ADVERTISEMENT

ರಾಜ್ಯದ 271 ಕನ್ನಡ ಶಾಲೆಗಳಲ್ಲಿ ದಾಖಲಾತಿ ಶೂನ್ಯ

ಕರ್ನಾಟಕ ರಾಜ್ಯೋತ್ಸವದಲ್ಲಿ ಶಾಸಕ ಎನ್‌.ಮಹೇಶ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2018, 19:42 IST
Last Updated 1 ನವೆಂಬರ್ 2018, 19:42 IST
ಕರ್ನಾಟಕ ರಾಜ್ಯೋತ್ಸವದಲ್ಲಿ ಎನ್. ಮಹೇಶ್ ಮಾತನಾಡಿದರು
ಕರ್ನಾಟಕ ರಾಜ್ಯೋತ್ಸವದಲ್ಲಿ ಎನ್. ಮಹೇಶ್ ಮಾತನಾಡಿದರು   

ಯಳಂದೂರು: 2017–18ನೇ ಸಾಲಿನಲ್ಲಿ ರಾಜ್ಯದ 271 ಕನ್ನಡ ಮಾಧ್ಯಮ ಶಾಲೆಗಳಲ್ಲಿ ದಾಖಲಾತಿ ಶೂನ್ಯವಾಗಿದೆ ಶಾಸಕ ಎನ್‌.ಮಹೇಶ್‌ ಇಲ್ಲಿ ಹೇಳಿದರು.

ಸರ್ಕಾರಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ‘ಕರ್ನಾಟಕ ರಾಜ್ಯೋತ್ಸವ’ದಲ್ಲಿ ಮಾತನಾಡಿದರು.

ಆರ್‌ಟಿಇ ಕಾಯ್ದೆ ಜಾರಿಯಿಂದ ಶೇ 25ರಷ್ಟು ಮಕ್ಕಳು ಖಾಸಗಿ ಶಾಲೆಗೆ ಪ್ರವೇಶ ಪಡೆಯುತ್ತಾರೆ. ಇದರಿಂದ ಸರ್ಕಾರಕ್ಕೆ ಹೆಚ್ಚುವರಿಯಾಗಿ ವಾರ್ಷಿಕ ₹700 ಕೋಟಿ ಹೊರೆ ಬೀಳುತ್ತಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು. ಕ್ಷೇತ್ರ ವ್ಯಾಪ್ತಿಯ ಶಾಲಾ ಅಭಿವೃದ್ಧಿಗೆ ₹8 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದರು.

ADVERTISEMENT

ಕನ್ನಡಿಗರು ಸರ್ವ ಭಾಷಾಮಯಿ ಸರಸ್ವತಿಯನ್ನು ಪ್ರೀತಿಸುವ ಮೂಲಕ ವಿಶ್ವಮಾನ್ಯರಾಗಿದ್ದಾರೆ. ಕನ್ನಡ ಭಾಷೆಯನ್ನು ಕಲಿತವರಿಗೆ ಜಗತ್ತಿನ ಯಾವುದೇ ಭಾಷೆಯನ್ನು ಸುಲಭವಾಗಿ ಅರಿಯುವ ಕಲೆ ಸಿದ್ಧಿಸುತ್ತದೆ. ಅದೇ ರೀತಿ ಇಲ್ಲೇ ಬೀಡು ಬಿಟ್ಟಿರುವ ಬಹುಭಾಷಿಗರು ಕನ್ನಡವನ್ನು ಕಡ್ಡಾಯವಾಗಿ ಕಲಿಯಬೇಕು. ಕನ್ನಡ ನಾಡಿನಲ್ಲಿ ಒಡನಾಡುವ ಇತರ ರಾಜ್ಯದವರಿಗೆ ಭಾಷಾ ಸಂಸ್ಕೃತಿಯನ್ನು ಕಲಿಸುವ ಪ್ರಯತ್ನ ಮಾಡಬೇಕು ಎಂದರು.

ಮುಖ್ಯ ಭಾಷಣಕಾರ ಎನ್. ಶಿವಕುಮಾರಸ್ವಾಮಿ, ‘ವಿಶ್ವದಲ್ಲಿ ಸಾವಿರಾರು ಭಾಷೆಗಳಿವೆ. ಇವುಗಳಲ್ಲಿ ಸುಂದರ ಲಿಪಿ ಕನ್ನಡ. ವಚನ, ದಾಸ ಸಾಹಿತ್ಯದ ಮೂಲಕ ನಮ್ಮ ಭಾಷೆಗೆ ಸಾಂಸ್ಕೃತಿಕ ಚೌಕಟ್ಟು ರೂಪಿತವಾಗಿದೆ. ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಕನ್ನಡ
ಶಾಲೆಗಳನ್ನು ಪೋಷಿಸುವ ಕೆಲಸವನ್ನು ಸರ್ಕಾರ ಮಾಡಬೇಕು’ ಎಂದರು.

ತಾ.ಪಂ ಅಧ್ಯಕ್ಷ ಎಂ.ನಿರಂಜನ್, ಉಪಾಧ್ಯಕ್ಷೆ ಮಲ್ಲಾಜಮ್ಮ, ಸದಸ್ಯರಾದ ನಾಗರಾಜು, ನಂಜುಂಡಯ್ಯ, ಸಿದ್ದರಾಜು, ಪಲ್ಲವಿ, ಶಾರದಾಂಬಾ, ಭಾಗ್ಯಾ, ಪ.ಪಂ. ಅಧ್ಯಕ್ಷ ನಿಂಗರಾಜು, ಉಪಾಧ್ಯಕ್ಷ ಭೀಮಪ್ಪ, ಸದಸ್ಯ ವೈ.ವಿ. ಉಮಾಶಂಕರ, ತಹಶೀಲ್ದಾರ್ ಗೀತಾ ಹುಡೇದ, ಇಒ ಬಿ.ಎಸ್. ರಾಜು, ಬಿಇಒ ವಿ. ತಿರುಮಲಾಚಾರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.