ಮೈಸೂರು: ಶ್ರೀರಂಗಪಟ್ಟಣ ದಸರೆಯಲ್ಲಿ ಅಂಬಾರಿ ಹೊತ್ತು, ಸೌಮ್ಯ ಗಾಂಭೀರ್ಯದಿಂದಲೇ ಆನೆಪ್ರಿಯರ ಮನಗೆದ್ದಿರುವ ‘ಮಹೇಂದ್ರ’ ಗುರುವಾರ ಅರಮನೆ ಪ್ರವೇಶಿಸಿದ. ಗಜಪಡೆಯ ಎರಡನೇ ತಂಡದ ಐದೂ ಆನೆಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬರಮಾಡಿಕೊಳ್ಳಲಾಯಿತು.
ಮತ್ತಿಗೋಡು ಆನೆ ಶಿಬಿರದಿಂದ ಲಾರಿಯಲ್ಲಿ ಬಂದ ‘ಮಹೇಂದ್ರ’ (41) ಅರಮನೆಯನ್ನು ನೋಡುತ್ತಿದ್ದಂತೆ ಸೊಂಡೆಲೆತ್ತಿ ನಮಸ್ಕರಿಸಿದ. ಅವನನ್ನು ನೋಡುತ್ತಿದ್ದಂತೆ ನೆರೆದಿದ್ದವರು, ಚಪ್ಪಾಳೆಯ ಮಳೆಗಳೆರೆದು ಜಯಕಾರ ಹಾಕಿದರು. ತನ್ನದೇ ಶಿಬಿರರ ಹಿರಿಯ, ಅಂಬಾರಿ ಆನೆ ‘ಅಭಿಮನ್ಯು’ ನೇತೃತ್ವದ ತಂಡವನ್ನು ಸೇರಿಕೊಂಡನು.
ಅವನೊಂದಿಗೆ 14 ವರ್ಷಗಳಿಂದ ದಸರೆಯಲ್ಲಿ ಭಾಗವಹಿಸುತ್ತಿರುವ ದುಬಾರೆ ಆನೆ ಶಿಬಿರದ ಅನುಭವಿ ‘ಪ್ರಶಾಂತ’ (51), ಎರಡು ವರ್ಷದಿಂದ ದಸರೆಯಲ್ಲಿ ಪಾಲ್ಗೊಂಡಿರುವ ‘ಸುಗ್ರೀವ’ (42), ದೊಡ್ಡ ಹರವೆ ಆನೆ ಶಿಬಿರ ಲಕ್ಷ್ಮಿ (53) ಹಾಗೂ ರಾಮಾಪುರ ಆನೆ ಶಿಬಿರ ಹಿರಣ್ಯ (47) ಜೊತೆಯಾದರು.
ಐದೂ ಆನೆಗಳನ್ನು ಲಾರಿಗಳಲ್ಲಿ ನೇರವಾಗಿ ಅರಮನೆ ಆನೆ ಬಿಡಾರದ ಸ್ನಾನದ ಕೊಳಕ್ಕೆ ಕರೆತರಲಾಯಿತು. ಎಲ್ಲ ಆನೆಗಳಿಗೆ ಮಜ್ಜನ ಮಾಡಿಸಲಾಯಿತು. ನಂತರ ಜಯಮಾರ್ತಾಂಡ ದ್ವಾರಕ್ಕೆ ಕರೆತರಲಾಯಿತು. ಮಹೇಂದ್ರನ ಇಕ್ಕೆಲದಲ್ಲಿ ಹಿರಣ್ಯ, ಲಕ್ಷ್ಮಿ ಇದ್ದರೆ, ಪ್ರಶಾಂತ ಹಾಗೂ ಸುಗ್ರೀವ ನಿಂತಿದ್ದರು.
ಅರಮನೆ ಅರ್ಚಕ ಪ್ರಹ್ಲಾದ ರಾವ್ ಅವರು ಆನೆಗಳ ಪಾದಗಳನ್ನು ತೊಳೆದು ಸೇವಂತಿಗೆ ಹೂ ಕಟ್ಟಿದರು. ಮಾವುತರು ಆನೆಗಳ ಹೂ ಹಾರದಿಂದ ಅಲಂಕರಿಸಿದರು. ನಂತರ ಹಣೆಗೆ ಗಂಧ ಲೇಪಿಸಿ ‘ಓಂ’ಕಾರ ಬರೆದು, ಸಂಜೆ 5.45ಕ್ಕೆ ‘ಗಜಪೂಜೆ’ ಸಲ್ಲಿಸಲಾಯಿತು. ಬಳಿಕ ಎಲ್ಲಾ ಆನೆಗಳಿಗೂ ಕಬ್ಬು–ಬೆಲ್ಲ, ಪಂಚಫಲ, ಕಡುಬು, ಚಕ್ಕುಲಿ, ನಿಪ್ಪಟ್ಟು, ಹೋಳಿಗೆ, ಕಲ್ಲು ಸಕ್ಕರೆ, ಮೋದಕ ನೈವೇದ್ಯ ನೀಡಲಾಯಿತು. ಗಣಪತಿ ಅರ್ಚನೆ ಜೊತೆ ಚಾಮುಂಡೇಶ್ವರಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಮಾವುತರು, ಕಾವಾಡಿಗರು ಕೈಮುಗಿದರು.
ಯದುಕುಮಾರ್ ಮತ್ತು ತಂಡದ 10 ಮಂದಿ ಸ್ಯಾಕ್ಸೋಫೋನ್ ಹಾಗೂ ತವಿಲ್ ನುಡಿಸುತ್ತಾ ಅರಮನೆ ಆನೆ ಬಿಡಾರದವರೆಗೂ ಕರೆದೊಯ್ದರು.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿಪ್ರಿಯಾ, ಡಿಸಿಎಫ್‌ಗಳಾದ ಐ.ಬಿ.ಪ್ರಭುಗೌಡ, ಚಂದ್ರಶೇಖರ್, ಅರಮನೆ ಮಂಡಳಿ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ವೈದ್ಯ ಮುಜೀಬ್ ರೆಹಮಾನ್, ಆರ್‌ಎಫ್‌ಒ ಸಂತೋಷ್ ಹೂಗಾರ್ ಪಾಲ್ಗೊಂಡಿದ್ದರು.
ಮೊದಲ ತಂಡದಲ್ಲಿ ಅಂಬಾರಿ ಆನೆ ಅಭಿಮನ್ಯು ಜೊತೆ ಭೀಮ, ಕಂಜನ್, ಏಕಲವ್ಯ, ರೋಹಿತ್, ಧನಂಜಯ, ಗೋಪಿ, ವರಲಕ್ಷ್ಮಿ, ಲಕ್ಷ್ಮಿ ಆನೆಗಳು ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ವೀರನಹೊಸಹಳ್ಳಿಯಿಂದ ಆ.21ರಂದು ಮೈಸೂರಿನ ಅರಣ್ಯ ಭವನಕ್ಕೆ ಬಂದಿದ್ದವು. ಆ.23ರಂದು ಗಜಪಡೆ ಮೊದಲ ತಂಡ ಅರಮನೆ ಪ್ರವೇಶಿಸಿತ್ತು.
‘ಮಹೇಂದ್ರ’ ನೇತೃತ್ವದ ಗಜಪಡೆಯ ಎರಡನೇ ತಂಡವನ್ನು ಸ್ವಾಗತಿಸಲಾಗಿದ್ದು ಐದು ಆನೆಗಳೂ ಆರೋಗ್ಯವಾಗಿವೆ. ಸೆ.6ರ ಬೆಳಿಗ್ಗೆ 7.30ಕ್ಕೆ ತೂಕ ಪರೀಕ್ಷೆ ನಡೆಸಲಾಗುವುದು’ ಎಂದು ಡಿಸಿಎಫ್ (ವನ್ಯಜೀವಿ) ಐ.ಬಿ.ಪ್ರಭುಗೌಡ ತಿಳಿಸಿದರು. ‘ಮೊದಲ ತಂಡದ 9 ಆನೆಗಳು ನಗರದ ವಾತಾವರಣಕ್ಕೆ ಹೊಂದಿಕೊಂಡಿದ್ದು ನಡಿಗೆ ಹಾಗೂ ಭಾರ ಹೊರಿಸುವ ತಾಲೀಮಿನಲ್ಲಿ ಸುಗಮವಾಗಿ ಪಾಲ್ಗೊಂಡಿವೆ. ಎರಡನೇ ತಂಡಕ್ಕೆ ನಾಳೆ ವಿಶ್ರಾಂತಿ ನೀಡಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.