿಗೆ ಆಸ್ಪತ್ರೆ ಸಿಬ್ಬಂದಿ
ಕೋವಿಡ್‌ ಹೆರಿಗೆ ಆಸ್ಪತ್ರೆ ಸಿಬ್ಬಂದಿ   

ಮೈಸೂರು: ‘ಕೊರೊನಾ ಸೋಂಕು ಇರುವುದು ಗೊತ್ತಾದಾಗ ಭಯವಾಯಿತು. ನನ್ನ ಜೀವಕ್ಕಿಂತ ಹೊಟ್ಟೆ ಒಳಗಿದ್ದ ಕಂದನದ್ದೇ ಚಿಂತೆ ಆಗಿತ್ತು. ಜಗತ್ತನ್ನು ಕಾಣದ ಮಗು ನೆನೆದು ಹಲವು ಬಾರಿ ಅತ್ತಿದ್ದೆ. ದೇವರಲ್ಲಿ ಪ್ರಾರ್ಥಿಸುತ್ತಿದ್ದೆ. ಕೊನೆಗೆ ನಿಟ್ಟುಸಿರು ಬಿಟ್ಟೆ. ಮಗುವಿನ ಜೊತೆ ಈಗ ಖುಷಿಯಿಂದ ಇದ್ದೇನೆ...’

–ಹೀಗೆಂದು ಹೇಳಿದ್ದು, ಕೋವಿಡ್‌–19ಗೆ ಒಳಗಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿರುವ ಮಹಿಳೆ ಶರಣ್ಯಾ (ಮನವಿ ಮೇರೆಗೆ ಹೆಸರು ಬದಲಾಯಿಸಲಾಗಿದೆ).

ರಾಮಕೃಷ್ಣನಗರದ ಇವರು ಜಿಲ್ಲಾ ಕೋವಿಡ್‌ ಹೆರಿಗೆ ಆಸ್ಪತ್ರೆಯಲ್ಲಿ ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮನೆಗೆ ಮರಳಿದ್ದು, ತಾಯಿ–ಮಗು ಆರೋಗ್ಯವಾಗಿದ್ದಾರೆ.

ADVERTISEMENT

ಕೊರೊನಾ ಸೋಂಕಿತರಾದ ಒಟ್ಟು 225 ಗರ್ಭಿಣಿಯರು ವಿ.ವಿ.ಪುರಂನಲ್ಲಿರುವ ಈ ಆಸ್ಪತ್ರೆಗೆ ಇದುವರೆಗೆ ದಾಖಲಾಗಿದ್ದಾರೆ. ಇವರಲ್ಲಿ 153 ಗರ್ಭಿಣಿಯರಿಗೆ ಈ ಆಸ್ಪತ್ರೆಯಲ್ಲೇ ಹೆರಿಗೆ ಮಾಡಿಸಲಾಗಿದೆ. ಚಾಮರಾಜನಗರ, ಮಂಡ್ಯ, ಕೊಡಗು ಜಿಲ್ಲೆಗಳ ಕೆಲ ಗರ್ಭಿಣಿಯರೂ ಇಲ್ಲಿ ಬಂದು ಚಿಕಿತ್ಸೆ ಪಡೆದಿದ್ದಾರೆ. ಸೋಂಕಿತ ಗರ್ಭಿಣಿಯರ ಪಟ್ಟಿಯಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪ‍ತ್ರೆ ಬಳಿಕ ಅತಿ ಹೆಚ್ಚು ಹೆರಿಗೆಯಾಗಿದ್ದು ಇಲ್ಲೇ. ಸದ್ಯ 18 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಜೂನ್‌ 20ಕ್ಕೆ ಮೊದಲ ಪ್ರಕರಣ ದಾಖಲಿಸಿಕೊಳ್ಳಲಾಯಿತು. ಅಲ್ಲಿಂದ ಇದುವರೆಗೆ ಹಗಲು– ರಾತ್ರಿ ಎನ್ನದೇ ನಮ್ಮ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸೋಂಕಿತರಲ್ಲಿ ಧೈರ್ಯ ತುಂಬಿ, ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ’ ಎಂದು ಕೋವಿಡ್‌ ಹೆರಿಗೆ ಆಸ್ಪತ್ರೆಯ ಉಸ್ತುವಾರಿ ಡಾ.ಜಿ.ಮಾಲತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆರಂಭದ ದಿನಗಳಲ್ಲಿ ಯಾವುದೇ ಖಾಸಗಿ ಆಸ್ಪತ್ರೆಗಳಲ್ಲಿ ಗರ್ಭಿಣಿಯರನ್ನು ದಾಖಲಿಸಿಕೊಳ್ಳುತ್ತಿರಲಿಲ್ಲ. ಅಂಥ ಸಂದರ್ಭದಲ್ಲಿ ನಮ್ಮಲ್ಲಿ ಸೇರಿಸಿಕೊಂಡು ಚಿಕಿತ್ಸೆ ನೀಡಿದೆವು. ಬೇರೆ ಸಮಸ್ಯೆಗಳಿಂದ ಎರಡು ಶಿಶುಗಳು ಮೃತಪಟ್ಟಿವೆ’ ಎಂದರು.

ಈ ಆಸ್ಪತ್ರೆಯಲ್ಲಿ 11 ಮಂದಿ ನರ್ಸ್‌ಗಳು, 4 ಮಂದಿ ‘ಡಿ’ ದರ್ಜೆ ನೌಕರರು ಇದ್ದಾರೆ. ವೈದ್ಯರು ಬಂದು ಹೋಗುತ್ತಿರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.