ADVERTISEMENT

2023 ಮರೆಯುವ ಮುನ್ನ | ಮೈಸೂರು: ಕ್ರೀಡಾತಾರೆಯರು ಮಿನುಗಿದ ವರುಷ..

ಮೋಹನ್‌ ಕುಮಾರ್‌ ಸಿ.
Published 31 ಡಿಸೆಂಬರ್ 2023, 6:36 IST
Last Updated 31 ಡಿಸೆಂಬರ್ 2023, 6:36 IST
ಒಡಿಶಾದ ಭುವನೇಶ್ವರದಲ್ಲಿ ನಡೆದ ರಾಷ್ಟ್ರೀಯ ಈಜು ಚಾಂಪಿಯನ್‌ಷಿ‍ಪ್‌ನಲ್ಲಿ ಚಿನ್ನ ಗೆದ್ದ ಮೈಸೂರಿನ ಎಸ್‌.ತಾನ್ಯಾ
ಒಡಿಶಾದ ಭುವನೇಶ್ವರದಲ್ಲಿ ನಡೆದ ರಾಷ್ಟ್ರೀಯ ಈಜು ಚಾಂಪಿಯನ್‌ಷಿ‍ಪ್‌ನಲ್ಲಿ ಚಿನ್ನ ಗೆದ್ದ ಮೈಸೂರಿನ ಎಸ್‌.ತಾನ್ಯಾ   

ಮೈಸೂರು: ಕ್ರೀಡಾ ಚಟುವಟಿಕೆಗಳು ವರ್ಷಾರಂಭದಿಂದಲೂ ಸಾಂಸ್ಕೃತಿಕ ನಗರಿಯಲ್ಲಿ ಮೇಳೈಸಿದವು. ಈಜಿನಲ್ಲಿ ತಾನ್ಯಾ, ಟೆನಿಸ್‌ನಲ್ಲಿ ಎಸ್‌.ಡಿ.ಪ್ರಜ್ವಲ್‌ ದೇವ್, ಕ್ರಿಕೆಟ್‌ನಲ್ಲಿ ಶುಭಾ ಸತೀಶ್ ಅಂಗಳದಲ್ಲಿ ಮಿಂಚುವ ಮೂಲಕ ದೇಶದ ಭರವಸೆಯ ಕ್ರೀಡಾತಾರೆಗಳಾಗಿ ಹೊಮ್ಮಿದರು. 

ದಸರಾ ಕ್ರೀಡಾಕೂಟ, ನಾಡಕುಸ್ತಿಯ ಜೊತೆಗೆ 8 ವರ್ಷಗಳ ಬಳಿಕ ಐಟಿಎಫ್‌– ಮೈಸೂರು ಓಪನ್‌ ಟೆನಿಸ್‌ ಟೂರ್ನಿಯು ಟೆನಿಸ್‌ ಪ್ರಿಯರನ್ನು ಅಂಗಳದತ್ತ ಕರೆತಂದಿತು.

ಮೈಸೂರಿನ ಹೊರವಲಯದ ಸಾತಗಳ್ಳಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ ಮೈದಾನವನ್ನು ನಿರ್ಮಿಸುವ ಪ್ರಕ್ರಿಯೆ ನನೆಗುದಿಗೆ ಬಿದ್ದರೂ, ವರ್ಷಾಂತ್ಯದಲ್ಲಿ ಹುಯಿಲಾಳಿನಲ್ಲಿ ಕ್ರೀಡಾಂಗಣಕ್ಕೆ ಜಾಗವನ್ನು ಗುರುತಿಸಲಾಯಿತು. ಅದಕ್ಕೆ ರೈತ ಸಂಘದಿಂದ ವಿರೋಧವೂ ವ್ಯಕ್ತವಾಯಿತು.

ADVERTISEMENT

ಗ್ರಾಮೀಣ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಜಿಲ್ಲೆಯ ಸುತ್ತೂರಿನಲ್ಲಿ ಬ್ಯಾಸ್ಕೆಟ್‌ ಬಾಲ್‌ ಅಕಾಡೆಮಿ ಸ್ಥಾಪಿಸಲಾಗುವುದು ಎಂದು ಡಿ.17ರಂದು ಭಾರತೀಯ ಬ್ಯಾಸ್ಕೆಟ್‌ ಬಾಲ್‌ ಒಕ್ಕೂಟದ ಅಧ್ಯಕ್ಷ ಕೆ.ಗೋವಿಂದರಾಜು ಭರವಸೆ ನೀಡಿದ್ದು, ಆಶಾದಾಯಕ ಬೆಳವಣಿಗೆ!

ದಸರಾ ಕ್ರೀಡಾಕೂಟ ಇದೇ ಮೊದಲ ಬಾರಿ 10 ದಿನಗಳ ಕಾಲ 2 ಹಂತದಲ್ಲಿ ನಡೆಯಿತು. ಕ್ರೀಡಾ ಹಬ್ಬದಲ್ಲಿ ರಾಜ್ಯದ 10 ಸಾವಿರ ಕ್ರೀಡಾಪಟುಗಳು 36ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಸಾಮರ್ಥ್ಯ ಪ್ರದರ್ಶಿಸಿದರು.

ಕ್ರೀಡಾಪಟುಗಳಿಲ್ಲದೇ ಉದ್ಘಾಟನೆ: ದಸರಾ ಕ್ರೀಡಾಕೂಟವು ಇದೇ ಮೊದಲ ಬಾರಿ ಯಾವೊಬ್ಬ ಕ್ರೀಡಾಪಟುವಿಲ್ಲದೇ ಜನಪ್ರತಿನಿಧಿಗಳಿಂದ ಉದ್ಘಾಟನೆಯಾಗಿದ್ದು ಬೇಸರ ಮೂಡಿಸಿತು. ಚಾಲನೆ ಸಿಕ್ಕರೂ ಯಾವ ಕ್ರೀಡೆ ಎಲ್ಲಿ ನಡೆಯುತ್ತಿದೆ ಎಂಬ ಮಾಹಿತಿಯು ಲಭ್ಯವಿಲ್ಲದ್ದರಿಂದ ಟೀಕೆಯೂ ವ್ಯಕ್ತವಾಯಿತು.   

ಜ.24: ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದ ಸಿಬಿಎಸ್‌ಇ ಈಜು ಚಾಂಪಿಯನ್‌ಷಿಪ್‌ನಲ್ಲಿ 14 ವರ್ಷದೊಳಗಿನವರ ವಿಭಾಗದಲ್ಲಿ ಮೈಸೂರಿನ ಎಸ್‌.ತಾನ್ಯಾಗೆ 4 ಚಿನ್ನ.

ಫೆ.22: ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಏರ್ಪಡಿಸಿದ್ದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ರಾಜ್ಯಮಟ್ಟದ ಅಥ್ಲೆಟಿಕ್ಸ್‌ನ ಸಮಗ್ರ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ಜಿಲ್ಲೆ ತಂಡದವರು ಗೆದ್ದರು.

ಮಾರ್ಚ್‌ 29: ಚಾಮರಾಜಪುರಂನಲ್ಲಿರುವ ಮೈಸೂರು ಟೆನಿಸ್‌ ಕ್ಲಬ್‌ (ಎಂಟಿಸಿ)ನಲ್ಲಿ ಎಂಟು ವರ್ಷಗಳ ನಂತರ ಐಟಿಎಫ್‌ ಮೈಸೂರು ಓಪನ್ ಟೆನಿಸ್‌ ಟೂರ್ನಿ ಆರಂಭವಾಯಿತು. ಮೈಸೂರಿನವರೇ ಆದ ಎಸ್‌.ಡಿ.ಪ್ರಜ್ವಲ್‌ ದೇವ್‌ ಸೆಮಿಫೈನಲ್‌ವರೆಗೂ ಲಗ್ಗೆ ಇಟ್ಟು ಮಿಂಚಿದರು.

ಏ.1: ಐಟಿಎಫ್-ಮೈಸೂರು ಓಪನ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ದೇಶದ ಮುಕುಂದ್ ಶಶಿಕುಮಾರ್-ವಿಷ್ಣುವರ್ಧನ್ ಜೋಡಿ ಪ್ರಶಸ್ತಿ ಗೆದ್ದಿತು.

ಏ.2: ಬ್ರಿಟನ್‌ನ ಜಾರ್ಜ್ ಲಾಫ್‌ಹೇಗನ್‌ ‘ಐಟಿಎಫ್- ಮೈಸೂರು ಓಪನ್’ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್‌ ಆದರು. 

ಏ.5: ಜಯಚಾಮರಾಜೇಂದ್ರ ಎಂಜಿನಿಯರಿಂಗ್‌ ಕಾಲೇಜಿನ ಕೆಎಸ್‌ಸಿಎ ಮೈದಾನದಲ್ಲಿ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯಗಳ ಮಹಿಳಾ ಕ್ರಿಕೆಟ್‌ ಟೂರ್ನಿಗೆ ಕೆಎಸ್‌ಸಿಎ ಅಧ್ಯಕ್ಷ ರೋಜರ್‌ ಬಿನ್ನಿ ಚಾಲನೆ ನೀಡಿದರು.

ಏ.11: ಟೂರ್ನಿಯಲ್ಲಿ ಪಂಜಾಬ್‌ನ ಲವ್ಲಿ ಪ್ರೊಫೆಷನಲ್‌ ವಿಶ್ವವಿದ್ಯಾಲಯ ಟ್ರೋಫಿ ಮುಡಿಗೇರಿಸಿಕೊಂಡಿತು.

ಜೂನ್‌ 2: ಬೆಂಗಳೂರಿನ ಬಸವನಗುಡಿಯಲ್ಲಿ ನಡೆದ ಈಜು ಚಾಂಪಿಯನ್‌ಷಿಪ್‌ನಲ್ಲಿ ತಾನ್ಯಾಗೆ 3 ಚಿನ್ನ, 2 ಬೆಳ್ಳಿ ಹಾಗೂ 3 ಕಂಚು.

ಜುಲೈ 2: 7ನೇ ಆವೃತ್ತಿಯ ‘ಮೈಸೂರು ಸಾಹಿತ್ಯ ಸಂಭ್ರಮ’ದಲ್ಲಿ ಖ್ಯಾತ ಕ್ರಿಕೆಟಿಗ ವಿ.ವಿ.ಎಸ್‌. ಲಕ್ಷ್ಮಣ್‌ ಪಾಲ್ಗೊಂಡು, ಕ್ರಿಕೆಟ್‌ ಜೀವನದ ನೆನಪುಗಳನ್ನು ಹಂಚಿಕೊಂಡರು.

ಆ.20: ಒಡಿಶಾದ ಭುವನೇಶ್ವರದಲ್ಲಿ ನಡೆದ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಮೈಸೂರಿನ ಎಸ್‌.ತಾನ್ಯಾಗೆ 2 ಚಿನ್ನ ಹಾಗೂ 1 ಕಂಚು.

ಸೆ.23: ಪುತ್ತೂರಿನಲ್ಲಿ ರಾಜ್ಯ ಅಥ್ಲೆಟಿಕ್ ಸಂಸ್ಥೆ ಆಯೋಜಿಸಿದ್ದ ರಾಜ್ಯ ಅಥ್ಲೆಟಿಕ್ ಕೂಟದ ಟ್ರಿಪಲ್ ಜಂಪ್‌ನಲ್ಲಿ ನಗರದ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ಎಂಬಿಎ ವಿದ್ಯಾರ್ಥಿನಿ ಪವಿತ್ರಾ ಚಿನ್ನ ಗೆದ್ದರು.

ಅ.11: ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ ‘ಸಿ.ಎಂ. ಕಪ್‌–2023’ಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ.

ಅ.14: ದಸರಾ ಸಿ.ಎಂ. ಕಪ್‌ ರಾಜ್ಯ ಮಟ್ಟದ ಪ್ರತಿಭಾನ್ವೇಷಣಾ ಕ್ರೀಡಾಕೂಟದಲ್ಲಿ ಬೆಂಗಳೂರು ನಗರ ವಿಭಾಗವು ಸಮಗ್ರ ಚಾಂಪಿಯನ್‌ಷಿಪ್‌ ತನ್ನದಾಗಿಸಿಕೊಂಡಿತು. ಬೆಳಗಾವಿ ವಿಭಾಗವು ರನ್ನರ್ ಅಪ್‌ ಆಯಿತು. ಆತಿಥೇಯ ಮೈಸೂರು ವಿಭಾಗವು 3ನೇ ಸ್ಥಾನಕ್ಕೆ ಸರಿಯಿತು.

ಅ.15: ದಸರಾ ಕುಸ್ತಿ ಪಂದ್ಯಗಳು ದೊಡ್ಡಕೆರೆ ಮೈದಾನದ ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಆರಂಭವಾದವು. 

ಅ.22: ಮುಧೋಳದ ಸುನಿಲ್‌ ಪಡತಾರೆ ಕುಸ್ತಿ ಟೂರ್ನಿಯಲ್ಲಿ ‘ದಸರಾ ಕಂಠೀರವ’ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಹಳಿಯಾಳದ ರೋಹನ್ ಗಬಾಡೆ ‘ದಸರಾ ಕೇಸರಿ’, ಸಂಜೀವ್‌ ಕೊರವರ ‘ದಸರಾ ಕಿಶೋರ’, ಲಕ್ಷ್ಮಿ ಪಾಟೀಲ ‘ದಸರಾ ಕಿಶೋರಿ’ ಪ್ರಶಸ್ತಿ ಮುಡಿಗೇರಿಸಿಕೊಂಡರು. 

ಅ.29: ಚೆನ್ನೈನ ಸತ್ಯಭಾಮಾ ವಿಶ್ವವಿದ್ಯಾಲಯ ತಂಡವು ಅಂತರರಾಜ್ಯ ಮಟ್ಟದ ‘ಚಾಲೆಂಜರ್ಸ್‌ ಕಪ್‌’ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯ ಚಾಂಪಿಯನ್‌ ಆಗಿ ಹೊರಹೊಮ್ಮಿತು.

ನ.2, 3: ರಾಜ್ಯ ಮಟ್ಟದ 44ನೇ ಅಂತರ ಪಾಲಿಟೆಕ್ನಿಕ್ ಕ್ರೀಡಾಕೂಟವು ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆರಂಭವಾಯಿತು. ಮಂಗಳೂರಿನ ಕರ್ನಾಟಕ ಸರ್ಕಾರಿ ಪಾಲಿಟೆಕ್ನಿಕ್ ತಂಡವು ‘ಸಮಗ್ರ ಚಾಂಪಿಯನ್‌’ ಪಟ್ಟ ತನ್ನದಾಗಿಸಿಕೊಂಡಿತು. ಸುಳ್ಯದ ಕೆವಿಜಿ ಪಾಲಿಟೆಕ್ನಿಕ್ ತಂಡ ರನ್ನರ್‌ ಅಪ್ ಟ್ರೋಫಿ ಪಡೆಯಿತು.

ನ.10: ಮೈಸೂರಿನ ಎಸ್‌.ಮಹದೇವು, ಫಿಲಿಪೈನ್ಸ್‌ನ ನ್ಯೂ ಕ್ಲಾಕ್‌ಸಿಟಿಯಲ್ಲಿ ನಡೆದ 22ನೇ ಏಷ್ಯನ್‌ ಮಾಸ್ಟರ್ಸ್‌ ಅಥ್ಲೆಟಿಕ್ಸ್ ಚಾಂಪಿಯನ್‌ ಷಿಪ್‌ನಲ್ಲಿ ಕಂಚು ಜಯಿಸಿದರು.

ನ.29: ನಗರ ಸಶಸ್ತ್ರ ಮೀಸಲು ಪಡೆ ತಂಡದವರು (ಸಿಎಆರ್‌) ಮೈಸೂರು ನಗರ ಪೊಲೀಸ್‌ ವಾರ್ಷಿಕ ಕ್ರೀಡಾಕೂಟದಲ್ಲಿ ‘ಸಮಗ್ರ’ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಡಿ.3: ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣದಲ್ಲಿ ನಡೆದ ಕೂಚ್‌ ಬಿಹಾರ್‌ ಟ್ರೋಫಿ 19 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತಂಡ ಉತ್ತರಾಖಂಡದ ವಿರುದ್ಧ ಇನಿಂಗ್ಸ್ ಮತ್ತು 47 ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸಿತು.

ಡಿ.9: ಓವೆಲ್‌ ಮೈದಾನದಲ್ಲಿ ನಡೆದ ಮೈಸೂರು ವಿಶ್ವವಿದ್ಯಾಲಯದ 94ನೇ ಅಂತರ ಕಾಲೇಜು ಅಥ್ಲೆಟಿಕ್ಸ್‌ ಕ್ರೀಡಾಕೂಟದಲ್ಲಿ ಸ್ನಾತಕೋತ್ತರ ಕ್ರೀಡಾ ಮಂಡಳಿ ಮಾನಸ ಗಂಗೋತ್ರಿ ಹಾಗೂ ಟೆರೇಷಿಯನ್‌ ಕಾಲೇಜು ಚಾಂಪಿಯನ್‌ ಪಟ್ಟ ಅಲಂಕರಿಸಿದವು.

ಡಿ.19: ಮಾನಸಗಂಗೋತ್ರಿಯ ಕ್ರೀಡಾಂಗಣದಲ್ಲಿ ಉತ್ತರ ಪ್ರದೇಶ ತಂಡವು ಕೂಚ್ ಬಿಹಾರ್ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ತಂಡದ ವಿರುದ್ಧ 92 ರನ್‌ಗಳ ಭರ್ಜರಿ ಜಯ ದಾಖಲಿಸಿತು.

ಡಿ.27: ಕೆಎಸ್‌ಸಿಎ ರಣಜಿ ಟ್ರೋಫಿ ತಂಡದಲ್ಲಿ ಮೈಸೂರಿನ ಎಸ್‌.ಕೆ.ನಿಖಿನ್ ಜೋಸ್‌ ಉಪನಾಯಕರಾದರೆ, ಎಂ.ವೆಂಕಟೇಶ್‌ ಹಾಗೂ ಕಿಶನ್‌ ಎಸ್‌.ಬೇದ್ರೆ ಸ್ಥಾನ ಪಡೆದರು.

ಪ್ರಜ್ವಲ್‌ ದೇವ್‌ ಮಿಂಚು: ಮೈಸೂರಿನ ಟೆನಿಸ್‌ ಆಟಗಾರ ಎಸ್‌.ಡಿ.ಪ್ರಜ್ವಲ್‌ ದೇವ್‌ ಐಟಿಎಫ್‌– ಮೈಸೂರು ಓಪನ್‌ ಟೆನಿಸ್‌ ಟೂರ್ನಿಯ ಸೆಮಿಫೈನಲ್‌ವರೆಗೂ ಪೈಪೋಟಿಯ ಪ್ರದರ್ಶನ ನೀಡಿ ಗಮನಸೆಳೆದರು. ನವೆಂಬರ್‌ನಲ್ಲಿ ಐಟಿಎಫ್‌ ಮುಂಬೈ ಓಪನ್‌ನಲ್ಲೂ ಅಮೆರಿಕಾ ಸಿನ್ಹಾ ಅವರೊಂದಿಗೆ ನಾಲ್ಕರ ಘಟ್ಟ ತಲುಪಿದ್ದರು. ಎಟಿಎಫ್‌ 615ನೇ ರ‍್ಯಾಂಕಿಂಗ್‌ ಪಡೆದಿರುವ ಅವರು ಸುಜಿತ್ ಸಚ್ಚಿದಾನಂದ್‌ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಭವಿಷ್ಯದಲ್ಲಿ ಮತ್ತಷ್ಟು ಸಾಧನೆ ಮಾಡುವ ಹಂಬಲ ಅವರದ್ದು.

‘ಚಿನ್ನದ ಮೀನು’ ತಾನ್ಯಾ: ವರ್ಷಾರಂಭದಲ್ಲಿ ದಕ್ಷಿಣ ವಲಯ ಈಜು ಚಾಂಪಿಯನ್‌ಷಿಪ್‌ನಲ್ಲಿ 3 ಚಿನ್ನ ಹಾಗೂ 1 ಬೆಳ್ಳಿ ಗೆದ್ದು ಸಂಚಲನ ಮೂಡಿಸಿದ ಮೈಸೂರಿನ ‘ಚಿನ್ನದ ಮೀನು’ ಎಸ್‌.ತಾನ್ಯಾ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ 2 ಚಿನ್ನ ಹಾಗೂ 1 ಕಂಚು ಗೆದ್ದು ದೇಶದಲ್ಲೂ ಮಿಂಚಿದರು. ಜೆ.ಪಿ.ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಈಜುಕೊಳದಲ್ಲಿ ಗ್ಲೋಬಲ್ ಸ್ಪೋರ್ಟ್ಸ್‌ ಅಸೋಸಿಯೇಷನ್‌ನಲ್ಲಿ ಅಭ್ಯಾಸವನ್ನು ನಡೆಸುವ ಅವರಿಗೆ ಸಂಸ್ಥೆಯ ಮುಖ್ಯ ಕೋಚ್‌ ಪವನ್‌ ಕುಮಾರ್‌ ತರಬೇತಿ ನೀಡುತ್ತಿದ್ದಾರೆ.

ಸಮಿತ್‌ ನೋಡಲು ಬಂದ ದ್ರಾವಿಡ್‌ ದಂಪತಿ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್ ಅವರು ಕೂಚ್‌ ಬಿಹಾರ್‌ ಟ್ರೋಫಿ ಪಂದ್ಯ ವೀಕ್ಷಿಸಲು ಬಂದಿದ್ದವರ ಆಕರ್ಷಣೆಯಾಗಿದ್ದರು. ತಮ್ಮ ಪುತ್ರ ಸಮಿತ್‌ ದ್ರಾವಿಡ್ ಆಟ ನೋಡಲು ಅವರು ಪತ್ನಿ ಡಾ.ವಿಜೇತಾ ಅವರೊಂದಿಗೆ ಬಂದಿದ್ದರು. ಮೈದಾನದ ಕಲ್ಲುಕಟ್ಟೆಯ ಮೇಲೆ ಕುಳಿತು ಅವರು ಪಂದ್ಯವನ್ನು ವೀಕ್ಷಿಸಿ ಗಮನಸೆಳೆದರು.

ಮೈಸೂರು ಹುಡುಗಿಯ ‘ಶುಭಾರಂಭ’: ಮೈಸೂರಿನ ಶುಭಾ ಸತೀಶ್ ನವಿ ಮುಂಬೈನ ಡಿ.ವೈ.ಪಾಟೀಲ್‌ ಕ್ರಿಕೆಟ್‌ ಅಂಗಳದಲ್ಲಿ ಡಿ.14ರಂದು ನಡೆದ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಪದಾರ್ಪಣೆಯನ್ನು ಚೆಂದದ ಅರ್ಧಶತಕದ ಮೂಲಕ ಅವಿಸ್ಮರಣೀಯಗೊಳಿಸಿಕೊಂಡರು.  ಎಡಗೈ ಬ್ಯಾಟರ್ ಶುಭಾ ಇಲ್ಲಿಯ ರಾಜರಾಜೇಶ್ವರಿ ನಗರ ನಿವಾಸಿ ಬೆಮೆಲ್‌ ಉದ್ಯೋಗಿ ಎನ್‌.ಸತೀಶ್‌ ಹಾಗೂ ಕೆ.ತಾರಾ ದಂಪತಿಯ ಪುತ್ರಿ. ಪ್ರಾದೇಶಿಕ ಶಿಕ್ಷಣ ಕೇಂದ್ರದ ಆವರಣದಲ್ಲಿರುವ ಡಿಎಂಎಸ್‌ ಶಾಲೆಯಲ್ಲಿ ಪಿಯು ಲಕ್ಷ್ಮಿಹಯಗ್ರೀವ ಕಾಲೇಜಿನಲ್ಲಿ ಬಿ.ಕಾಂ ಓದುತ್ತಿದ್ದಾರೆ. ಆರು ತಿಂಗಳ ಹಿಂದಷ್ಟೇ ನೈರುತ್ಯ ರೈಲ್ವೆ ಉದ್ಯೋಗಿಯಾಗಿ ಆಯ್ಕೆಯಾಗಿದ್ದಾರೆ.

ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್‌ ದ್ರಾವಿಡ್ ಪತ್ನಿ ಡಾ.ವಿಜೇತಾ ಜೊತೆ ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾದ ಕೂಚ್‌ ಬಿಹಾರ್‌ ಟ್ರೋಫಿ 19 ವರ್ಷದೊಳಗಿನವರ ಟೂರ್ನಿಯಲ್ಲಿ ಪುತ್ರ ಸಮಿತ್‌ ಆಟ ವೀಕ್ಷಿಸಿದರು
ಶುಭಾ ಸತೀಶ್
ಮೈಸೂರು ದಸರಾ ಕುಸ್ತಿ ಟೂರ್ನಿ ವಿಜೇತರು (ಎಡದಿಂದ): ಸುನಿಲ್ ಪಡುತಾರೆ (ದಸರಾ ಕಂಠೀರವ) ರೋಹನ್ ಗಬಾಡೆ (ದಸರಾ ಕೇಸರಿ) ಸಂಜೀವ್‌ ಕೊರವರ (ದಸರಾ ಕಿಶೋರ) ಹಾಗೂ ಲಕ್ಷ್ಮಿ ಪಾಟೀಲ (ದಸರಾ ಕಿಶೋರಿ)
ಮೈಸೂರು ಸಾಹಿತ್ಯ ಸಂಭ್ರಮದಲ್ಲಿ ವಿವಿಎಸ್ ಲಕ್ಷ್ಮಣ್ ಮಾತು
ಮೈಸೂರಿನ ಎಂಟಿಸಿ ಅಂಗಳದಲ್ಲಿ ನಡೆದ ಐಟಿಎಫ್– ಮೈಸೂರು ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತದ ಪ್ರಜ್ವಲ್ ದೇವ್ ಆಟದ ವೈಖರಿ
ದಸರಾ ಕ್ರೀಡಾಕೂಟದಲ್ಲಿ 5000 ಮೀ ಓಟದಲ್ಲಿ ಸ್ಪರ್ಧಿಗಳು  
‘ದಸರಾ ಕ್ರೀಡಾಕೂಟ– ಸಿ.ಎಂ. ಕಪ್– 2023’ ಉದ್ಘಾಟನೆಯಲ್ಲಿ ಕ್ರೀಡಾಪಟುಗಳಿಂದ ಕ್ರೀಡಾಜ್ಯೋತಿ ಸ್ವೀಕರಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.